ಬೆಳಂಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ NIA ದಾಳಿ, ನಾಲ್ವರ ಬಂಧನ
ಮಂಗಳೂರು, ಮೇ, 31:ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ವೇಳೆ ದುಷ್ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್‌ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಈ ವೇಳೆ ಪುತ್ತೂರಿನ ನಾಲ್ವರನ್ನು ಬಂಧಿಸಿ ಕರೆದೊಯ್ದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಹಮ್ಮದ್ ಹ್ಯಾರೀಸ್ ಕುಂಬ್ರ (32), ಸಜ್ಜದ್ ಹುಸೈನ್, ಕೋಡಿಂಬಾಡಿ (37), ಫೈಜಲ್ ಅಹಮ್ಮದ್, ತಾರಿಗುಡ್ಡೆ, ಸಂಶುದ್ಧೀನ್ ಕೂರ್ನಡ್ಕ ಬಂಧಿತ ಆರೋಪಿಗಳಾಗಿದ್ದಾರೆ. ಈ ನಾಲ್ವರು ಆರೋಪಿಗಳಿಗೆ ಪಿಎಫ್ಐ ಸಂಪರ್ಕ ಇರುವ ಸಾಧ್ಯತೆ ಎನ್ನುವ ಶಂಕೆ ವ್ಯಕ್ತವಾಗಿದೆ.

16 ಕಡೆ ಎನ್‌ಐಎ ದಾಳಿ
ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು ಸೇರಿ 16 ಕಡೆ ಎನ್‌ಐಎ ದಾಳಿ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಲಾ ಹಣ ವರ್ಗಾವಣೆ ವಿಚಾರವಾಗಿ ಹಲವರ ಮನೆ, ಕಚೇರಿ, ಒಂದು ಆಸ್ಪತ್ರೆ ಮೇಲೆ ಸ್ಥಳೀಯ ಪೊಲೀಸ್ ಆಧಿಕಾರಿಗಳ ನೆರವು ಪಡೆದು ಎನ್‌ಐಎ ದಾಳಿ ನಡೆಸಿದೆ. ಹಾಗೆಯೆ ಬಿಹಾರದಲ್ಲಿ ಪ್ರಧಾನಿ ಮೋದಿ ಮೇಲೆ ದಾಳಿಗೆ ಸಂಚು ಪ್ರಕರಣದ ಕುರಿತು ಎನ್‌ಐಎ ತನಿಖೆ ಮುಂದುವರೆಸಿದೆ ಎಂದು ತಿಳಿದುಬಂದಿದೆ.
ಹವಾಲಾ ಹಣ ಬಳಕೆ ಆರೋಪದ ಮೇಲೆ ದಾಳಿ
ಭಯೋತ್ಪಾದಕ ಕೃತ್ಯಕ್ಕೆ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ ಬಳಕೆ ಆರೋಪದ ಮೇಲೆ ಎನ್‌ಐಎ ದಾಳಿ ನಡೆಸುವುದಲ್ಲದೆ, ದಕ್ಷಿಣ ಭಾರತದ ಪಿಎಫ್‌ಐ ಹವಾಲಾ ಹಣ ಜಾಲವನ್ನು ಭೇದಿಸುತ್ತಿದೆ. ಭಾರತದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ನೆಟ್ವರ್ಕ್ ಪತ್ತೆಯಾಗಿದ್ದು, ಈ ಆಧಾರದ ಮೇರೆಗೆ ಆರೋಪಿಗಳನ್ನು ಬಲೆಗೆ ಕೆಡವಲು ಎನ್‌ಐಎ ಮುಂದಾಗಿದೆ.
ಇನ್ನು ಬಿಹಾರದ ಪಾಟ್ನಾದಲ್ಲಿ 2022ರ ಜುಲೈ ತಿಂಗಳಲ್ಲಿ ಪತ್ತೆಯಾಗಿದ್ದ ಫುಲ್ವಾರಿ ಶರೀಫ್ ಪ್ರಕರಣ, ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣ, ದೇಶದಲ್ಲಿ ಕೋಮು ಗಮಭೆ ಸೃಷ್ಟಿಸುವ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಜಾಡು ಹಿಡಿದು ದಕ್ಷಿಣ ಕನ್ನಡ ಜಿಲ್ಲೆಗೆ ಎನ್‌ಐಎ ಅಧಿಕಾರಿಗಳ ತಂಡ ಆಗಮಿಸಿದೆ ಎನ್ನಲಾಗಿದೆ.
ಹಾಗೆಯೆ ಇತ್ತೀಚೆಗಷ್ಟೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಮತ್ತು ಪುತ್ತೂರಿನಲ್ಲಿ ನಡೆಸಿದ್ದ ಎನ್‌ಐಎ ಅಧಿಕಾರಿಗಳು ಬಂಟ್ವಾಳ ನಿವಾಸಿ ಮಹಮ್ಮದ್ ಸಿನಾನ್, ಸಜಿಪ ಮೂಡದ ಸರ್ಫ್ರಾಜ್ ನವಾಜ್, ಇಕ್ಬಾಲ್, ಪುತ್ತೂರಿನ ಅಬ್ದುಲ್ ರಫೀಕ್ ಎಂಬುವವರನ್ನು ಬಂಧಿಸಿದ್ದರು.
ಅಲ್ಲದೆ ಕೇರಳದ ಕಾಸರಗೋಡಿನ ಕುಂಜತ್ತೂರು ನಿವಾಸಿ ಅಬೀದ್ ಕೆ.ಎಂ. ಎಂಬಾತನನ್ನು ಕೂಡ ಬಂಧಿಸಲಾಗಿತ್ತು. ಇನ್ನು ದಾಳಿ ಸಂದರ್ಭದಲ್ಲಿ ಹಲವು ಡಿಜಿಟಲ್ ಸಾಕ್ಷ್ಯಗಳು ಮತ್ತು ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದ ಬಗ್ಗೆ ದಾಖಲೆಗಳನ್ನು ಎನ್‌ಐಎ ಪತ್ತೆಹಚ್ಚಿತ್ತು.












Click it and Unblock the Notifications