ಅಕ್ಟೋಬರ್ 14 ರಂದು ಮಂಗಳೂರಿನಲ್ಲಿ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆ
ಮಂಗಳೂರು, ಅಕ್ಟೋಬರ್. 11: ಮಂಗಳೂರಿನ ಪರಿವರ್ತನಾ ಚಾರಿಟಬಲ್ ಸಂಸ್ಥೆಯ ವತಿಯಿಂದ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆ ಏರ್ಪಡಿಸಲಾಗಿದೆ. ಅಕ್ಟೋಬರ್ 14 ರಂದು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಈ ಸೌಂದರ್ಯ ಸ್ಪರ್ಧೆ ಜರುಗಲಿದೆ.
ರಾಜ್ಯದಲ್ಲಿ ಪ್ರಥಮ ಬಾರಿಗೆ ನಡೆಯಲಿರುವ ಈ ಸೌಂದರ್ಯ ಸ್ಪರ್ಧೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಮಂಗಳೂರು ದಸರಾ ಮಹೋತ್ಸವ ಉದ್ಘಾಟನೆಗೆ ಬರಲಿರುವ ಕುಮಾರಸ್ವಾಮಿ ಈ ಕಾರ್ಯಕ್ರಮದ ಉದ್ಘಾಟನೆಯನ್ನೂ ನೆರವೇರಿಸುವರು.
ಈ ಕುರಿತು ಮಾಹಿತಿ ನೀಡಿದ ಪರಿವರ್ತನಾ ಟ್ರಸ್ಟ್‌ನ ಸಂಸ್ಥಾಪಕಿ ವಾಯ್ಲೆಟ್ ಪಿರೇರ, ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಒಂದು ಹೊಸ ಪ್ರಯತ್ನಕ್ಕೆ ಪರಿವರ್ತನಾ ಚಾರಿಟಬಲ್ ಟ್ರಸ್ಟ್ ಕೈ ಹಾಕಿದೆ.

ಸ್ಪರ್ಧೆಯಲ್ಲಿ ಮಂಗಳಮುಖಿಯರು ತಮ್ಮ ಸೌಂದರ್ಯ ಪ್ರದರ್ಶನದೊಂದಿಗೆ ರಾಂಪ್ ವಾಕ್ ಮಾಡಲಿದ್ದಾರೆ. ಫ್ಯಾಷನ್ ಎಬಿಸಿಡಿ ಹಾಗೂ ಸ್ಥಳೀಯ ಚಾನೆಲ್ ಸ್ಪರ್ಧೆಗೆ ಸಹಯೋಗ ನೀಡಲಿವೆ. ಕಳೆದ ವರ್ಷ ಹರ್ಯಾಣದ ಗುರ್ಗಾಂವ್ ನಲ್ಲಿ ಮಂಗಳಮುಖಿಯೋರ್ವರು ಇತರ 16 ಸುಂದರಿಯರ ಮಧ್ಯ ಟ್ರಾನ್ಸ್ ಕ್ವಿನ್ ಇಂಡಿಯಾ ಆಗಿ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದರು. ಅಂದು ದೇಶದಲ್ಲೇ ಪ್ರಥಮವಾಗಿ ಮಂಗಳಮುಖಿಯೊಬ್ಬರು ಸೌಂದರ್ಯ ಸ್ಪರ್ಧೆ ಗೆದ್ದರು ಎಂದು ವಾಯ್ಲೆಟ್ ಪಿರೇರ ತಿಳಿಸಿದರು.

ಅದರ ಬಳಿಕ ಥಾಯ್ಲೆಂಡ್ ನಲ್ಲಿ ಮಾರ್ಚ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶವನ್ನು ಪ್ರತಿನಿಧಿಸಿದ ಕೀರ್ತಿ ರೀನಾ ರೈಯವರಿಗೆ ಸಲ್ಲುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.












Click it and Unblock the Notifications