ಪುತ್ತೋಳಿ ಅಲಿಯಾಸ್ ರತಿ aka ಆಅಯೇಷಾ ಬೆನ್ನು ಹತ್ತಿ
ಪಾಟ್ನಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತಳಾಗಿರುವ ಮಹಿಳೆ ಆಯೇಷಾ ಬಾನು ಯಾರು? ಎಂದು ಹುಡುಕುತ್ತಾ ಹೋದರೆ ಆಕೆ ಮೂಲತಃ ಕೊಡಗಿನವಳೆಂಬುದು ಬೆಳಕಿಗೆ ಬಂದಿದೆ.
ಆಯೇಷಾ ಬಾನು ಮೂಲತಃ ವಿರಾಜಪೇಟೆ ಸಮೀಪದ ದೇವಣಗಿರಿ ಗ್ರಾಮದ ಶ್ರೀಮತಿ ಕಾವೇರಮ್ಮ ಎಂಬವರ 8 ಜನ ಮಕ್ಕಳಲ್ಲಿ ಕೊನೆಯವಳು. ಈಕೆಯ ಹುಟ್ಟು ಹೆಸರು ಪುತ್ತೋಳಿ ಆಲಿಯಾಸ್ ರತಿ.
ದೇವಣಗೇರಿಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದು, ಅನಿರೀಕ್ಷಿತವಾಗಿ ಪರಿಚಯವಾದ ಮಂಗಳೂರು ಮೂಲದ ಜುಬೇರ್ ಎಂಬಾತನೊಂದಿಗೆ ಈಕೆ ನಾಪತ್ತೆ ಗ್ರಾಮದಿಂದ ನಾಪತ್ತೆಯಾಗಿದ್ದಳು. ಆತನನ್ನು ಮದುವೆಯಾದ ಬಳಿಕ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿದಳಲ್ಲದೆ, ತನ್ನ ಹೆಸರನ್ನು ಆಯೇಷಾ ಬಾನು ಎಂಬುದಾಗಿ ಬದಲಾಯಿಸಿಕೊಂಡಿದ್ದಳು.
ಜುಬೇರ್ ಹೊರದೇಶದಲ್ಲಿದ್ದು ಬಂದಿದ್ದು ಮಂಗಳೂರಿನ ಪಂಜಿಮೊಗರು ವಾರ್ಡಿನ ಮಂಜೊಟ್ಟಿ ಎಂಬಲ್ಲಿ ಮನೆ ಖರೀದಿಸಿದ್ದ ಈ ದಂಪತಿಗಳು 8ನೇ ತರಗತಿಯಲ್ಲಿ ಓದುತ್ತಿರುವ ಪುತ್ರಿ, ಪುತ್ರ ಅಮೀರ್ ಹಾಗೂ 4 ತಿಂಗಳ ಪ್ರಾಯದ ಮಗುವಿನೊಂದಿಗೆ ವಾಸವಾಗಿದ್ದರು.
ಪತಿ ಜುಬೇರ್ ಬೀಡಿ ವಹಿವಾಟನ್ನು ನಡೆಸುತ್ತಿದುದ್ದಲ್ಲದೆ, ಮತ್ತೊಂದು ಮದುವೆಯನ್ನು ಆಗಿದ್ದರಿಂದ ದಂಪತಿಗಳಲ್ಲಿ ವಿರಸ ಮೂಡಿತ್ತು. ಸಂಘಟನೆಯೊಂದರ ಮಧ್ಯಸ್ಥಿಕೆಯಿಂದಾಗಿ ಪತಿ-ಪತ್ನಿ ನಡುವೆ ರಾಜಿ ಸಂದಾನ ಕೂಡ ನಡೆದಿತ್ತೆನ್ನಲಾಗಿದೆ.
ಅತ್ಯಂತ ಸೌಮ್ಯ ಸ್ವಭಾವದವಳಾದ ಆಯೇಷಾ ಬಾನು ಪತಿಯ ಚಿತಾವಣೆಯೋ ಅಥವಾ ಹಣದ ದುರಾಸೆಯಿಂದಲೋ ಅರಿಯದೆ ದೇಶ ದ್ರೋಹಿಗಳಿಗೆ ಸಹಕಾರ ನೀಡಿದ ಆರೋಪಕ್ಕೆ ಇದೀಗ ಗುರಿಯಾಗಿ ಕಂಬಿ ಎಣಿಸುತ್ತಿದ್ದಾಳೆ.
ಮಂಗಳೂರಿನ ಪಂಪನಕಟ್ಟೆಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಆಯೇಷಾಬಾನು ಹೆಸರಿನಲ್ಲಿ ತೆರೆಯಲಾಗಿದ್ದ ಖಾತೆಯಲ್ಲಿ ಅಲ್ಪಾವಧಿಯಲ್ಲಿ ಸುಮಾರು 2 ಕೋಟಿ ರೂ.ಗಳಷ್ಟು ವಹಿವಾಟು ನಡೆದಿರುವುದು ಗೋಚರಿಸಿದೆ. ಈ ಖಾತೆಗೆ ಪಾಕಿಸ್ತಾನದಿಂದ ಸಂದಾಯವಾಗುತ್ತಿದ್ದ ಹಣವನ್ನು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರರು ಎಟಿಎಂ ಮೂಲಕ ಡ್ರಾ ಮಾಡಿರುವುದು ಕೂಡ ತನಿಖೆಯಿಂದ ರುಜುವಾತಾಗಿದೆ. ಆಯೇಷಾಬಾನು ಉಗ್ರ ಜಾಲದ ಬಗ್ಗೆ ಮುಂದೆ ಓದಿ...

ಬ್ಯಾಂಕ್ ಖಾತೆಗಳ ವಿವರ
ಆಯೇಷಾಬಾನು ಕೇವಲ ಮಂಗಳೂರು ಮಾತ್ರವಲ್ಲದೆ, ಕೊಡಗಿನ ವಿರಾಜಪೇಟೆ , ಬಿಹಾರ್ ರಾಜ್ಯದ ಕೆಲವೆಡೆ ಬೇನಾಮಿ ಹೆಸರಿನಲ್ಲಿ 35 ಕ್ಕೂ ಅಧಿಕ ಬ್ಯಾಂಕ್ ಖಾತೆಗಳನ್ನು ಹೊಂದಿರುವುದಲ್ಲದೇ, ಸುಮಾರು 5 ಕೋಟಿಗೂ ಅಧಿಕ ವಹಿವಾಟು ನಡೆದಿದೆ.
ಅಷ್ಟೇನು ಸ್ಥಿತಿವಂತರಲ್ಲದ ಮತ್ತು ಬೀಡಿ ವಹಿವಾಟು ನಡೆಸುತ್ತಿದ್ದ ಈ ದಂಪತಿಗಳಿಗೆ ಇಷ್ಟೊಂದು ಮೊತ್ತ ಎಲ್ಲಿಂದ ಸಂದಾಯವಾಗಿದೆ ಎಂಬುದನ್ನು ತನಿಖಾ ದಂಡ ಜಾಲಾಡಿದಾಗ ಹಣದ ಮೂಲ ಪಾಕಿಸ್ತಾನ ಎಂಬುದು ದೃಢಪಟ್ಟಿದ್ದಲ್ಲದೆ, ದೇಶದ್ರೋಹಿ ಕೃತ್ಯ ಎಸಗುವ ದುಷ್ಕರ್ಮಿಗಳಿಗೆ ಪಾವತಿಸಲು ಈ ಹಣ ಬಳಕೆಯಾಗುತ್ತಿತ್ತು ಎಂಬುದು ವಿಚಾರಣೆ ಸಂದರ್ಭ ಗೋಚರಿಸಿದೆ.
ಬಂಧತ ಆಯೇಷಾಬಾನು ಆಕೆಯ ಪತಿ ಜುಬೇರ್ ಹಾಗೂ ಕೇವಲ 4 ತಿಂಗಳ ಪ್ರಾಯದ ಮಗುವನ್ನು ಪಣಂಬೂರು ಠಾಣೆ ಪೊಲೀಸರು ಬುಧವಾರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ ಬಳಿಕ ಮಂಗಳೂರಿನ 3ನೇ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಹಾಜರು ಪಡಿಸುವುದರೊಂದಿಗೆ ಹೆಚ್ಚಿನ ವಿಚಾರಣೆಗೆ ತಮ್ಮ ಸುಪರ್ದಿಗೆ ನೀಡುವಂತೆ ಕೋರಿದ್ದಾರೆ.

ಮೃದು ಸ್ವಭಾವದವಳು !
ಆಯೇಷಾಬಾನು ಅವರ ಸಹೋದರ ದೇವಣಗೇರಿ ಗ್ರಾಮದ ಮೋಟಪ್ಪ ತಮ್ಮ ಸಹೋದರಿ ರತಿ ಅತ್ಯಂತ ಮೃದು ಸ್ವಭಾವದವಳಾಗಿದ್ದಳು. ದೇಶದ್ರೋಹಿ ಕೃತ್ಯಕ್ಕೆ ಸಹಕಾರ ನೀಡಿದ್ದಾಳೆಂಬುದನ್ನು ಯೋಚಿಸಲು ಸಾಧ್ಯವಿಲ್ಲ.
ಕಳೆದ 18 ವರ್ಷಗಳ ಹಿಂದೆ ಮಂಗಳೂರು ಮೂಲದ ಜುಬೇರ್ ಆಲಿಯಾಸ್ ಜುಬಿ ಎಂಬಾತನ ಪರಿಚಯವಾಗಿ ಆತನೊಂದಿಗೆ ಓಡಿಹೋಗಿದ್ದಲ್ಲದೇ, ಮತಾಂತರಗೊಂಡು ಹೆಸರನ್ನು ಬದಲಾಯಿಸಿಕೊಂಡಿದ್ದಳು. ಆಗಾಗ ವಿರಾಜಪೇಟೆಗೆ ಬರುತ್ತಿದ್ದ ಆಯೇಷಾ ಬಾನು ದೇವಣಗೇರಿ ಗ್ರಾಮದತ್ತ ಬಂದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಕಳೆದ ಏಪ್ರಿಲ್‍ನಲ್ಲಿ ವಿರಾಜಪೇಟೆಯಲ್ಲಿ ನಡೆದ ಮದುವೆಯೊಂದರಲ್ಲಿ ಪತಿ ಸಹಿತ ಪಾಲ್ಗೊಂಡು ವಾಪಸ್ಸು ಮಂಗಳೂರಿಗೆ ತೆರಳಿದ್ದಳು ಎಂದು ತಿಳಿಸಿದ್ದಾರೆ.ಆಕೆಯ ಪತಿ ಜುಬೇರ್ ಎಂಬಾತನೊಂದಿಗೆ ತಮಗೆ ಯಾವುದೇ ಸಂಪರ್ಕವಿಲ್ಲ. ಆದರೆ, ಅನಿರೀಕ್ಷಿತವಾಗಿ ಯಾವುದಾದರೂ ಸಮಾರಂಭದಲ್ಲಿ ಎದುರಾಗುತ್ತಿದ್ದ ಆಯೇಷಾ ಬಾನು ಕೆಲಹೊತ್ತು ಮಾತ್ರ ಮಾತುಕತೆ ನಡೆಸುತ್ತಿದ್ದಳು. ದೇವಣಗೇರಿ ಪ್ರಾಥಮಿಕ ಶಾಲೆಯಲ್ಲಿ ಓದಿರುವ ತಮ್ಮ ಸಹೋದರಿ ಇಂತಹ ಹೀನಕೃತ್ಯದಲ್ಲಿ ಶಾಮೀಲಾಗಿದ್ದಾಳೆಂಬುದು ನೋವಿನ ಸಂಗತಿ ಎಂದು ಮೋಟಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.

ಉಗ್ರರ ಜತೆ ಹಳೆ ನಂಟು
ಕೊಡಗಿನಲ್ಲೂ ಭಯೋತ್ಪಾದಕರ ಕರಿನೆರಳು ಹರಡಿರುವುದು ಈ ಹಿಂದೆಯೇ ಬೆಳಕಿಗೆ ಬಂದಿತ್ತು. ಕಳೆದ ಎರಡು ವರ್ಷಗಳ ಹಿಂದೆ ಲಷ್ಕರ್ ಇ ತೋಯ್ಬಾ ಸಂಘಟನೆಯ ನಿರ್ದೇಶನದ ಮೇರೆ ಬೆಂಗಳೂರಿನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಕೊಡಗಿನ ಲಿಂಕ್ ಇರುವುದು ಗೊತ್ತಾಗಿತ್ತು. ಮೂಲತಃ ಕೇರಳದವನಾದ ತಡಿಯಂಡವೀಡ್ ನಜೀರ್ ಎಂಬಾತ ಶುಂಠಿ ಕೃಷಿ ನೆಪದಲ್ಲಿ ಸೋಮವಾರಪೇಟೆ ಸಮೀಪದ ಹೊಸತೋಟ, ಲಕ್ಕೆರೆ ಪೈಸಾರಿ ಎಂಬಲ್ಲಿ ಬಿಡಾರ ಹೂಡಿ ಬೆಂಗಳೂರು ಸರಣಿ ಬಾಂಬ್ ಸ್ಪೋಟಕ್ಕೆ ಸ್ಕೆಚ್ ಹಾಕಿದ್ದುದು ವಿಚಾರಣೆ ಸಂದರ್ಭ ಬೆಳಕಿಗೆ ಬಂದಾಗ ನಜೀರ್‍ನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು.

ಆಯೇಷಾ ಅವರ ಪಾತ್ರ
ನಜೀರ್ ನನ್ನು ಭೇಟಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೇರಳದ ಪಿ.ಡಿ.ಪಿ.ಪಕ್ಷದ ಮುಖಂಡ ಅಬ್ದುಲ್ ನಾಸೀರ್ ಮದನಿ ಎಂಬವರನ್ನು ಪೊಲೀಸರು ಬಂಧಿಸಿದ್ದು, ಅವರಿಬ್ಬರು ವಿಚಾರಣಾಧೀನ ಖೈದಿಗಳಾಗಿ ಜೈಲಿನಲ್ಲಿದ್ದಾರೆ. ಈ ಎಲ್ಲ ಅಂಶಗಳನ್ನು ಅವಲೋಕಿಸಿದರೆ, ಕೊಡಗು ಕೂಡ ಭಯೋತ್ಪಾದಕರ ಹೆಜ್ಜೆ ಗುರುತಿಗೆ ಸಾಕ್ಷಿಯಾಗಿರುವುದು ಕಂಡುಬಂದಿದೆ. ಈಗ ತನಿಖೆಯ ನಂತರ ಆಯೇಷಾ ಅವರ ಪಾತ್ರ ಪಾಟ್ನಾ ಸರಣಿ ಸ್ಫೋಟದಲ್ಲಿ ಏನು? ಎಂಬುದು ತಿಳಿಯಲಿದೆ.












Click it and Unblock the Notifications