ಎಡಮೊಗ್ಗೆ: ತಾಯಿ ಜೊತೆ ಮಲಗಿದ್ದ ಮಗುವಿನ ಅಪಹರಣ
ಕುಂದಾಪುರ, ಜುಲೈ 11: ರಾತ್ರಿ ತಾಯಿ ಜೊತೆಗೆ ಮಲಗಿದ್ದ ಎರಡು ಪುಟ್ಟ ಮಕ್ಕಳ ಪೈಕಿ ಒಂದು ಹೆಣ್ಣು ಮಗುವನ್ನು ಕದ್ದೊಯ್ದಿರುವ ಘಟನೆ ಕುಂದಾಪುರ ತಾಲ್ಲೂಕಿನ ಶಂಕರನಾರಾಯಣ ಠಾಣಾ ವ್ಯಾಪ್ತಿಯ ಎಡಮೊಗ್ಗೆ ಕುಮ್ಟಿಬೇರು ಎಂಬಲ್ಲಿ ನಡೆದಿದೆ.
ಕುಮ್ಟಿಬೇರು ನಿವಾಸಿ ಸಂತೋಷ್ ನಾಯ್ಕ್ ಹಾಗೂ ರೇಖಾ ನಾಯ್ಕ್ ದಂಪತಿಯ ಒಂದೂ ಕಾಲು ವರ್ಷದ ಹೆಣ್ಣು ಮಗು ಸಾನ್ವಿಕಾ ಎಂಬಾಕೆಯನ್ನು ಅಪಹರಣ ಮಾಡಿರುವುದಾಗಿ ತಿಳಿದುಬಂದಿದೆ.

ಸಂತೋಷ್ ನಾಯ್ಕ್ ಹೊಸಂಗಡಿಯಲ್ಲಿರುವ ಪವರ್ ಪ್ರಾಜೆಕ್ಟ್ ನಲ್ಲಿ ವಾಟರ್ ಮೆನ್ ಆಗಿ ಕೆಲಸ ಮಾಡಿಕೊಂಡಿದ್ದು, ಬುಧವಾರ ಅವರಿಗೆ ರಾತ್ರಿ ಪಾಳಿಯಿದ್ದರಿಂದ ಮನೆಯಲ್ಲಿರಲಿಲ್ಲ. ಪತ್ನಿ ರೇಖಾ, ಮಗ ಸಾತ್ವಿಕ್ ಮತ್ತು ಮಗಳು ಸಾನ್ವಿಕಾ ಮೂವರೇ ಮನೆಯಲ್ಲಿದ್ದರು.

ಗುರುವಾರ ಮುಂಜಾನೆ ಸುಮಾರು ನಾಲ್ಕೂವರೆ ಗಂಟೆಗೆ ಮನೆಯ ಹಿಂಬದಿಯ ಬಾಗಿಲಿನ ಮೂಲಕ ಒಳನುಗ್ಗಿದ ಮುಸುಕುಧಾರಿ ವ್ಯಕ್ತಿಯೊಬ್ಬ ನೇರವಾಗಿ ಮೂವರು ಮಲಗಿದ್ದಲ್ಲಿಗೆ ಬಂದು ತಾಯಿ ಜೊತೆ ಮಲಗಿದ್ದ ಹೆಣ್ಣು ಮಗುವನ್ನು ಎತ್ತಿಕೊಂಡಿದ್ದಾನೆ. ಮಗು ಅಳುವುದನ್ನು ಕೇಳಿಸಿಕೊಂಡ, ನಿದ್ದೆಯ ಮಂಪರಿನಲ್ಲಿದ್ದ ರೇಖಾ ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಆ ವ್ಯಕ್ತಿ ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಮನೆ ಸಮೀಪದ ಕುಬ್ಜಾ ನದಿಯನ್ನು ದಾಟಿ ನಾಪತ್ತೆಯಾಗಿರುವುದಾಗಿ ರೇಖಾ ತಿಳಿಸಿದ್ದಾರೆ.












Click it and Unblock the Notifications