ಸಿದ್ದರಾಮಯ್ಯರಲ್ಲಿ ರಾಮನ ಹೆಸರಿದೆ, ರಾವಣನ ಗುಣವಿದೆ - ನಳಿನ್ ಕುಮಾರ್ ಕಟೀಲ್
ಮಂಗಳೂರು, ಜನವರಿ 04: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಶ್ರೀರಾಮ, ಮತ್ತೆ ಯಾಕೆ ಅಲ್ಲಿಗೆ ಹೋಗಿ ಶ್ರೀರಾಮನನ್ನು ಪೂಜಿಸಬೇಕು ಎನ್ನುವ ಮಾಜಿ ಸಚಿವ ಹೆಚ್.ಆಂಜನೇಯ ಹೇಳಿಕೆಗೆ ಸಂಸದ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದು, ಹೆಸರಿಟ್ಟ ತಕ್ಷಣ ಎಲ್ಲರೂ ರಾಮನಾಗಲು ಸಾಧ್ಯವಿಲ್ಲ ಎಂದಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಎನ್ನುವುದು ಭಾವನಾತ್ಮಕ ನಂಬಿಕೆಗಳ ಸಂಕೇತ. ಮರ್ಯಾದ ಪುರುಷ ರಾಮನನ್ನು ಆದರ್ಶ ಪುರುಷನಾಗಿ ಸ್ವೀಕರಿಸಲಾಗಿದೆ. ರಾಮನಿಗೆ ಇನ್ನೊಂದು ಹೋಲಿಕೆ ಇಲ್ಲ. ರಾಮನಿಗೆ ರಾಮನೇ ಹೋಲಿಕೆ. ಹೆಸರಿಟ್ಟ ತಕ್ಷಣ ಎಲ್ಲರೂ ರಾಮನಾಗಲು ಸಾಧ್ಯವಿಲ್ಲ. ಸಿದ್ದರಾಮಯ್ಯರಲ್ಲಿ ರಾಮನ ಹೆಸರಿದೆ, ರಾವಣನ ಗುಣವಿದೆ ಎಂದರು.

ರಾಜ್ಯದಲ್ಲಿ ಗೋದ್ರಾ ಮಾದರಿಯ ಹತ್ಯಾಕಾಂಡಕ್ಕೆ ಸಂಚು, ಅಯೋಧ್ಯೆಗೆ ಹೋಗುವವರಿಗೆ ಭದ್ರತೆ ಕೊಡಬೇಕೆಂದು ಹೇಳಿಕೆ ನೀಡಿರುವ ಬಿ.ಕೆ.ಹರಿಪ್ರಸಾದ್ ಅವರ ಮೇಲೆ ಕಿಡಿಕಾರಿದ ಸಂಸದ ನಳಿನ್ ಕುಮಾರ್ ಕಟೀಲ್, ತಕ್ಷಣ ಹರಿಪ್ರಸಾದ್ ಬಂಧನವಾಗಲಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಸಿಎಂ, ಗೃಹಸಚಿವರು, ಉಪ ಮುಖ್ಯಮಂತ್ರಿಗಳು ತಮಗೇನು ಗೊತ್ತಿಲ್ಲ ಎನ್ನುತ್ತಿದ್ದಾರೆ. ಬಿ.ಕೆ ಹರಿಪ್ರಸಾದ್ ತಮ್ಮಲ್ಲಿರುವ ಮಾಹಿತಿಯನ್ನು ಗೃಹ ಇಲಾಖೆಗೆ ನೀಡಲಿ. ಇಲ್ಲದಿದ್ದಲ್ಲಿ ತಕ್ಷಣ ಅವರ ಬಂಧನವಾಗಲಿ. ಏಕೆಂದರೆ ಗೋದ್ರಾ ಘಟನೆಯ ಹಿಂದೆ ಕಾಂಗ್ರೆಸ್ ಇತ್ತು. ಮೋದಿ ಸರ್ಕಾರವನ್ನು ಬೀಳಿಸಬೇಕು ಎನ್ನುವ ಕುತಂತ್ರವನ್ನು ಆಗ ಕಾಂಗ್ರೆಸ್ ಮಾಡಿತ್ತು. ಇಂದು ಮತ್ತೆ ಈ ಹೇಳಿಕೆಯನ್ನು ಹರಿಪ್ರಸಾದ್ ಹೇಳಿದ್ದಾರೆಂದರೆ ಈ ಷಡ್ಯಂತ್ರವನ್ನು ಕಾಂಗ್ರೆಸ್ ಮಾಡಿತ್ತು ಎಂದು ಆರೋಪಿಸುತ್ತೇನೆ ಎಂದರು.

ಭಾರತ ಹಿಂದೂರಾಷ್ಟ್ರ ಆದಲ್ಲಿ ಅಪಾಯಕಾರಿ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ನಳಿನ್ ಕುಮಾರ್ ಕಟೀಲ್, ಭಾರತ ಹಿಂದೂರಾಷ್ಟ್ರವೇ. ಹಿಂದೂ ಎನ್ನುವ ಶಬ್ದ ಜಾತ್ಯಾತೀತವಾದ್ದದು. ಮಹಾತ್ಮಾ ಗಾಂಧೀಜಿಯವರು ಈ ದೇಶದಲ್ಲಿ ರಾಮ ರಾಜ್ಯದ ಪರಿಕಲ್ಪನೆ ಕಂಡಿದ್ದರು. ಅವರು ಭಾರತವನ್ನು ಜಾತ್ಯಾತೀತ ಮಾಡಲು ಹೇಳಿಲ್ಲ. ರಾಮ ರಾಜ್ಯ ಮಾಡಲು ಹೇಳಿದ್ದರು. ರಾಮ ರಾಜ್ಯದ ಪರಿಕಲ್ಪನೆಯೇ ಹಿಂದೂ ರಾಷ್ಟ್ರದ ಪರಿಕಲ್ಪನೆ.
ಗಾಂಧಿ ಒಪ್ಪಿರುವ ವಿಚಾರವನ್ನು ಯತೀಂದ್ರ ಅವರು ಒಪ್ಪುವುದಿಲ್ಲ ಅಂದರೆ ಗಾಂಧಿಯನ್ನು ಯತೀಂದ್ರ ಒಪ್ಪುತ್ತಾರೋ ಇಲ್ಲವೋ ಎಂದು ಸ್ಪಷ್ಟಪಡಿಸಬೇಕು. ಹಿಂದೂ ರಾಷ್ಟ್ರ ಆದ ಕಾರಣಕ್ಕೆ ಈ ದೇಶದಲ್ಲಿ ಜಾತ್ಯಾತೀತತೆ ಉಳಿದಿದೆ. ಹಿಂದೂ ರಾಷ್ಟ್ರದ ಪರಿಣಾಮ ಈ ದೇಶ ಉಳಿದಿದೆ. ಕಾಂಗ್ರೆಸ್ ಕಾಲದಲ್ಲಿ ಈ ದೇಶದಲ್ಲಿ ಪಾಕಿಸ್ತಾನದ ತರಹದ ಆಡಳಿತವಿತ್ತು. ಆಗ ಭಯೋತ್ಪಾದನೆ, ನಕ್ಸಲ್ ಚಟುವಟಿಕೆ ತಾಂಡವವಾಡುತ್ತಿತ್ತು. ಈಗ ಹಿಂದೂ ರಾಷ್ಟ್ರದ ಪರಿಕಲ್ಪನೆಯಡಿ ಎಲ್ಲವೂ ನಿಂತಿದೆ ಎಂದರು.
ಕರಸೇವಕರ ಬಂಧನದ ವಿಚಾರವಾಗಿ ಮಾತನಾಡಿದ ಅವರು, ನಾನೂ ಕರಸೇವಕ, ರಾಮಭಕ್ತ. ಯಾವ ಕರಸೇವಕರನ್ನು ಬಂಧಿಸುತ್ತಿರುವ ಸರ್ಕಾರ, ಶಕ್ತಿಯಿದ್ದರೆ ನನ್ನನ್ನು ಬಂಧಿಸಲಿ. ಎಲ್ಲಾ ಕರ ಸೇವಕರನ್ನು ಬಂಧಿಸಲಿ. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.












Click it and Unblock the Notifications