ಕಡಬದಲ್ಲಿ ಬೆಂಕಿಗಾಹುತಿಯಾದ ಒಮ್ನಿ, ಸ್ವಲ್ಪದರಲ್ಲೇ ಕಾರಿನಲ್ಲಿದ್ದವರು ಪಾರು
ಮಂಗಳೂರು, ನವೆಂಬರ್. 29: ಒಮ್ನಿ ಕಾರೊಂದು ಬೆಂಕಿಗಾಹುತಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ. ಕ್ಷಣಾರ್ಧದಲ್ಲೇ ಓಮಿನಿ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.
ಬೆಳ್ತಂಗಡಿ ತಾಲೂಕಿನ ಕಡಬದ ಕುಟ್ರುಪ್ಪಾಡಿ ಗ್ರಾಮದ ತಲೇಕಿ ಎಂಬಲ್ಲಿ ಈ ಘಟನೆ ನಡೆದಿದೆ. ಬೈದ್ರಿಜಾಲು ನಿವಾಸಿ ಸುಂದರ ಗೌಡ ಎಂಬುವವರ ಕಾರು ಇದಾಗಿದ್ದು, ಮನೆಯವರೊಂದಿಗೆ ಮಾರುತಿ ಓಮಿನಿ ಕಾರಲ್ಲಿ ಕಡಬಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ತಲೇಕಿ ಬಳಿ ಕಾರಿನ ಎಂಜಿನ್ ನಲ್ಲಿ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣವೇ ಕಾರು ನಿಲ್ಲಿಸಿ ಚಾಲಕ ಪರಿಶೀಲನೆ ನಡೆಸಿದ್ದಾನೆ. ಈ ಸಂದರ್ಭ ಎಂಜಿನ್ ಬಳಿ ಸಣ್ಣ ಬೆಂಕಿ ಹೊತ್ತಿಕೊಂಡು ಕಾರಿಗೆಲ್ಲಾ ಆವರಿಸಿ ಭಸ್ಮವಾಗಿದೆ ಎಂದು ಹೇಳಲಾಗಿದೆ.

ಕಾರಿನಲ್ಲಿದ್ದವರು ಹೊರಗಡೆ ಇಳಿದಿದ್ದರಿಂದ ಜೀವಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications