ಮಂಗಳೂರಿನಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ತಬ್ಬಿಬ್ಬಾದ ಶಾಸಕ ಮಾಡಿದ್ದೇನು?
ಮಂಗಳೂರು, ಅಕ್ಟೋಬರ್ 10: ಕುದ್ರೋಳಿ ಕಸಾಯಿಖಾನೆ ವಿಚಾರದಲ್ಲಿ ಪತ್ರಕರ್ತರಿಂದ ತೂರಿ ಬಂದ ಪ್ರಶ್ನೆಗಳಿಗೆ ಉತ್ತರಿಸಲಾಗದೇ ತಬ್ಬಿಬ್ಬಾದ ಬಿಜೆಪಿ ಶಾಸಕ ಸಂಜೀವ ಮಠಂದೂರು ಪತ್ರಿಕಾಗೋಷ್ಠಿಯನ್ನು ಮೊಟಕುಗೊಳಿಸಿ, ಅರ್ಧದಲ್ಲೇ ಎದ್ದು ಹೊರನಡೆದ ಪ್ರಸಂಗ ಮಂಗಳೂರಿನಲ್ಲಿ ನಡೆದಿದೆ.
ಕುದ್ರೋಳಿ ಕಸಾಯಿಖಾನೆಯನ್ನು ಅಭಿವೃದ್ಧಿಗೊಳಿಸುವ ಸಚಿವ ಖಾದರ್ ಅವರ ಹೇಳಿಕೆ ವಿಚಾರದಲ್ಲಿ ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜೀವ ಮಠಂದೂರು, ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ ಕಸಾಯಿಖಾನೆ ಅಭಿವೃದ್ಧಿಗೆ 15 ಕೋಟಿ ರೂಪಾಯಿಯನ್ನು ಸಚಿವ ಖಾದರ್ ನೀಡಿದ್ದಾರೆ ನಗರದ ಸಮಗ್ರ ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ನೀಡಿದ ಹಣವನ್ನು ಖಾದರ್ ಈ ರೀತಿ ದುರುಪಯೋಗಪಡಿಸುವುದು ಸರಿಯಲ್ಲ.

ಖಾದರ್ ಅಲ್ಪಸಂಖ್ಯಾತರನ್ನು ಓಲೈಸಲು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಈ ಕಸಾಯಿಖಾನೆಯ ಅಭಿವೃದ್ಧಿ ಯೋಜನೆಯನ್ನು ಜಾರಿಯಾಗಲು ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದು ತಿಳಿಸಿದರು.
ಈ ನಡುವೆ ಶಾಸಕ ಸಂಜೀವ ಮಠಂದೂರು ಅವರಿಗೆ ಪತ್ರಕರ್ತರು ಮರು ಪ್ರಶ್ನೆ ಹಾಕಿದ್ದಾರೆ. ಕಸಾಯಿಖಾನೆ ಅಭಿವೃದ್ಧಿ ನಗರದ ಸ್ವಚ್ಛತೆ ಬಗ್ಗೆ ಕಾಳಜಿಯಿಂದಾಗಿಯೇ ಅಲ್ಲವೇ? ಎಂದಾಗ ಶಾಸಕರು ಉತ್ತರಿಸಲಾಗದೇ ಚಡಪಡಿಸಿದ್ದಾರೆ.
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಕಮಿಟಿಯಲ್ಲಿ ಬಿಜೆಪಿ ಸದಸ್ಯರೂ ಕೂಡ ಇದ್ದು, ಈ ಕಸಾಯಿಖಾನೆಯ ಅಭಿವೃದ್ಧಿ ಪ್ರಸ್ತಾವನೆಗೆ ಯಾರೂ ಏಕೆ ವಿರೋಧ ವ್ಯಕ್ತಪಡಿಸಿಲ್ಲ ಎಂದು ಪತ್ರಕರ್ತರು ಶಾಸಕರಿಗೆ ಮರು ಪ್ರಶ್ನೆ ಹಾಕಿದರು.
ಈ ಸಂದರ್ಭದಲ್ಲಿ ತಮ್ಮತ್ತ ತೂರಿ ಬಂದ ಮತ್ತಷ್ಟು ಪ್ರಶ್ನೆಗಳಿಂದಾಗಿ ಕೆಲಹೊತ್ತು ಗೊಂದಲಕ್ಕೀಡಾದ ಸಂಜೀವ ಮಠಂದೂರು, ಯಾವುದೇ ಪ್ರಶ್ನೆಗೂ ಸಮರ್ಪಕವಾಗಿ ಉತ್ತರಿಸದೇ, ಅರ್ಧದಲ್ಲೇ ಎದ್ದು ಹೊರನಡೆದಿದ್ದಾರೆ. ಇದರಿಂದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಮತ್ತಿತರರು ಮುಜುಗರ ಎದುರಿಸಿದರು.












Click it and Unblock the Notifications