'ಕೊರಗಜ್ಜ, ಪಂಜುರ್ಲಿ ಪ್ರಸಾದ ಪಡೆದು ತಲೆಗೆ ಮೆತ್ತಿಕೊಂಡು ಯು.ಟಿ ಖಾದರ್ ನರಕಕ್ಕೆ ಹೋಗಲಿ'
ಮಂಗಳೂರು, ಫೆಬ್ರವರಿ 05: ಸ್ಪೀಕರ್ ಯು.ಟಿ.ಖಾದರ್ ಅವರು ತುಳುನಾಡಿನ ಕಾರ್ಣಿಕ ದೈವಗಳಾದ ಪನೋಲಿಬೈಲು ಕಲ್ಲುರ್ಟಿ-ಕಲ್ಕುಡ ದೈವಗಳಿಗೆ ಹರಕೆ ಕೋಲ ನೆರೆವೇರಿಸಿದ್ದಾರೆ. ಇಷ್ಟಾರ್ಥ ಸಿದ್ಧಿಗಾಗಿ ಶ್ರೀಕ್ಷೇತ್ರ ಪನೋಲಿಬೈಲಿನ ಕಲ್ಲುರ್ಟಿ -ಕಲ್ಕುಡ ದೈವಗಳಿಗೆ ಹರಕೆ ಹೊತ್ತಿದ್ದ ಯು.ಟಿ.ಖಾದರ್ ಅವರು ನಿನ್ನೆ ರಾತ್ರಿ ಪನೋಲಿಬೈಲು ಕ್ಷೇತ್ರದಲ್ಲಿ ಹರಕೆಯನ್ನು ಸಲ್ಲಿಸಿದ್ದಾರೆ.
ಕೋಲ ಆರಂಭದಿಂದ ಕೊನೆಯವರೆಗೂ ಇದ್ದ ಯು.ಟಿ.ಖಾದರ್ ದೈವಗಳ ಎಲ್ಲಾ ಸೇವೆಯಲ್ಲಿ ಭಾಗಿಯಾಗಿ ದೈವಗಳ ಆಶೀರ್ವಾದ ಪಡೆದಿದ್ದಾರೆ. ಯು.ಟಿ.ಖಾದರ್ ಅವರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ.

ದೈವಗಳ ಹರಕೆಕೋಲ ನೆರವೇರಿಸಿದ ಯು.ಟಿ ಖಾದರ್‌ಗೆ ಮುಸ್ಲಿಂ ಮುಖಂಡ ವಿರೋಧ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಧಾರ್ಮಿಕ ಮುಖಂಡ ಸಾಲೆತ್ತೂರು ಫೈಝಿ ಎಂಬವರು ವಿರೋಧಿಸಿದ್ದು, ಯು.ಟಿ ಖಾದರ್ ಬಗ್ಗೆ ಆಕ್ಷೇಪಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
'ಕೊರಗಜ್ಜನ ಭಕ್ತ ಯು.ಟಿ ಖಾದರ್‌ನನ್ನು ಮುಸ್ಲಿಮರು ಬರೀ ರಾಜಕಾರಣಿಯಾಗಿ ಕಂಡರೆ ಸಾಕು. ಧಾರ್ಮಿಕ ಮುಖಂಡರಾಗಿ ಕಾಣುವುದು ಬೇಡ. ಉಲೆಮಾ, ಸಾತ್ವಿಕರು ತುಂಬಿದ ಧಾರ್ಮಿಕ ವೇದಿಕೆಗೆ ಮುಸ್ಲಿಂ ನಾಯಕನಾಗಿ ಹತ್ತಿಸುವುದು ತರವಲ್ಲ. ಅದು ಆತನ ಭೂತಾರಾಧನೆಗೆ ನಾವು ಕೊಡುವ ಅಂಗೀಕಾರವಾಗುತ್ತದೆ. ಖಾದರ್, ಕೊರಗಜ್ಜನಿಗೂ,ಕಲ್ಲುರ್ಟಿ, ಪಂಜುರ್ಲಿಗೂ ಆರಾಧಿಸಲಿ. ಪ್ರಸಾದ ಪಡೆದು ತಲೆಗೆ ಮೆತ್ತಿಕೊಂಡು ನರಕಕ್ಕೆ ಹೋಗಲಿ. ಅದು ಆತನ ವೈಯಕ್ತಿಕ ಸ್ವಾತಂತ್ರ್ಯ.
ಅದು ಭಾರತದಲ್ಲಿ ಎಲ್ಲರಿಗೂ ಇರುವ ಸಂವಿಧಾನಿಕ ಸ್ವಾತಂತ್ರ್ಯ. ಅದನ್ನು ತಡೆಯುವ ಹಕ್ಕು ನನಗಿಲ್ಲ. ಆದರೆ ಧಾರ್ಮಿಕ ನಾಯಕನಾಗಿ ನಾವು ಅಂಗೀಕರಿಸುವುದು, ಆತನ ಭೂತಾರಾಧನೆಯನ್ನು ನಾವು ಒಪ್ಪಿಕೊಂಡಂತಾಗುತ್ತದೆ. ಉಲಮಾಗಳು ಅವನಿಗೆ ಗೌರವ ಕೊಡುವುದು ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಸಂದೇಶವಾಗಿ ಪರಿಣಮಿಸುತ್ತದೆ' ಎಂದು ಯು.ಟಿ.ಖಾದರ್ ನಡವಳಿಕೆ ಆಕ್ಷೇಪಿಸಿ ಸಾಲೆತ್ತೂರು ಫೈಝಿ ಪೋಸ್ಟ್ ಹಾಕಿದ್ದಾರೆ.
ಈ ಬಗ್ಗೆ ಯು. ಟಿ ಖಾದರ್ ಮಾತನಾಡಿದ್ದು, 'ಸೋಶಿಯಲ್ ಮೀಡಿಯಾದಲ್ಲಿ ಗೀಚುವವರನ್ನು ಇತಿಹಾಸ ನೆನಪಿಟ್ಟುಕೊಳ್ಳಲ್ಲ. ಪ್ರಶ್ನೆ ಕೇಳುವವರನ್ನು ಇತಿಹಾಸ ನೆನಪಿಗೆ ಇಟ್ಟುಕೊಳ್ಳಲ್ಲ. ಯಾರು ಕೆಲಸ ಮಾಡುತ್ತಾರೆ, ಯಾರು ಉತ್ತರ ಕೊಡುತ್ತಾರೆ ಅವರನ್ನು ಇತಿಹಾಸ ನೆನಪಿಟ್ಟುಕೊಳ್ಳುತ್ತದೆ. ನಮ್ಮ ಪ್ರಾಚೀನ ಆಚರಣೆ ಅನುಗುಣವಾಗಿ ಅವರು ಹರಕೆ ಇಟ್ಟುಕೊಂಡಿದ್ದರು. ಅದಕ್ಕೆ ಹೋಗುವುದು, ಗೌರವ ಕೊಡುವುದು ನಮ್ಮ ಸಂಸ್ಕೃತಿ. ಹೀಗಾಗಿ ನಾನು ಹೋಗಿದ್ದೆ. ಯಾರೋ ಒಬ್ಬ ಗೀಚಿದ್ರೆ , ನೂರು ಜನ ಒಪ್ಪಿಕೊಳ್ಳಲ್ಲ' ಎಂದು ಹೇಳಿದರು.












Click it and Unblock the Notifications