ಮಂಗಳಾದೇವಿ ಜಾತ್ರೆಯಲ್ಲಿ ಮತ್ತೆ ಧರ್ಮ ದಂಗಲ್: ಜಿಲ್ಲಾಧಿಕಾರಿಗಳಿಗೆ ದೂರು
ಮಂಗಳೂರು, ಅಕ್ಟೋಬರ್ 12: ಕಳೆದ ಬಾರಿ ದೇವಸ್ಥಾನಗಳ ಜಾತ್ರಾ ಮಹೋತ್ಸವದಲ್ಲಿ ಅನ್ಯಧರ್ಮೀಯರಿಗೆ ಅವಕಾಶವಿಲ್ಲ ಎಂಬ ವಿಚಾರ ಭಾರೀ ಸುದ್ದಿಯಾಗಿತ್ತು. ಜಾತ್ರೆ ಕಳೆದ ಬಳಿಕ ಕೊಂಚ ತಣ್ಣಗಿದ್ದ ಈ ವಿಚಾರ ಈ ಬಾರಿ ಮತ್ತೆ ಸದ್ದು ಮಾಡುತ್ತಿದೆ.
ಮಂಗಳೂರಿನ ಶ್ರೀ ಮಂಗಳಾದೇವಿ ದೇವಾಲಯದ ನವರಾತ್ರಿ ಜಾತ್ರಾಮಹೋತ್ಸವದಲ್ಲಿ ಅನ್ಯಧರ್ಮೀಯ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ನವರಾತ್ರಿಯ ಹತ್ತು ದಿನಗಳ ಕಾಲ ಇಲ್ಲಿ ವ್ಯಾಪಾರ ಮಾಡಲು ಅವಕಾಶವಿದೆ. ಆದರೆ ದೇವಸ್ಥಾನದ ಆಡಳಿತ ಮಂಡಳಿಯಿಂದಲೇ ವ್ಯಾಪಾರ ಅವಕಾಶ ನಿರಾಕರಿಸಲಾಗಿದೆ ಎನ್ನಲಾಗುತ್ತಿದೆ.

ಇದೀಗ ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿಯು ಅನ್ಯಧರ್ಮೀಯರಿಗೂ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ದ.ಕ.ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ.
ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿಯು ಅನ್ಯಧರ್ಮೀಯರಿಗಳಿಗೆ ವ್ಯಾಪಾರಕ್ಕೆ ಅವಕಾಶ ಕೋರಿ ನಾಳೆ ನಗರದ ಕ್ಲಾಕ್ ಟವರ್ ಮುಂಭಾಗ ಈ ಬಗ್ಗೆ ಪ್ರತಿಭಟನೆ ನಡೆಸಲಿದೆ. ಆ ಬಳಿಕವೂ ಅವಕಾಶ ದೊರಕದಿದ್ದಲ್ಲಿ ಹಿಂದಿನ ಬಾರಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಿರುವ ಜಾಗದಲ್ಲಿಯೇ ವ್ಯಾಪಾರಿಗಳನ್ನು ನಾವೇ ಕೂರಿಸಿ ವ್ಯಾಪಾರ ಮಾಡಿಸಿತ್ತೇವೆ ಎಂದು ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿಯ ಅಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಹೇಳಿದ್ದಾರೆ.
ಮಂಗಳಾದೇವಿ ದೇವಸ್ಥಾನದ ನವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮರು ವ್ಯಾಪಾರ ಮಾಡದಂತೆ ತಡೆ ಆರೋಪದ ಬಗ್ಗೆ ದ.ಕ ಮತ್ತು ಉಡುಪಿ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯಿಂದ ಡಿಸಿಗೆ ದೂರು ನೀಡಿದ್ದಾರೆ. ಮಂಗಳಾದೇವಿಯಲ್ಲಿ ಅ.15ರಿಂದ 24ರವರೆಗೆ ನವರಾತ್ರಿ ಸಂಭ್ರಮ ನಡೆಯಲಿದ್ದು, ದೇವಸ್ಥಾನದ ಆಡಳಿತ ಮಂಡಳಿಯಿಂದ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ ಆರೋಪ ವ್ಯಕ್ತವಾಗಿದೆ.
ಸದ್ಯ ನವರಾತ್ರಿ ಸಿದ್ದತೆ ಹಿನ್ನೆಲೆಯಲ್ಲಿ ಅಂಗಡಿ ಜಾಗದ ಹಂಚಿಕೆ ಪ್ರಕ್ರಿಯೆ ನಡೆಯುತ್ತಿದ್ದು, ದೇವಸ್ಥಾನದ ಮುಂಭಾಗದ ರಥಬೀದಿಯಲ್ಲಿ ವ್ಯಾಪಾರ ನಡೆಸಲು ಜಾಗ ಹಂಚಿಕೆ ಮಾಡಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆಗೆ ಸೇರಿರುವ ಸರ್ಕಾರಿ ರಸ್ತೆ ಆದರೂ ಹಲವು ವರ್ಷಗಳಿಂದ ಈ ರಸ್ತೆಯ ಬದಿಗಳಲ್ಲಿ ನವರಾತ್ರಿ ಜಾತ್ರಾ ವ್ಯಾಪಾರ ಮಾಡುತ್ತಿದ್ದರು. ಪಾಲಿಕೆ ರಸ್ತೆಯಾದ್ರೂ ದೇವಸ್ಥಾನದ ಆಡಳಿತದಿಂದಲೇ ವ್ಯಾಪಾರದ ಜಾಗ ಹರಾಜಾಗುತ್ತಿದೆ. ರಾಜ್ಯದ ಮುಜುರಾಯಿ ಇಲಾಖೆ ವ್ಯಾಪ್ತಿಗೆ ಬರುವ ಮಂಗಳಾದೇವಿ ದೇವಸ್ಥಾನದ ಎದುರಿನ ರಸ್ತೆ ಪಾಲಿಕೆ ವ್ಯಾಪ್ತಿಗೆ ಸೇರಿದ್ದರೂ ಹಲವು ವರ್ಷಗಳಿಂದ ದೇವಸ್ಥಾನದ ಆಡಳಿತ ಮಂಡಳಿಯಿಂದಲೇ ಹರಾಜು ನಡೆಯುತ್ತಿದೆ. ಸದ್ಯ ದ.ಕ ಮತ್ತು ಉಡುಪಿ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯಿಂದ ದೂರು ನೀಡಿದ್ದು, ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕೊಡುವಂತೆ ಡಿಸಿಗೆ ದೂರ ನೀಡಲಾಗಿದೆ.












Click it and Unblock the Notifications