ನಾಪತ್ತೆಯಾದ ವ್ಯಕ್ತಿ ಕೊಲೆಯಾಗಿ ಪತ್ತೆ: ಪತ್ನಿಯ ಕೈವಾಡವಿರುವ ಶಂಕೆ
ಮಂಗಳೂರು, ಸೆಪ್ಟೆಂಬರ್.24: ಬಜ್ಪೆ ಠಾಣೆಯಲ್ಲಿ ಇತ್ತೀಚೆಗೆ ಗಂಜಿಮಠ ನಿವಾಸಿ ಮಹಮ್ಮದ್ ಸಮೀರ್ ಎಂಬಾತ ನಾಪತ್ತೆಯಾಗಿರುವುದಾಗಿ ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ಪತ್ನಿ ಫಿರ್ದೌಸ್ ಮತ್ತು ಮಗುವಿನ ಜೊತೆ ಬೆಂಗಳೂರಿಗೆ ತೆರಳಿದ್ದ ಸಮೀರ್ ನಾಪತ್ತೆ ಆಗಿದ್ದಾನೆಂದು ಸಮೀರ್ ಅವರ ತಂದೆ ಬಜ್ಪೆ ಠಾಣೆ ಯಲ್ಲಿ ದೂರು ನೀಡಿದ್ದರು.
ಈ ಪ್ರಕರಣದ ಜಾಡು ಹಿಡಿದು ಹೋದ ಪೊಲೀಸರಿಗೆ ಮಹಮ್ಮದ್ ಸಮೀರ್ ತಮಿಳುನಾಡಿನ ಕೃಷ್ಣಗಿರಿ ಎಂಬಲ್ಲಿ ಕೊಲೆಯಾಗಿರುವುದು ಪತ್ತೆಯಾಗಿದೆ. ಇದೀಗ ಈತನ ಕೊಲೆ ಪ್ರಕರಣಕ್ಕೂ ಪತ್ನಿಗೂ ಏನಾದರೂ ಸಂಭವಿದೆಯಾ ಎಂಬ ಶಂಕೆ ಇದೀಗ ಪೊಲೀಸರಿಗೆ ವ್ಯಕ್ತವಾಗುತ್ತಿದೆ.
ಅವರಿಗೆ ಹಾಗನಿಸಲು ಕಾರಣ ಬೆಂಗಳೂರಿಗೆ ತೆರಳಿದ್ದ ಪತ್ನಿ ಫಿರ್ದೌಸ್ ಸೆಪ್ಟೆಂಬರ್. 19 ರಂದು ಕಾಪುವಿನ ತವರು ಮನೆಗೆ ಆಗಮಿಸಿದ್ದು, ಮರುದಿನ ಮೂರು ತಿಂಗಳ ಮಗುವನ್ನು ಮನೆಯಲ್ಲಿ ಬಿಟ್ಟು ನಾಪತ್ತೆಯಾಗಿದ್ದಾಳೆ.

ಹೀಗಾಗಿ ಕಾಪು ಪೊಲೀಸ್ ಠಾಣೆಯಲ್ಲಿ ಮನೆಯವರು ಫಿರ್ದೌಸ್ ನಾಪತ್ತೆ ಬಗ್ಗೆ ಕೇಸು ದಾಖಲಿಸಿದ್ದಾರೆ. ಪತ್ನಿಯ ನಾಪತ್ತೆಯಿಂದಾಗಿ ಕೊಲೆಯ ಹಿಂದೆ ಆಕೆಯ ಕೈವಾಡ ಇರಬಹುದು ಎಂಬ ಶಂಕೆ ವ್ಯಕ್ತವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications