ನಾನು ಸಚಿವನಾಗಿದ್ದಾಗ ರೌಡಿಗಳಿಗೆ ಭಯ ಇತ್ತು; ಯು. ಟಿ. ಖಾದರ್
ಮಂಗಳೂರು, ಸೆಪ್ಟೆಂಬರ್ 29; ಮಂಗಳೂರು ನಗರದ ಹೊರವಲಯದ ಸುರತ್ಕಲ್‌ನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಟೀಕಾ ಪ್ರಹಾರ ಮಾಡಿದೆ. ನೈತಿಕ ಪೊಲೀಸ್ ಗಿರಿ ಮಾಡಿದ ಆರೋಪಿಗಳು ಬಂಧನವಾದ ಕೆಲವೇ ಕ್ಷಣಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಪೊಲೀಸರ ವಿರುದ್ಧ ಮಾಜಿ ಸಚಿವ ಯು. ಟಿ. ಖಾದರ್ ಗುಡುಗಿದ್ದಾರೆ.
ಬುಧವಾರ ಮಂಗಳೂರಿನಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕ ಯು. ಟಿ. ಖಾದರ್, "ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸಮಾಜದ್ರೋಹಿ ಶಕ್ತಿಗಳು, ರೌಡಿಗಳ ಅಟ್ಟಹಾಸ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಕಾನೂನಿನ ಭಯವಿಲ್ಲದೇ ರೌಡಿಗಳು ಅಟ್ಟಹಾಸ ತೋರಿಸುತ್ತಿದ್ದಾರೆ" ಎಂದು ದೂರಿದರು.
"ಆಡಳಿತ ಪಕ್ಷದ ಒತ್ತಡದಿಂದ ಪೊಲೀಸ್ ಇಲಾಖೆ ನಿಸ್ಸಾಹಕವಾಗಿದೆ. ಹೀಗಾಗಿ ನೈತಿಕ ಪೊಲೀಸ್ ಗಿರಿ ಮಾಡಿದ ಆರೋಪಿಗಳು ಬಂಧನವಾದ ಕ್ಷಣ ಮಾತ್ರದಲ್ಲೇ ಬಿಡುಗಡೆಯಾಗಿದ್ದಾರೆ" ಅಂತಾ ಯು. ಟಿ. ಖಾದರ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

"ಪೊಲೀಸರು ರಾಜಕೀಯ ಬಾಸ್‌ಗಳ ಮಾತುಗಳಿಗೆ ಗೌರವ ಕೊಡಬಾರದು. ಕಾನೂನುಗಳಿಗೆ ಪೊಲೀಸರು ಗೌರವ ಕೊಡಬೇಕು. ಯಾರದೋ ಮಕ್ಕಳಿಗೆ ಸಂಬಂಧ ಇಲ್ಲದವರು ಹೊಡೆಯುತ್ತಿದ್ದಾರೆ. ಈ ರೀತಿ ಆದರೆ ಅರಾಜಕತೆ ಸೃಷ್ಟಿಯಾಗುತ್ತದೆ. ಪೊಲೀಸರ ಮುಂದೆಯೇ ಹೊಡೆಯುತ್ತಾರೆ. ಪೊಲೀಸರು ಹೊಡೆಯಬೇಡಿ ಎಂದು ಅಂಗಲಾಚುವ ವಿಡಿಯೋ ವೈರಲ್ ಆಗುತ್ತಿದೆ. ಹಾಗಾದರೆ ಪೊಲೀಸ್ ಇಲಾಖೆಯ ಲಾಠಿ ಎಲ್ಲಿ ಹೋಯಿತು?" ಎಂದು ಯು. ಟಿ. ಖಾದರ್ ಪ್ರಶ್ನೆ ಮಾಡಿದರು.
"ಪೊಲೀಸರು ಲಾಠಿ ಬಿಟ್ಟರೆ ಜನರು ಲಾಠಿ ಹಿಡಿದು ತಿರುಗುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಪೊಲೀಸ್ ಇಲಾಖೆ ದಾಳಿ ಮಾಡಿದವರ ಮೇಲೆ ಯಾವ ಕೇಸ್ ಹಾಕಿದೆ. ಈ ಪ್ರಕರಣದಲ್ಲಿ ಯಾರ ಒತ್ತಡ ಇತ್ತು?" ಅಂತಾ ಯು. ಟಿ. ಖಾದರ್ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
"ಮಂಗಳೂರಿನಲ್ಲಿ ಐಟಿ-ಬಿಟಿ ಕಂಪೆನಿಗಳನ್ನು ಮಾಡುವುದಕ್ಕೆ ಹೆದರುವ ಸ್ಥಿತಿ ಬಂದಿದೆ. ಉದ್ಯೋಗಕ್ಕಾಗಿ ಏಕೆ ಯುವಕ-ಯುವತಿಯರು ಮಂಗಳೂರಿಗೆ ಬರುತ್ತಿಲ್ಲ. ಯಾರೋ ಒಬ್ಬ ರೌಡಿ ರಸ್ತೆಯಲ್ಲಿ ಹೊಡಿತಾರೆ ಅಂದರೆ ಯಾರಾದರೂ ಕಳುಹಿಸುತ್ತಾರ?. ಆತ್ಮವಿಶ್ವಾಸ ಧೈರ್ಯ ತುಂಬುವ ಕೆಲಸ ಪೊಲೀಸರು ಮಾಡಬೇಕಿತ್ತು. ಆದರೆ ಆರೋಪಿಗಳು ಬೆಳಗ್ಗೆ ಹೋಗಿ ಸಂಜೆ ಜಾಮೀನಿನ ಮೇಲೆ ಹೊರಗೆ ಬರುತ್ತಾರೆ" ಎಂದು ಟೀಕಿಸಿದರು.
"ಕಾಂಗ್ರೆಸ್ ಸರ್ಕಾರ ಇದ್ದಾಗ ಈ ರೀತಿಯ ಸ್ಥಿತಿ ಇರಲಿಲ್ಲ. ನಾನು ಸಚಿವನಾಗಿದ್ದಾಗ ಇಂತಹುದುಕ್ಕೆ ಅವಕಾಶ ಕೊಟ್ಟಿಲ್ಲ. ರೌಡಿಗಳಿಗೆ ಈ ಹಿಂದೆ ಭಯವಿತ್ತು. ಪೊಲೀಸ್ ಇಲಾಖೆಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಸಹಕಾರ ಕೊಡುತ್ತದೆ. ರೌಡಿಗಳಿಗೆ, ಸಮಾಜದ್ರೋಹಿ ಶಕ್ತಿಗಳಿಗೆ ತಕ್ಕ ಶಾಸ್ತಿ ಮಾಡಬೇಕು. ಯಾವುದೇ ಧರ್ಮದವರಾದರೂ ಅವರು ಸಮಾಜ ದ್ರೋಹಿ ಶಕ್ತಿಗಳು. ನಿಜವಾದ ದೇಶದ್ರೋಹಿಗಳು ಇವರೇ" ಎಂದರು.
ಸಿದ್ದರಾಮಯ್ಯ ಖಂಡಿಸಿದ್ದರು; ಮಂಗಳೂರಿನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಖಂಡಿಸಿದ್ದರು. ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿ ಟ್ವೀಟ್ ಮಾಡಿದ್ದರು.
ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, "ಸನ್ಮಾನ್ಯ ಮುಖ್ಯಮಂತ್ರಿ ಅವರೇ ಮಂಗಳೂರಿನಲ್ಲಿ ಇರುವುದು ಬಿಜೆಪಿ ಸರ್ಕಾರನಾ?, ತಾಲಿಬಾನ್‌ಗಳದ್ದಾ?" ಎಂದು ಪ್ರಶ್ನೆ ಮಾಡಿದ್ದರು.
ವಿದ್ಯಾರ್ಥಿಗಳ ಮೇಲೆ ಯುವಕರ ಗುಂಪು ತಮ್ಮ ಮೇಲೆ ಹಲ್ಲೆ ನಡೆಸಲು ಯತ್ನಿಸಿದೆ ಎಂದು ವಿದ್ಯಾರ್ಥಿಗಳು ಸುರತ್ಕಲ್ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು 5 ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿದ್ದರು.
ಬಂಧಿತರನ್ನು ಭಜರಂಗದಳ ಜಿಲ್ಲಾ ಮುಖಂಡ ಪ್ರೀತಂ ಶೆಟ್ಟಿ, ಭಜರಂಗದಳ ಸುರತ್ಕಲ್ ಪ್ರಖಂಡ ಪ್ರಮುಖ್ ಹರ್ಷಿತ್, ಶ್ರೀನಿವಾಸ್, ರಾಕೇಶ್ ಮತ್ತು ಅಭಿಷೇಕ್ ಎಂದು ಗುರುತಿಸಲಾಗಿತ್ತು. ಆದರೆ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಆರೋಪಿಗಳು ಠಾಣಾ ಜಾಮೀನಿನ ಮೂಲಕ ಬಿಡುಗಡೆಯಾಗಿದ್ದಾರೆ. ಈ ವಿಚಾರದ ಕುರಿತು ಚರ್ಚೆ ನಡೆಯುತ್ತಿದೆ.












Click it and Unblock the Notifications