ಕೇರಳದಲ್ಲಿ 'ನಿಫಾ' ವೈರಸ್ ಆತಂಕ: ದಕ್ಷಿಣ ಕನ್ನಡದಲ್ಲಿ ಕಟ್ಟೆಚ್ಚರ
ಮಂಗಳೂರು, ಸೆಪ್ಟೆಂಬರ್ 7: ನೆರೆ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಆತಂಕವನ್ನು ಸೃಷ್ಠಿಸಿದೆ. ಕೇರಳ ಕೋಯಿಕ್ಕೋಡ್‌ನಲ್ಲಿ ನಿಫಾ ವೈರಸ್‌ನಿಂದ ಸೆ.3 ರಂದು 12 ವರ್ಷದ ಬಾಲಕ ಮೃತನಾಗಿದ್ದು, ಮೃತಪಟ್ಟ ಬಾಲಕನ ಸಂಪರ್ಕದಲ್ಲಿದ್ದ 250ಕ್ಕೂ ಹೆಚ್ಚು ಜನರನ್ನು ಐಸೋಲೇಷನ್‌ನಲ್ಲಿಟ್ಟು ಕೇರಳ ರಾಜ್ಯ ಆರೋಗ್ಯ ಇಲಾಖೆ ತೀವ್ರ ನಿಗಾದಲ್ಲಿರಿಸಿದೆ.
ಕೇರಳದಲ್ಲಿ ಕೊರೊನಾ ಜೊತೆಗೆ ನಿಫಾ ವೈರಸ್ ಕೂಡಾ ಹರಡುತ್ತಿರುವುದರಿಂದ ಕೇರಳದ ಗಡಿ ಭಾಗ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.
ವಿಡಿಯೋ: ತಾಯಿಯನ್ನು ಬೆಂಚ್‌ಗೆ ಕಟ್ಟಿ ಆಸ್ಪತ್ರೆಗೆ ಸಾಗಿಸಿದ ತಂದೆ- ಮಗ: ರಸ್ತೆಯಿಲ್ಲದೇ ಪ್ರಾಣಬಿಟ್ಟ ಮಹಿಳೆ
ಜಿಲ್ಲಾ ಆರೋಗ್ಯ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಫಾ ಅಲರ್ಟ್‌ನ್ನು ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದ್ದು, ತಕ್ಷಣ ಮುಂಜಾಗೃತಾ ಕ್ರಮಗಳನ್ನು ಜಾರಿಗೆ ಮಾಡುವಂತೆ ಸೂಚನೆ ನೀಡಲಾಗಿದೆ. ಸೋಂಕಿತ ಪ್ರಕರಣಗಳು ಕಂಡು ಬಂದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಈ ನಡುವೆ ಕೇರಳದಲ್ಲಿ ಸದ್ಯ ಇಬ್ಬರು ಆರೋಗ್ಯ ಸಿಬ್ಬಂದಿಗಳಲ್ಲಿ ನಿಫಾ ವೈರಸ್ ಹರಡಿರುವ ಮಾಹಿತಿ ಲಭ್ಯವಾಗಿದೆ.

ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿ ಹೈಅಲರ್ಟ್
ಕರ್ನಾಟಕ ರಾಜ್ಯ ಸರ್ಕಾರ, ಕೇರಳದ ಜೊತೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿ ಹೈಅಲರ್ಟ್‌ನ್ನು ಘೋಷಣೆ ಮಾಡಿದೆ. ಕೇರಳದ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಆರೋಗ್ಯ ಇಲಾಖೆ ಆಯಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
ನಿಫಾ ವೈರಸ್ ಬಗ್ಗೆ ಜನಜಾಗೃತಿ ಮೂಡಿಸಲು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿಪತ್ರ ಬಿಡುಗಡೆ ಮಾಡಿದೆ. ನಿಫಾ ಸೋಂಕಿನ ಲಕ್ಷಣವಿರುವ ಜನರ ಮೇಲೆ ತೀವ್ರ ನಿಗಾ ವಹಿಸುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಕೇರಳದಿಂದ ಜ್ವರದ ಕಾರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಆಗಮಿಸುವ ಕೇರಳಿಗರನ್ನು ನಿಫಾ ಟೆಸ್ಟ್‌ಗೆ ಒಳಪಡಿಸುವಂತೆ ವೈದ್ಯರುಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಹಣ್ಣು- ಹಂಪಲುಗಳನ್ನು ಖರೀದಿಸುವಾಗಲೂ ಎಚ್ಚರ
ಪ್ರಾಣಿ- ಪಕ್ಷಿಗಳು ತಿಂದು ಬಿಟ್ಟಿರುವ ಹಣ್ಣುಗಳನ್ನು ತಿನ್ನದಂತೆ ಜನರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸೂಚನೆ ನೀಡಿದೆ. ಮಾರುಕಟ್ಟೆಗಳಲ್ಲಿ ಖರೀದಿಸಿದ ಹಣ್ಣು-ಹಂಪಲುಗಳನ್ನು ಚೆನ್ನಾಗಿ ತೊಳೆದು ತಿನ್ನುವಂತೆ ಜಿಲ್ಲಾಡಳಿತ ಜನರಿಗೆ ಮನವಿ ಮಾಡಿದೆ. ಅಲ್ಲದೇ ಕೇರಳದಿಂದ ಬರುವ ಹಣ್ಣು- ಹಂಪಲುಗಳನ್ನು ಖರೀದಿಸುವಾಗಲೂ ಎಚ್ಚರದಿಂದ ಇರುವ ಬಗ್ಗೆ ಸೂಚಿಸಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಕೇರಳದಿಂದ ಅತೀ ಹೆಚ್ಚು ರಂಬೂಟಾನ್ ಮತ್ತು ಡ್ಯಾಗನ್ ಫ್ರೂಟ್‌ಗಳು ಬರುತ್ತಿದ್ದು, ಇವುಗಳನ್ನು ಖರೀದಿಸುವ ವ್ಯಾಪಾರಸ್ಥರಿಗೂ ಮಾನದಂಡಗಳನ್ನು ವಿಧಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಧಾರ ಮಾಡಿದೆ.

ಮಲಪುರಂ, ಕಣ್ಣೂರು, ಕೋಯಿಕ್ಕೋಡ್‌ನಲ್ಲಿ ನಿಫಾ ವೈರಸ್
ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಕೇರಳದ ರೋಗಿಗಳೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ನಿಫಾ ವೈರಸ್ ನಿಯಂತ್ರಣ ಮಾಡುವುದೇ ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಕೇರಳದ ಮಲಪುರಂ, ಕಣ್ಣೂರು, ಕೋಯಿಕ್ಕೋಡ್ ಸೇರಿದಂತೆ ಮುಂತಾದ ಜಿಲ್ಲೆಗಳಲ್ಲಿ ನಿಫಾ ಆತಂಕ ಹೆಚ್ಚಾಗಿದೆ. ಮಂಗಳೂರಿನ ಬಹುತೇಕ ಆಸ್ಪತ್ರೆಗಳಿಗೆ ಆ ಭಾಗದ ರೋಗಿಗಳೇ ಅತೀ ಹೆಚ್ಚಾಗಿ ಬರುವುದರಿಂದ ಹೆಚ್ಚಿನ ನಿಗಾ ವಹಿಸಲು ಸೂಚನೆ ನೀಡಲಾಗಿದೆ.

ಜ್ವರದ ಲಕ್ಷಣವಿದ್ದವರಿಗೆ ಜಿಲ್ಲೆಗೆ ಪ್ರವೇಶಿಲು ಅವಕಾಶವಿಲ್ಲ
"ಇನ್ನು ಮಂಗಳೂರು- ಕೇರಳ ಗಡಿ ಭಾಗದಲ್ಲೂ ಹೆಚ್ಚಿನ ತಪಾಸಣೆ ಮಾಡಲಾಗುತ್ತಿದೆ. ಕೇರಳದಿಂದ ಬರುವವರು ಕೋವಿಡ್ ನೆಗೆಟಿವ್ ವರದಿ ತರುವುದರ ಜೊತೆ ಜ್ವರದ ಲಕ್ಷಣವಿದ್ದವರಿಗೆ ಜಿಲ್ಲೆಗೆ ಪ್ರವೇಶಿಲು ಅವಕಾಶ ನಿರಾಕರಿಸಲಾಗಿದೆ. ತಲಪಾಡಿ ಗಡಿಭಾಗದಲ್ಲಿ ನಿಫಾ ರೋಗ ಲಕ್ಷಣ ಪತ್ತೆಗಾಗಿ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಸದ್ಯ ನಿಫಾ ರೋಗದ ಲಕ್ಷಣವನ್ನು ಪತ್ತೆ ಮಾಡಲು ಯಾವುದೇ ತಪಾಸಣೆ ಇಲ್ಲ.
ಸದ್ಯ ಥರ್ಮಲ್ ಸ್ಯಾನಿಂಗ್ ಆರಂಭಿಸುತ್ತೇವೆ. ನಿಫಾ ರೋಗ ಲಕ್ಷಣ ಇದ್ದವರನ್ನು ವಾಪಾಸ್ ಕಳುಹಿಸುತ್ತಿದ್ದೇವೆ. ಕೋವಿಡ್ ನೆಗೆಟಿವ್ ವರದಿ ಇದ್ದರೂ, ದೇಹದ ಉಷ್ಣಾಂಶ ಜಾಸ್ತಿ ಇದ್ದರೆ, ಅವರಿಗೆ ಗಡಿ ಪ್ರವೇಶಕ್ಕೆ ಅವಕಾಶ ಇಲ್ಲ," ಅಂತಾ ತಲಪಾಡಿ ಗಡಿಯಲ್ಲಿ ಎಸಿಪಿ ರಂಜಿತ್ ಬಂಡಾರು ಹೇಳಿದ್ದಾರೆ.











Click it and Unblock the Notifications