ಈಶ್ವರಪ್ಪನವರ ಮಾತಿಗೂ, ಬ್ರೈನಿಗೂ ಕನೆಕ್ಷನ್ ಇಲ್ಲ: ಯು.ಟಿ. ಖಾದರ್ ಹೀಗೆ ಹೇಳಿದ್ದೇಕೆ? - ಇಲ್ಲಿದೆ ವಿವರ
ಕೆ.ಎಸ್.ಈಶ್ವರಪ್ಪನವರ ಮಾತಿಗೂ, ಬ್ರೈನಿಗೂ ಕನೆಕ್ಷನ್ ಇಲ್ಲ. ಹೀಗಾಗಿ ಅವರಿಗೆ ಸಚಿವ ಸ್ಥಾನ ಕೊಟ್ಟಿಲ್ಲ. ಆದ್ದರಿಂದ ಮೇಲಿನವರನ್ನು ಮೆಚ್ಚಿಸಲು ಏನೇನೋ ಹೇಳುತ್ತಾರೆ ಎಂದು ಯು.ಟಿ.ಖಾದರ್ ವ್ಯಂಗ್ಯವಾಡಿದ್ದಾರೆ.
ಮಂಗಳೂರು, ಮಾರ್ಚ್, 15: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಾತಿಗೂ, ಬ್ರೈನಿಗೂ ಕನೆಕ್ಷನ್ ಇಲ್ಲ. ಹೀಗಾಗಿ ಅವರಿಗೆ ಸಚಿವ ಸ್ಥಾನ ಕೊಟ್ಟಿಲ್ಲ. ಆದ್ದರಿಂದ ಮೇಲಿನವರನ್ನು ಮೆಚ್ಚಿಸಲು ಏನೇನೋ ಹೇಳುತ್ತಾರೆ ಎಂದು ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಮಂಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಈಶ್ವರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಯು.ಟಿ. ಖಾದರ್, ಚುನಾವಣಾ ಸಂದರ್ಭದಲ್ಲಿ ಭಾವನಾತ್ಮಕ ಮಾತುಗಳು ಬೇಡ. ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡಲಿ. ಪ್ರತಿ ಧರ್ಮಕ್ಕೂ ಮಹತ್ವ ಇದೆ. ಧರ್ಮವನ್ನು ಅಪಹಾಸ್ಯ ಮಾಡಿದರೆ ಅದು ಅವರ ನೀಚತನವನ್ನು ತೋರಿಸುತ್ತದೆ. ನಮ್ಮ ಕಾಲದಲ್ಲಿ ಗ್ಯಾರಂಟಿ ಇತ್ತು, ವಾರಂಟಿಯೂ ಇದೆ. ಬಿಜೆಪಿ ಶೇ.10ರಷ್ಟು ಭರವಸೆಯನ್ನು ಈಡೇರಿಸಿಲ್ಲ. ಆದರೆ ನಾವು ಮಾತ್ರ ಕೊಟ್ಟ ಮಾತನ್ನು ಈಡೇರಿಸುವುಸು ಗ್ಯಾರಂಟಿ ಎಂದರು.

ವಿಜಯ ಸಂಕಲ್ಪ ಯಾತ್ರೆಯಲ್ಲ, 40% ಯಾತ್ರೆ
ರಾಜ್ಯ ಸರ್ಕಾರ ಅಂಗಡಿ ಶೆಟ್ರಸ್ ಬಂದ್ ಮಾಡಿದೆ. ಜನತೆ ನೀರಿಲ್ಲದೆ ಸಂಕಷ್ಟದಲ್ಲಿದ್ದಾರೆ. ಆದರೆ ಬಿಜೆಪಿಯವರು ಸರ್ಕಾರದ ಕಚೇರಿ ಮುಚ್ಚಿಸಿ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದಾರೆ. ಅಧಿಕಾರಿಗಳೂ ಚುನಾವಣೆ ಕೆಲಸಕ್ಕೆ ಹೋಗಿದ್ದಾರೆ. ಇದು ವಿಜಯ ಸಂಕಲ್ಪ ಯಾತ್ರೆಯಲ್ಲ, 40% ಯಾತ್ರೆ. ಕ್ಷೇತ್ರವಾರು ನೀರಿಗೆ ಅನುದಾನವನ್ನು ಬಿಡುಗಡೆ ಮಾಡಬೇಕು. ನಾವಿರುವಾಗ ಕ್ಷೇತ್ರಕ್ಕೆ 30 ಲಕ್ಷ ನೀಡಿದ್ದೆವು ಎಂದರು.
30-50 ಲಕ್ಷ ರೂ. ಬಿಡುಗಡೆ ಮಾಡಬೇಕು
ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಎಲ್ಲಿದಾರೆಂದು ಗೊತ್ತಿಲ್ಲ. ಸರ್ಕಾರ ಜನರಿಗೆ ಘೋರ ಅನ್ಯಾಯವನ್ನು ಮಾಡುತ್ತಿದೆ. ಆದ್ದರಿಂದ ತಕ್ಷಣ ಸಭೆ ಕರೆದು ನೀರಿನ ಟಾಸ್ಕ್ ಫೋರ್ಸ್‌ಗೆ 30-50 ಲಕ್ಷ ರೂಪಾಯಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಖಾದರ್ ಮನವಿ ಮಾಡಿದ್ದಾರೆ.
ಮಂಗಳೂರಿನ ಕಾವೂರು ಶಾಂತಿನಗರ ಮೈದಾನದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಈಶ್ವರಪ್ಪ ಭಾಷಣ ಮಾಡುತ್ತಿದ್ದ ವೇಳೆ ನನಗೆ ಎಲ್ಲಿ ಹೋದರೂ ಆಝಾನ್‌ದೇ ತಲೆನೋವಾಗಿದೆ. ಸುಪ್ರೀಂಕೋರ್ಟ್ ಆದೇಶವಿದ್ದು, ಇಂದಲ್ಲ ನಾಳೆ ಇದು ಖತಂ ಆಗಲಿದೆ. ಇದರಲ್ಲೇನು ಅನುಮಾನ ಬೇಡ ಎಂದು ಹೇಳಿದ್ದರು.
ಈಶ್ವರಪ್ಪನಿಂದ ವಿವಾದಾದ್ಮಕ ಹೇಳಿಕೆ
ಮೋದಿಯವರು ಎಲ್ಲಾ ಧರ್ಮಗಳಿಗೆ ಗೌರವ ಕೊಡಬೇಕೆಂದು ಹೇಳುತ್ತಾರೆ. "ಮೈಕ್‌ನಲ್ಲಿ ಕೂಗಿದರೆ ಮಾತ್ರವೇ ಅಲ್ಲಾಗೆ ಕಿವಿ ಕೇಳುತ್ತದೆಯಾ? ನಮ್ಮ ದೇವಸ್ಥಾನಗಳಲ್ಲೂ ಪೂಜೆ ಮಾಡುತ್ತೇವೆ. ಶ್ಲೋಕ, ಭಜನೆಗಳನ್ನು ಮಾಡಲಾಗುತ್ತದೆ. ಹೆಚ್ಚು ಭಕ್ತಿ ನಮ್ಮಲ್ಲೂ ಇದೆ. ಪ್ರಪಂಚದಲ್ಲಿ ಧರ್ಮವನ್ನು ಉಳಿಸುವಂತಹ ದೇಶ ಭಾರತ ಮಾತ್ರ. ಆದರೆ ಮೈಕ್ ಹಿಡಿದುಕೊಂಡು ಹೇಳಿದರೆ ಅವನಿಗೆ ಕಿವುಡಾ ಎಂದು ಕೇಳಬೇಕಾಗುತ್ತದೆ. ಆದ್ದರಿಂದ ಈ ಸಮಸ್ಯೆ ಆದಷ್ಟು ಬೇಗ ಪರಿಹಾರ ಆಗಬೇಕು," ಎಂದು ವಿವಾದಾದ್ಮಕ ಹೇಳಿಕೆ ನೀಡಿ ಟೀಕೆಗೆ ಒಳಗಾಗಿದ್ದಾರೆ.
ಸಿದ್ದರಾಮಯ್ಯ ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಲಾ ಮುಸ್ಲಿಮರನ್ನು ನಾವು ರಕ್ಷಿಸುತ್ತೇವೆ. ಹಿಂದೂಗಳ ವೋಟುಗಳು ನಮಗೆ ಬೇಡ ಎಂದು ಘೋಷಣೆ ಮಾಡಲಿ ಎಂದು ಕೆ.ಎಸ್.ಈಶ್ವರಪ್ಪ ಸವಾಲೆಸೆದಿದ್ದರು.












Click it and Unblock the Notifications