ಗದ್ದೆಗಿಳಿದು ಭತ್ತ ನಾಟಿ ಮಾಡಿದ ಸಚಿವ ಯುಟಿ ಖಾದರ್ ಫೋಟೋ ವೈರಲ್
ಮಂಗಳೂರು, ಸೆಪ್ಟೆಂಬರ್ 18 : ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ಕೆಸರು ಗದ್ದೆಗಿಳಿದು ಭತ್ತ ನಾಟಿ ಮಾಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳೊಂದಿಗೆ ಗದ್ದೆಗಿಳಿದ ಸಚಿವ ಖಾದರ್, ಭತ್ತದ ನೇಜಿ ನಾಟಿ ಮಾಡುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಣ್ಣೆರೆಪಾಲು ಗದ್ದೆಯಲ್ಲಿ ಕಳೆದ 2 ದಿನಗಳಿಂದ ಭತ್ತದ ನೇಜಿ ನಾಟಿ ಕಾರ್ಯ ನಡೆಯುತ್ತಿತ್ತು. ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಕೃಷಿ ಕಾರ್ಯಕ್ರಮ ವೀಕ್ಷಿಸಲು ಸಚಿವ ಯುಟಿ ಖಾದರ್ ಹಠತ್ತಾಗಿ ಭೇಟಿ ನೀಡಿದ್ದರು. ಈ ವೇಳೆ ಒಂದು ಕೈ ನೋಡಿಯೇ ಬಿಡೋಣವೆಂದ ಯು.ಟಿ ಖಾದರ್, ಶೂ ಕಳಚಿ, ಪ್ಯಾಂಟ್ ಮಡಚಿ ಗದ್ದೆಗೆ ಇಳಿದು ವಿದ್ಯಾರ್ಥಿಗಳೊಂದಿಗೆ ಭತ್ತದ ನೇಜಿ (ಸಸಿ) ನಾಟಿ ಮಾಡಿದರು.

ಸಚಿವರ ಈ ಕಾರ್ಯ ವಿದ್ಯಾರ್ಥಿಗಳಿಗೆ ಮತ್ತಷ್ಟು ಉತ್ಸಾಹ ತುಂಬಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕ್ಲಿಕ್ಕಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಂಗಳೂರು ಹೊರವಲಯದ ಕೋಣಾಜೆ ಸಮೀಪದ ಅಣ್ಣೆರೆಪಾಲು ಗದ್ದೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರೈತ ಸಂಘದ ಹಸಿರು ಸೇನೆಯ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ 'ನಡಿಗೆ ಹಡಿಲು ಭೂಮಿಯ ಕಡೆಗೆ' ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .












Click it and Unblock the Notifications