ಹರೇಕಳದಲ್ಲಿ ಪದ್ಮಶ್ರೀ ಪುರಸ್ಕೃತರ ಸಮಾಗಮ; ನಾಡಿಗೆ ಸಾಮರಸ್ಯದ ಸಂದೇಶ ಕಳುಹಿಸಿದ ದಿಗ್ಗಜರು
ಮಂಗಳೂರು, ನವೆಂಬರ್ 13: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಮನೆಗೆ ವೃಕ್ಷಮಾತೆ ತುಳಸಿ ಗೌಡ ಭೇಟಿ ನೀಡಿದ್ದಾರೆ. ಇಬ್ಬರು ಪದ್ಮಶ್ರೀ ಪುರಸ್ಕೃತರ ಸಮಾಗಮ ನಾಡಿಗೆ ಸಾಮರಸ್ಯದ ಸಂದೇಶ ನೀಡಿದ್ದು, ಹರೇಕಳ ಎಂಬ ಸಣ್ಣ ಊರು ಈ ಅಪೂರ್ವ ಘಳಿಗೆಗೆ ಸಾಕ್ಷಿಯಾಗಿದೆ.
ಹರೇಕಳ ಹಾಜಬ್ಬರ ಮನೆಗೆ ಮತ್ತು ಶಾಲೆಗೆ ಭೇಟಿ ನೀಡಿದ ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ, ಹಾಜಬ್ಬರ ಶಾಲೆಗೆ ಆರ್ಥಿಕ ನೆರವು ನೀಡಿದ್ದಾರೆ.
ಪದ್ಮಶ್ರೀ ಪುರಸ್ಕೃತ, ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದ ಮೇಲೆ, ಹಾಜಬ್ಬರ ಖ್ಯಾತಿ ರಾಷ್ಟ್ರವ್ಯಾಪಿ ವಿಸ್ತರಿಸಿದೆ. ಹಾಜಬ್ಬರು ಪ್ರತಿದಿನ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದು, ಪ್ರತಿದಿನ ದೇಶದ ವಿವಿಧ ಭಾಗಗಳಿಂದ ನೂರಾರು ಅಭಿಮಾನಿಗಳು ಹಾಜಬ್ಬರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಅಕ್ಷರ ಸಂತ ಹಾಜಬ್ಬರನ್ನು ಭೇಟಿಯಾಗಬೇಕೆಂದು ಮತ್ತೋರ್ವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿ ಗೌಡ ಬಹಳ ದಿನಗಳಿಂದ ಬಯಸುತ್ತಿದ್ದರು. ಆ ಘಳಿಗೆ ಕೂಡಿ ಬಂದಿದ್ದು, ಹಾಜಬ್ಬರನ್ನು ಭೇಟಿ ಮಾಡಿ ಕುಶಲೋಪಚಾರಿ ವಿಚಾರಿಸಿಕೊಂಡಿದ್ದಾರೆ.
ದೆಹಲಿಯಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿ ಮರಳಿ ನಾಡಿಗೆ ಬರುವಾಗಲೇ ನೇರ ಹರೇಕಳ ಹಾಜಬ್ಬರ ಶಾಲೆಗೆ ಹೋಗಿ ಶಾಲೆ ನೋಡಬೇಕೆಂದು ತುಳಸಿ ಗೌಡ ತನ್ನ ಮನದಾಸೆಯನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ದೆಹಲಿಯಿಂದ ನೇರವಾಗಿ ಮಂಗಳೂರಿಗೆ ಆಗಮಿಸಿದ ವೃಕ್ಷಮಾತೆ ತುಳಸಿ ಗೌಡ, ತನ್ನೂರು ಅಂಕೋಲಾಕ್ಕೆ ಹೋಗುವ ಬದಲು ಹರೇಕಳಕ್ಕೆ ಹೋಗಿ ಹಾಜಬ್ಬರ ಮನೆ ಮತ್ತು ಶಾಲೆಗೆ ಭೇಟಿ ನೀಡಿದ್ದಾರೆ.
ಮಂಗಳೂರು ನಗರ ಹೊರವಲಯದ ಉಳ್ಳಾಲದಲ್ಲಿರುವ ಹರೇಕಳದ ಹಾಜಬ್ಬರ ಮನೆಗೆ ತೆರಳಿದ ತುಳಸಿ ಗೌಡ, ಮೊದಲು ಹಾಜಬ್ಬರ ಮನೆಯಲ್ಲಿ ಉಪಹಾರ ಸೇವಿಸಿ ಕುಶಲೋಪಚಾರಿ ವಿಚಾರಿಸಿಕೊಂಡಿದ್ದಾರೆ. ಬಳಿಕ ಹಾಜಬ್ಬರ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಬೆರೆತಿದ್ದಾರೆ.

ವಯಸ್ಸಿನಲ್ಲಿ ತನಗಿಂತ ಹಿರಿಯರಾದ ತುಳಸಿ ಗೌಡರನ್ನು ಕೈಯಲ್ಲಿ ಹಿಡಿದುಕೊಂಡು ಹೋಗಿ ಹಾಜಬ್ಬರು ಸಹೋದರನ ರೀತಿ ಗೌರವ ಸಲ್ಲಿಸಿದ್ದಾರೆ. ಮನೆಗೆ ಬಂದ ತುಳಸಿ ಗೌಡರನ್ನು ಆದರದಿಂದ ಸ್ವಾಗತಿಸಿದ ಹಾಜಬ್ಬ, ತುಳಸಿಗೌಡರಿಗೆ ಉಪಹಾರ, ಎಳನೀರು ನೀಡಿ ಗೌರವಿಸಿದ್ದಾರೆ.
ಬಳಿಕ ಹರೇಕಳದ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ತುಳಸಿ ಗೌಡರನ್ನು ಕರೆದುಕೊಂಡು ಹೋಗಿ ಶಿಕ್ಷಕರ ಪರಿಚಯ ಮಾಡಿದ್ದಾರೆ. ಮಕ್ಕಳ ಜೊತೆ ಇಬ್ಬರು ದಿಗ್ಗಜರು ಮಗುವಾಗಿ ಬೆರೆತಿದ್ದಾರೆ.
ಈ ವೇಳೆ ಹಾಜಬ್ಬರ ಕನಸಿನ ಪಿಯುಸಿ ಕಾಲೇಜಿಗೆ ತುಳಸಿಗೌಡ ನೆರವನ್ನು ನೀಡಿದ್ದಾರೆ. ಈ ವೇಳೆ ಮಾತನಾಡಿದ ತುಳಸಿ ಗೌಡ. ಹಾಜಬ್ಬರ ಶಾಲೆ, ಅವರ ಶಿಕ್ಷಣ ಕ್ರಾಂತಿ ನೋಡಿ ಬಹಳ ಸಂತೋಷವಾಗಿದೆ. ಹಾಜಬ್ಬರ ಕನಸಿನ ಪಿಯು ಕಾಲೇಜು ನಿರ್ಮಾಣಕ್ಕಾಗಿ ತನ್ನಿಂದಾದ ಕಿಂಚಿತ್ತು ನೆರವು ನೀಡಿದ್ದೇನೆ. ದೊಡ್ಡ ಮೊತ್ತ ಅಲ್ಲದಿದ್ದರೂ ನನ್ನ ಶಕ್ತಿಯಾನುಸಾರ ನೆರವು ನೀಡಿದ್ದೇನೆ. ಎಲ್ಲರೂ ಹಾಜಬ್ಬರ ಕಾಲೇಜು ನಿರ್ಮಾಣಕ್ಕೆ ನೆರವು ನೀಡಬೇಕು ಎಂದು ತುಳಸಿಗೌಡ ಮನವಿ ಮಾಡಿದ್ದಾರೆ.
ತುಳಸಿಗೌಡರಿಗೆ ದೆಹಲಿ ಪ್ರಯಾಣಕ್ಕೆ ಮತ್ತು ಅವರಿಗೆ ಪ್ರೀತಿಯ ದ್ಯೋತಕವಾಗಿ ಅವರ ಅಭಿಮಾನಿಗಳು 2.65 ಲಕ್ಷ ರೂಪಾಯಿ ನೀಡಿದ್ದರು. ಈ ಹಣದಲ್ಲಿ ತುಳಸಿ ಗೌಡರು ಹಾಜಬ್ಬನವರಿಗೆ ನೀಡಿ ಉದಾರತೆ ಮೆರೆದಿದ್ದಾರೆ.












Click it and Unblock the Notifications