ತಂದೆ ಕೋಪಕ್ಕೆ ಮಗ ಬಲಿ; ಜಿಪುಣತನ, ಸಿಡುಕಿಗೆ ಮಗನ ಕೊಲೆ!
ಮಂಗಳೂರು, ಅಕ್ಟೋಬರ್ 08: ಮಂಗಳೂರಿನ ಮಾರ್ಗನ್ಸ್ ಗೇಟ್‌ನಲ್ಲಿ ತಂದೆಯಿಂದ ಮಿಸ್ ಫೈರ್ ಆದ ಗುಂಡು ಮಗನ ತಲೆಯೊಳಗೆ ಹೊಕ್ಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಗ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಧೀಂದ್ರ ಶುಕ್ರವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಆರೋಪಿ ಮತ್ತು ಸುಧೀಂದ್ರ ತಂದೆ ರಾಜೇಶ್ ಪ್ರಭುವನ್ನು ಬಂಧಿಸಿದ್ದಾರೆ.
ಅಕ್ಟೋಬರ್ 5ರಂದು ಮಂಗಳೂರು ನಗರದ ಮಾರ್ಗನ್ಸ್ ಗೇಟ್ ಬಳಿ ಘಟನೆ ನಡೆದಿತ್ತು. ವೈಷ್ಣವಿ ಕಾರ್ಗೋ ಲಿಮಿಟೆಡ್ ಕಂಪೆನಿ ಮಾಲಕ ರಾಜೇಶ್ ಪ್ರಭು ಸಂಬಳ ಕೇಳಿದ ಕೆಲಸದಾಳುಗಳ ಜೊತೆ ಜಟಾಪಟಿ ನಡೆಸಿದ ಸಂದರ್ಭದಲ್ಲಿ, ಕೈಯಲ್ಲಿದ್ದ ರಿವಾಲ್ವರ್‌ನಿಂದ ಗುಂಡು ಸಿಡಿದು ಮಗನ ತಲೆಯೊಳಗೆ ಹೊಕ್ಕಿದೆ.

ಕೂಡಲೇ ಮಗ ಸುಧೀಂದ್ರನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಧೀಂದ್ರನ ಎಡಗಣ್ಣಿನ ಭಾಗದಿಂದ ಹೊಕ್ಕಿದ ಗುಂಡು ಮಿದುಳಿನ ಮೂಲಕ ಹಾದು ಹೋಗಿ, ತಲೆಯ ಒಳಗೆ ಎಂಟು ಇಂಚು ಹೋಗಿತ್ತು. ಸುಧೀಂದ್ರನ ಮೆದುಳು ನಿಷ್ಕ್ರಿಯ ವಾಗಿದ್ದು, ಬದುಕುಳಿಯುವ ಸಾಧ್ಯತೆ ಕಡಿಕೆಯಾಗಿತ್ತು. ಶುಕ್ರವಾರ ಮುಂಜಾನೆ ಸುಧೀಂದ್ರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಸುಧೀಂದ್ರ (16) ಮಂಗಳೂರಿನ ಶಾಲೆಯೊಂದರಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ. ಅಕ್ಟೋಬರ್ 5ರಂದು ತಂದೆ ರಾಜೇಶ್ ಪ್ರಭು ಕೆಲಸಗಾರರೊಂದಿಗೆ ಜಟಾಪಟಿ ನಡೆಸುವ ಸಂದರ್ಭದಲ್ಲಿ ಸುಧೀಂದ್ರನೂ ತಂದೆಯ ಜೊತೆ ಕೆಲಸಗಾರರರೊಡನೆ ಹೊಡೆದಾಟ ನಡೆಸಿದ್ದಾನೆ. ಜಟಾಪಟಿಯಾಗುವ ವೇಳೆ ರಾಜೇಶ್ ಪ್ರಭು ಕೈಯಲ್ಲಿದ್ದ ರಿವಾಲ್ವರ್‌ನಿಂದ ಗುಂಡು ಹಾರಿದೆ. ಎರಡು ಸುತ್ತು ಹಾರಿದ ಗುಂಡು ನೇರ ಸುಧೀಂದ್ರ ತಲೆಯೊಳಗೆ ಹೊಕ್ಕಿದೆ.
ರಾಜೇಶ್ ಪ್ರಭುವಿಗೆ ಎರಡು ಮಕ್ಕಳಿದ್ದು, ಸಣ್ಣ ಮಗಳು ವೈಷ್ಣಮಿ ಚಿಕ್ಕ ಪ್ರಾಯದಲ್ಲಿ ನಿಧನಳಾಗಿದ್ದಳು. ಮಗಳ ಹೆಸರಿನಲ್ಲಿ ಉದ್ಯಮ ಸ್ಥಾಪಿಸಿದ್ದ ರಾಜೇಶ್ ಪ್ರಭು, ಉದ್ಯಮದಲ್ಲಿ ಯಶಸ್ವಿಯಾಗಿದ್ದರು. ಆದರೆ ಸಿಡುಕು ಸ್ವಭಾವವನ್ನು ಹೊಂದಿದ್ದ ರಾಜೇಶ್ ಪ್ರಭು, ಕೆಲಸಗಾರರನ್ನು ಹದ್ದುಬಸ್ತಿನಲ್ಲಿ ಇಡುತ್ತಿದ್ದರು. ಇದಕ್ಕಾಗಿಯೇ ರಿವಾಲ್ವರ್ ಖರೀದಿಸಿದ್ದರು.
ರಾಜೇಶ್ ಪ್ರಭು ಹಣದ ವಿಚಾರದಲ್ಲಿ ಜಿಪುಣನಾಗಿದ್ದು, ಕಛೇರಿ ಎದುರಲ್ಲೇ ಅಡ್ಮಿಷನ್, ಡೊನೇಶನ್, ಜಾಹೀರಾತು ಕೇಳಿ ಬರುವವರಿಗೆ ಕಚೇರಿ ಒಳಗೆ ಪ್ರವೇಶವಿಲ್ಲ ಅಂತಾ ಬೋರ್ಡ್ ಹಾಕಿದ್ದರು.
ಅಕ್ಟೋಬರ್ 5ರಂದು ರಾಜೇಶ್ ಪ್ರಭು ಸಂಸ್ಥೆಯ ಲಾರಿ ಚಾಲಕ ಮತ್ತು ಕ್ಲೀನರ್ ಮುಂಬೈಗೆ ಸಂಸ್ಥೆಯ ಕೆಲಸಕ್ಕೆಂದೇ ಟ್ರಿಪ್ ಹೋಗಿದ್ದರು. ಟ್ರಿಪ್ ಮುಗಿಸಿ ಬಂದು ಸಂಬಳ ಕೇಳುವಾಗ, ರಾಜೇಶ್ ಪ್ರಭು ಪತ್ನಿ ನಾಲ್ಕು ಸಾವಿರ ರೂಪಾಯಿ ಸಂಬಳ ಕಡಿಮೆಯೇ ನೀಡಿದ್ದರು. ಟ್ರಿಪ್ ಸಂಧರ್ಭದಲ್ಲಿ ವಾಹನ ಕೆಲವು ಬಿಡಿಭಾಗಗಳು ಹಾನಿಯಾಗಿದೆ. ಈ ಕಾರಣಕ್ಕಾಗಿ 4 ಸಾವಿರ ಕಡಿತಗೊಳಿಸಿದ್ದೇವೆ ಅಂತಾ ಕಾರಣ ನೀಡಿದ್ದರು.
ಆದರೆ ಲಾರಿ ಚಾಲಕ ಮತ್ತು ಕ್ಲೀನರ್ ಇದಕ್ಕೆ ಅಸಮಾಧಾನಗೊಂಡು ವಾಗ್ವಾದ ನಡೆಸಿದ್ದರು. ಇದರಿಂದಾಗಿ ಪತ್ನಿ ರಾಜೇಶ್ ಪ್ರಭುಗೆ ಕರೆ ಮಾಡಿ ತಕ್ಷಣ ಕಛೇರಿಗೆ ಬರಲು ಹೇಳಿದ್ದಾರೆ. ಮನೆಯಿಂದ ರಿವಾಲ್ವರ್ ತೆಗೆದುಕೊಂಡು ಮಗ ಸುಧೀಂದ್ರನ ಜೊತೆ ಕಚೇರಿಗೆ ಆಗಮಿಸಿದ ರಾಜೇಶ್ ಪ್ರಭು, ಕೆಲಸಗಾರರ ಜೊತೆ ಹೊಡೆದಾಟಕ್ಕಿಳಿದಿದ್ದಾರೆ. ಈ ವೇಳೆ ಮಗ ಸುಧೀಂದ್ರನೂ ಕೆಲಸಗಾರರಿಗೆ ಹೊಡೆದಿದ್ದಾನೆ. ಈ ವೇಳೆ ರಾಜೇಶ್ ಪ್ರಭು ರಿವಾಲ್ವರ್‌ನಿಂದ ಸಿಡಿದ ಗುಂಡು ಮಗನನ್ನು ಬಲಿ ಪಡೆದಿದೆ.
ರಾಜೇಶ್ ಪ್ರಭುವಿಗೆ ಹಿಂದೆ ಹೃದಯನೋವಿದ್ದು, ಸ್ಟಂಟ್ ಅಳವಡಿಸಲಾಗಿತ್ತು. ಘಟನೆಯಾದ ಬಳಿಕ ಎದೆನೋವು ಅಂತಾ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಆದರೆ ಈಗ ಆಸ್ಪತ್ರೆ ಯಿಂದ ಬಿಡುಗಡೆಗೊಂಡಿದ್ದು, ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.
ಪೊಲೀಸರ ಸಮ್ಮುಖದಲ್ಲಿ ಇದ್ದ ಒಬ್ಬನೇ ಮಗನ ಚಿತೆಗೆ ಬೆಂಕಿ ಇಟ್ಟಿದ್ದಾರೆ. ಕೋಪದ ಕೈಗೆ ಬುದ್ದಿ ಕೊಟ್ಟು, ಇದ್ದ ಒಬ್ಬ ಮಗನನ್ನು ಕೈಯಾರೆ ಸಾಯಿಸಿ ಪುತ್ರ ಶೋಕವನ್ನು ನಿರಂತರವಾಗಿ ಅನುಭವಿಸುವಂತಾಗಿದೆ.












Click it and Unblock the Notifications