ಕೋಮು ದ್ವೇಷದಿಂದ ಧಗಧಗಿಸಿದ್ದ ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರಿಡಲು ಸಜ್ಜು
ಮಂಗಳೂರು, ಆಗಸ್ಟ್, 21: ಕರಾವಳಿಯಲ್ಲಿ ಸಾವರ್ಕರ್ ಕಿಚ್ಚು ಮತ್ತೆ ಹೆಚ್ಚಾಗಿದ್ದು, ಸುರತ್ಕಲ್ ಸರ್ಕಲ್‌ಗೆ ಸಾವರ್ಕರ್ ಹೆಸರಿಡಲು ತೆರೆಮರೆಯ ಸಿದ್ಧತೆ ನಡೆದಿದೆ. ಇದೆಲ್ಲ ಚುನಾವಣಾ ತಯಾರಿ ಎಂದು ಕಾಂಗ್ರೆಸ್ ವಾದವಾಗಿದೆ. ಮತ್ತೊಂದೆಡೆ ಬಿಜೆಪಿ ಶಾಸಕ ಡಾ. ವೈ. ಭರತ್ ಶೆಟ್ಟಿ ಮಾತ್ರ ಸಾವರ್ಕರ್ ಹೆಸರು ಇಟ್ಟೇ ಇಡುತ್ತೇವೆ ಎಂದು ಶಪಥಗೈದಿದ್ದಾರೆ.
ಕರಾವಳಿಯಲ್ಲಿ ಧರ್ಮ ದಂಗಲ್ ಬಳಿಕ ಸಾವರ್ಕರ್ ವಿವಾದ ಜೋರಾಗಿದೆ. ಸುರತ್ಕಲ್ ಗ್ರಾಮ ಪಂಚಾಯತ್ ವತಿಯಿಂದ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಮಾಡಲಾಗಿತ್ತು. ಆಗ ಎಸ್‌ಡಿಪಿಐ ಕಾರ್ಯಕರ್ತರು ಸಾವರ್ಕರ್ ಫೋಟೋವನ್ನು ವಿರೋಧಿಸಿದ್ದರು. ಇದರ ಬೆನ್ನಲ್ಲೇ ಇದೀಗ ಸುರತ್ಕಲ್ ಶಾಸಕ ಭರತ್ ಶೆಟ್ಟಿ ಪ್ರತಿಕ್ರಿಯೆ ನೀಡಲು ಹೊರಟಿದ್ದಾರೆ. ಸುರತ್ಕಲ್ ಸರ್ಕಲ್‌ಗೆ ಸಾವರ್ಕರ್ ಹೆಸರಿಡುವುದಕ್ಕೆ ತೆರೆಮರೆಯಲ್ಲಿ ಸಿದ್ಧತೆಗಳು ಆರಂಭವಾಗಿದೆ.
ಕಳೆದ 9 ತಿಂಗಳ ಹಿಂದೆ ಮಂಗಳೂರು ಮಹಾನಗರ ಪಾಲಿಕೆಗೆ ಈ ಬಗ್ಗೆ ಶಾಸಕ ಭರತ್ ಶೆಟ್ಟಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಇದೀಗ ಅಧಿಕಾರಿಗಳಿಂದ ಈ ಪ್ರಸ್ತಾವನೆಗೆ ಸಮ್ಮತಿ ದೊರೆತಿದ್ದು, ವರದಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ವಿವಾದದ ಸಂದರ್ಭದಲ್ಲಿ ಸಾವರ್ಕರ್ ಹೆಸರು ಇಡುವುದಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಕರಾವಳಿಯಲ್ಲಿ ಮತ್ತೆ ದ್ವೇಷದ ಕಿಚ್ಚು ಹೊತ್ತಿ ಉರಿಯುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ.

ಕಾಂಗ್ರೆಸ್ ವಿರುದ್ಧ ಭರತ್ ಶೆಟ್ಟಿ ಪ್ರತಿಕ್ರಿಯೆ; ಈ ಬಗ್ಗೆ ಶಾಸಕ ಡಾ. ವೈ. ಭರತ್ ಶೆಟ್ಟಿ ಪ್ರತಿಕ್ರಿಯೆ ನೀಡಿ, "ಹಿಂದೂ ಸಂಘಟನೆಗಳು ಸ್ಥಳೀಯರು ಸಾವರ್ಕರ್ ಹೆಸರಿಡಲು ಮನವಿ ಸಲ್ಲಿಸಿದ್ದರು. ಒಂಭತ್ತು ತಿಂಗಳ ಹಿಂದೆ ಈ ಪ್ರಕ್ರಿಯೆ ಶುರು ಆಗಿದೆ. ಸಾವರ್ಕರ್ ವಿರುದ್ಧ ಯಾಕೆ ಈ ರೀತಿ ವರ್ತನೆ ತೋರುತ್ತಿದ್ದಾರೆ ಎನ್ನುವದು ಗೊತ್ತಿಲ್ಲ. "ಪಾರ್ಲಿಮೆಂಟ್‌ನ ಒಳಗೆ ಸಾವರ್ಕರ್ ಫೋಟೋ ಇದೆ. ವೋಟ್ ಬ್ಯಾಂಕ್ ರಾಜಕೀಯಕ್ಕೆ ಸಾವರ್ಕರ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ." ವಿರೋಧ ವ್ಯಕ್ತಪಡಿಸುವವರು ಒಮ್ಮೆ ಇತಿಹಾಸ ಓದಿಕೊಂಡು ಬರಲಿ ಎಂದು ಗುಡುಗಿದರು.
ಬಿಜೆಪಿ ವಿರುದ್ಧ ಮೊಯಿದ್ದೀನ್ ಗುಡುಗು; ಆದರೆ ಭರತ್ ಶೆಟ್ಟಿ ಅವರ ಪ್ರಸ್ತಾಪಕ್ಕೆ ಕಾಂಗ್ರೆಸ್ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ. ಕೋಮು, ದ್ವೇಷದ ಹತ್ಯೆಯಿಂದ ಉದ್ವಿಗ್ನ ಸ್ಥಿತಿಯಲ್ಲಿದ್ದ ಸುರತ್ಕಲ್ ಸದ್ಯ ಶಾಂತವಾಗಿದೆ. ಆದರೆ "ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸೋಲುವ ಭಯದಲ್ಲಿ ಜನರ ಮನಸ್ಸಿನಲ್ಲಿ ಕೋಮು ಹುಟ್ಟುಹಾಕುವ ಕುತಂತ್ರವನ್ನು ಅನುಸರಿಸುತ್ತಿದೆ. ಸಾವರ್ಕರ್ ಹೆಸರಿನಲ್ಲಿ ಸಮಾಜವನ್ನು ಮತ್ತೆ ಒಡೆಯುವ ನೀತಿಗೆ ಬಿಜೆಪಿ ಕೈ ಹಾಕಿದೆ," ಎಂದು ಸುರತ್ಕಲ್‌ನ ಮಾಜಿ ಶಾಸಕ ಮೊಯಿದ್ದೀನ್ ಬಾವ ಆಕ್ರೋಶ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಶಿವಮೊಗ್ಗದ ಬಳಿಕ ರಾಜ್ಯಾದ್ಯಂತ ಹಬ್ಬಿದ್ದ ಸಾವರ್ಕರ್ ವಿವಾದ ಇದೀಗ ಕರಾವಳಿಯಲ್ಲಿ ಹೊತ್ತಿ ಉರಿಯುವ ಸಾಧ್ಯತೆಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಹರಸಾಹಸಪಟ್ಟಿದ್ದ ಪೊಲೀಸರಿಗೆ ಈ ಸಾವರ್ಕರ್ ವಿವಾದ ಮತ್ತೊಂದು ಸವಾಲಾಗಿ ಪರಿಣಮಿಸಿದೆ.












Click it and Unblock the Notifications