ಕನ್ನಡ ಎಷ್ಟು ಸುಂದರ ತಿಳಿಯಲು ಯಕ್ಷಗಾನ ನೋಡಬೇಕು : ಜ್ಞಾನೇಂದ್ರ
ಮಂಗಳೂರು,ಮೇ 30 : "ಬಹಳಷ್ಟು ಅರ್ಥಗರ್ಭಿತವಾದ ವರ್ಣನೆ, ವಿಶ್ಲೇಷಣೆಗಳನ್ನು ಯಕ್ಷಗಾನ ಕಲೆಯಲ್ಲಿ ಕಾಣಬಹುದು. ಕನ್ನಡ ಭಾಷೆಯು ಎಷ್ಟು ಸುಂದರವಾಗಿದೆ ಎಂಬುದು ಯಕ್ಷಗಾನದಿಂದ ಅರಿಯಬಹುದು" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸಚಿವ ಆರಗ ಜ್ಞಾನೇಂದ್ರ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಆಶ್ರಯದಲ್ಲಿ ನಡೆದ ಅಡ್ಯಾರ್ ಗಾರ್ಡನ್ ನ ಡಾ. ಪುನೀತ್ ರಾಜ್ ಕುಮಾರ್ ವೇದಿಕೆಯಲ್ಲಿ ಜರುಗಿದ 'ಯಕ್ಷಧ್ರುವ ಪಟ್ಲ ಸಂಭ್ರಮ 2022 ಸಮಾರಂಭ'ದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
"ಸಿನಿಮಾದಲ್ಲಿ ಕಲಾವಿದರ ಪ್ರತಿ ಕೆಲಸಕ್ಕೂ ಬೇರೆ ಬೇರೆ ಪ್ರಸಾದನ ಮಾಡುವವರು ಇರುತ್ತಾರೆ. ಆದರೆ ಯಕ್ಷಗಾನದಲ್ಲಿ ಕಲಾವಿದ ತನ್ನ ಬಣ್ಣದಿಂದ ಹಿಡಿದು ತನ್ನೆಲ್ಲಾ ಕಾರ್ಯವನ್ನು ತಾನೇ ಮಾಡುತ್ತಾನೆ. ಶಾಸ್ತ್ರೀಯ ಸಂಗೀತದ ಗಂಧಗಾಳಿ ಗೊತ್ತಿಲ್ಲದೆ ವೇದಿಕೆಯಲ್ಲಿ ಪ್ರಸಂಗಕ್ಕೆ ತಕ್ಕಂತೆ ಎರಿಳಿತ ಮಾಡುತ್ತಾನೆ. ಕೇವಲ ಕೆಲವೇ ವಿಸ್ತೀರ್ಣದ ರಂಗಸ್ಥಳದಲ್ಲಿ ದೇವಲೋಕ, ಪಾತಾಳ ಲೋಕವನ್ನು ನಿರ್ಮಾಣ ಮಾಡುತ್ತಾರೆ. ಆಧುನಿಕತೆಯ ವೇಗದಲ್ಲಿ ಇತರ ಕಲೆಗಳು ನಶಿಸಿ ಹೋಗುತ್ತಿದ್ದರೂ ಯಕ್ಷಗಾನ ಮಾತ್ರ ಕರಾವಳಿ ಜನರ ಪ್ರೋತ್ಸಾಹದಿಂದ ನಿತ್ಯ ನಿರಂತರವಾಗಿ ಸಾಗುತ್ತಿದೆ" ಎಂದು ಗೃಹ ಸಚಿವರು ಬಣ್ಣಿಸಿದರು.

"ನಾನು ಕೂಡ ಪಟ್ಲರ ಅಭಿಮಾನಿ. ಪಟ್ಲರಂತಹ ಕಲಾವಿದರು ಯಕ್ಷಗಾನದಲ್ಲಿ ಹೊಸತನ ತರುವ ಮೂಲಕ ಯುವಜನತೆ ಯಕ್ಷಗಾನದ ಕಡೆ ಆಕರ್ಷಿತರಾಗಲು ಕಾರಣರಾಗಿದ್ದಾರೆ. ಘಟ್ಟದ ಮೇಲಿರುವ ಪಟ್ಲರ ಅಭಿಮಾನಿ ಬಳಗವು ಪಟ್ಲರ ಸಾಧನೆಗೆ ಹಿಡಿದ ಕನ್ನಡಿಯಾಗಿದೆ. ಸಿನಿಮಾ ನಟರಿಗೆ ಇರುವ ಸೌಲಭ್ಯ ಯಕ್ಷಗಾನ ಕಲಾವಿದರಿಗಿಲ್ಲ. ಕಲಾವಿದರ ರಕ್ಷಕರಾಗಿ ಪಟ್ಲ ಫೌಂಡೇಶನ್ ಕಾರ್ಯ ನಿರ್ವಹಿಸುತ್ತಿದೆ. ಅಶಕ್ತ ಕಲಾವಿದರಿಗೆ ಸಹಾಯ ಮಾಡುವುದು, ಸಾಧನೆಗೆ ಪುರಸ್ಕರಿಸುವ ಮೂಲಕ ಯಕ್ಷಗಾನ ರಂಗಕ್ಕೆ ಅನನ್ಯ ಕೊಡುಗೆಯನ್ನು ಪಟ್ಲರು ನೀಡಿದ್ದಾರೆ" ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
"ರಾಮಾಯಣ, ಮಹಾಭಾರತದ ಪಾತ್ರ ಮಹತ್ವವು ಯಕ್ಷಗಾನದಿಂದ ತಿಳಿಯುತ್ತದೆ. ದೇಶ ಸಾಂಸ್ಕೃತಿಕವಾಗಿ ಗಟ್ಟಿಯಾಗಲು ಇಂತಹ ಕಲಾವಿದರ ಕೊಡುಗೆ ಮಹತ್ತರವಾದುದು. ಪಟ್ಲ ಫೌಂಡೇಶನಿಗೆ ದಾನ ನೀಡುವ ದಾನಿಗಳಿಗೆ ದೇವರು ಕೋಟಿ ಕೋಟಿ ಕೂಡಿಸಿ ಕೊಡಲಿ. ಪಟ್ಲರಿಗೆ ದೇವರು ಆಯುಷ್ಯ, ಆರೋಗ್ಯ ನೀಡಲೆಂದು ಹಾರೈಸಿದರು. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ 1 ಎಕರೆ ಭೂಮಿಯನ್ನು ಫೌಂಡೇಶನ್‌ಗೆ ನೀಡಲು ಪ್ರಯತ್ನ ಮಾಡುವುದಾಗಿ" ಸಚಿವರು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಪಟ್ಲರ ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ 'ಪಟ್ಲ ಪ್ರಶಸ್ತಿ - 2022' ನೀಡಲಾಯಿತು. ಟ್ರಸ್ಟಿನ ಸಾಧಕ ಮಹಾಪೋಷಕರಾದ ಚೆಲ್ಲಡ್ಕ ಕೆ. ಡಿ. ಶೆಟ್ಟಿ ದಂಪತಿ , ವಕ್ವಾಡಿ ಪ್ರವೀಣ್ ಶೆಟ್ಟಿ , ಕಡಂದಲೆ ಸುರೇಶ್ ಭಂಡಾರಿ ಅವರನ್ನು ಹಾಗೂ ಸವಣೂರು ಸೀತಾರಾಮ ರೈ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಭೂಸೇನೆಯಲ್ಲಿ ಮುಂದೆ ಮೇಜರಾಗಿ ಪದೋನ್ನತಿ ಹೊಂದಲಿರುವ ಕ್ಯಾ. ಭರತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದ ಶ್ರೇಯಾ ಶೆಟ್ಟಿಗೆ ಗೌರವಧನ ನೀಡಲಾಯಿತು. ಕಾರ್ಯಕ್ರಮದಲ್ಲಿ ಗೃಹ ನಿರ್ಮಾಣಕ್ಕೆ 20 ಕಲಾವಿದರಿಗೆ ತಲಾ 25,000ರೂ., ಸತ್ಪಾತ್ರ 13 ಕಲಾವಿದರಿಗೆ ತಲಾ 50,000ರೂ. ವೈದ್ಯಕೀಯ ನೆರವು ನೀಡಲಾಯಿತು.












Click it and Unblock the Notifications