ಮಂಗಳೂರು: ಹಂತಕ ರವೀಂದ್ರ ಪೂಜಾರಿ ತಂಡದ ಐವರ ಬಂಧನ
ಮಂಗಳೂರು, ಅಕ್ಟೋಬರ್, 28 : ಮೆಹಂದಿಶಾಸ್ತ್ರ ಮುಗಿಸಿ ಮಂಗಳೂರು ಕಡೆಗೆ ಹೋಗುತ್ತಿದ್ದ ವಿಕ್ರಮ್‌ನನ್ನು ತೊಕ್ಕೊಟ್ಟು ಜಂಕ್ಷನ್ ಬಳಿ ಹತ್ಯೆಗೈಯ್ಯಲಾಗಿತ್ತು. ಹಂತಕರಲ್ಲಿ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಅಕ್ಟೋಬರ್ 28ರ ಬುಧವಾರದಂದು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ತೊಕ್ಕೊಟ್ಟಿನಲ್ಲಿ ಗ್ಯಾಂಗ್ ವಾರ್ ಗೆ ಬಲಿಯಾದ ವ್ಯಕ್ತಿಯೇ ಕೋಡಿಕಲ್ ನಿವಾಸಿ ವಿಕ್ರಮ್ ಕೆ. ಬೋಳೂರು (33). ಈ ಕೃತ್ಯ ಸೋಮವಾರ ಮುಂಜಾನೆ ಸುಮಾರು 2 ಗಂಟೆಯ ಹೊತ್ತಿಗೆ ಸಂಭವಿಸಿದ್ದು, ಈತನನ್ನು ರವಿಚಂದ್ರ ಪೂಜಾರಿ (ಸೈಕೋ ವಿಕ್ಕಿ) ತಂಡ ಹತ್ಯೆಗೈದಿದೆ ಎಂದು ಶಂಕಿಸಿ, ಈ ತಂಡದ ಐವರನ್ನು ಬಂಧಿಸಲಾಗಿದೆ.[ಸಚಿವ ಅಭಯಚಂದ್ರ ಜೈನ್ ಗೆ ರವಿ ಪೂಜಾರಿಯಿಂದ ಬೆದರಿಕೆ ಕರೆ]

ಘಟನೆ ವಿವರ :
ರವಿಚಂದ್ರ ಪೂಜಾರಿ (ಸೈಕೋ ವಿಕ್ಕಿ) ಸೇರಿದಂತೆ ಬೇರೆ ಬೇರೆ ಗ್ಯಾಂಗ್ ವಾರ್ ಗಳಲ್ಲಿ ತೊಡಗಿಸಿಕೊಂಡಿದ್ದ 20ಕ್ಕೂ ಹೆಚ್ಚು ಮಂದಿ ಕುಂಪಲದಲ್ಲಿ ನಡೆಯುತ್ತಿದ್ದ ಮೆಹಂದಿ ಶಾಸ್ತ್ರದಲ್ಲಿ ಭಾಗವಹಿಸಿದ್ದರು. ಡ್ಯಾನ್ಸ್ ಮಾಡುತ್ತಿದ್ದಾಗ ಸ್ಥಳೀಯ ಯುವಕ ಮತ್ತು ಸೈಕೋ ವಿಕ್ಕಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಕುಂಪಲದ ಇನ್ನೋರ್ವ ಯುವಕ ಸೈಕೋ ವಿಕ್ಕಿಯ ವಿರೋಧಿಯಾದ ವಿಕ್ರಂ ಬೋಳಾರು ಗೆ ಫೋನ್ ಮಾಡಿ ಸೈಕೋ ವಿಕ್ಕಿ ಗಲಾಟೆ ಮಾಡುತ್ತಿರುವ ವಿಚಾರ ತಿಳಿಸಿದ್ದಾನೆ.
ಮಂಗಳೂರಿನ ದಸರಾ ಸಂಭ್ರಮದಲ್ಲಿ ಹುಲಿ ವೇಷ ತಂಡದಲ್ಲಿದ್ದ ವಿಕ್ಕಿ ಬೋಳಾರ್ ದೂರವಾಣಿ ಕರೆಯಂತೆ ಸ್ನೇಹಿತರಾದ ಚರಣ್ ಮತ್ತು ಅಭಿಲಾಷ್ ಎಂಬಾತನೊಂದಿಗೆ ಮಂಗಳೂರಿನಿಂದ ಹೊರಟಿದ್ದಾನೆ. ಆಗ ಕುಂಪಲ ಬೈಪಾಸ್ ಬಳಿ ಬೈಕನ್ನು ತಿರುಗಿಸುವಾಗ ಮೆಹಂದಿ ಶಾಸ್ತ್ರ ಮುಗಿಸಿ ಬರುತ್ತಿದ್ದ ಸೈಕೋ ವಿಕ್ಕಿಯ ಕಾರು ಎದುರಾಗಿದ್ದು, ಬೋಳಾರ್ ಬೈಕಿನ ಮೇಲೆ ಕಾರು ಹರಿಸಲು ಯತ್ನಿಸಿದ್ದಾನೆ. ಆದರೂ ವಿಕ್ರಂನನ್ನು ಬಿಡದ ತಂಡ ತೊಕ್ಕೊಟ್ಟು ಬಳಿ ಹತ್ಯೆಗೈದಿದ್ದಾರೆ.[ಮೂಡಬಿದಿರೆ ಪ್ರಶಾಂತ್ ಪೂಜಾರಿ ಹತ್ಯೆಗೆ ಕಾರಣವೇನು?]
ಘಟನೆಗೆ ಮುನ್ನ ಕುಂಪಲದಿಂದ ಅಡ್ಡಾದಿಡ್ಡಿಯಾಗಿ ಬರುತ್ತಿದ್ದ ಸ್ಕಾರ್ಪಿಯೋ ಮತ್ತು ಬೈಕನ್ನು ನೋಡಿದ ತೊಕ್ಕೊಟ್ಟಿನ ರಾತ್ರಿ ಪಾಳಿ ಪೊಲೀಸರು ಈ ಕುರಿತು ಉಳ್ಳಾಲ ಪೊಲೀಸ್ ಪಿಸಿಆರ್ ಗೆ ಮಾಹಿತಿ ನೀಡಿದ್ದರು. ತತ್‌ಕ್ಷಣ ಧಾವಿಸಿ ಬಂದ ಪೊಲೀಸರು ವಿನಮ್ರ ಹೊಟೇಲ್ ಬಳಿ ರಕ್ತಸಿಕ್ತವಾಗಿ ಬಿದ್ದಿದ್ದ ವಿಕ್ರಂನನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಪ್ರಮುಖ ಆರೋಪಿ ಯಾರು?
ಕೊಲೆ ಸೇರಿದಂತೆ ಹಲವಾರು ಪ್ರಕರಣದಲ್ಲಿ ಭಾಗಿಯಾಗಿ ರೌಡಿ ಶೀಟರ್ ನಲ್ಲಿದ್ದ ರವಿಚಂದ್ರ ಪೂಜಾರಿ ಮೂಲತಃ ಹುಬ್ಬಳ್ಳಿಯವನಾಗಿದ್ದು, ನಾಲ್ಕು ವರ್ಷಗಳಿಂದ ವಿಕ್ರಂನ ಸ್ನೇಹಿತನಾಗಿದ್ದನು. ಆಕಸ್ಮಿಕವಾಗಿ ಸಂಭವಿಸಿದ ಒಂದು ಸಣ್ಣ ಘಟನೆ ಬಳಿಕ ವಿಕ್ರಂನ ವಿರೋಧಿಯಾದ ಈತ ಈ ದುಷ್ಕೃತ್ಯದ ಪ್ರಮುಖ ಆರೋಪಿಯಾಗಿದ್ದಾನೆ.
ಹತ್ಯೆಯ ಬಳಿಕ ಸೈಕೋ ವಿಕ್ಕಿ ತಂಡ ಕುತ್ತಾರು ಮಾರ್ಗವಾಗಿ ಎಲಿಯಾರ್ ನತ್ತ ತೆರಳಿದೆ. ಈ ಸಂದರ್ಭದಲ್ಲಿ ಸ್ಕಾರ್ಪಿಯೋ ಟಯರ್ ಪಂಕ್ಚರ್ ಆದ ಕಾರಣ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸೈಕೋ ವಿಕ್ಕಿಯೊಂದಿಗೆ ಗೌತಮ್ ಮತ್ತು ಗೌರೀಶ್ ಕೃತ್ಯದಲ್ಲಿ ಭಾಗಿಯಾಗಿರುವ ಕುರಿತು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.[ಮಂಗಳೂರಿನ ಸೋಮವಾರದ ಹಲವು ಸುದ್ದಿ ಗುಚ್ಛ]
ವಿಕ್ಕಿ ಬೋಳಾರ್ ಗ್ಯಾಂಗ್ ವಾರ್ ಗಳಲ್ಲಿ ಸಕ್ರಿಯನಾಗಿದ್ದ. ಎರಡು ಕೊಲೆ ಆರೋಪ, ಕೊಲೆ ಯತ್ನ, ಹಲ್ಲೆ ಸೇರಿದಂತೆ 10 ಪ್ರಕರಣಗಳು ಈತನ ಹೆಸರಿನಲ್ಲಿವೆ. ಬರ್ಕೆ, ಉರ್ವ ಪೊಲೀಸ್ ಠಾಣೆ ಸೇರಿದಂತೆ ಮಂಗಳೂರಿನ ಬೇರೆ ಬೇರೆ ಠಾಣೆಗಳಲ್ಲಿ ದಾಖಲಾಗಿವೆ. ಬಿಜೈ ರಾಜಾನ ಕೊಲೆಯ ಪ್ರಕರಣದಲ್ಲಿ ಮುಕ್ತನಾಗಿದ್ದು, ಅಳಕೆಯ ಜಾನ್ ಪಿಂಟೋ ಹಾಗೂ ಕೋರಿ ಅಶೋಕ್ ಸಹೋದರ ಪ್ರದೀಪ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.
ಅಪರಾಧಿಗಳ ಪತ್ತೆಗೆ ತಂಡ ರಚನೆ:
ವಿಕ್ರಮ್ ಬೋಳಾರ್ ನ ಹತ್ಯೆಯ ಆರೋಪಿಗಳನ್ನು ಪತ್ತೆಹಚ್ಚಲು ಉಳ್ಳಾಲ, ಕೊಣಾಜೆ, ಸೇರಿದಂತೆ ವಿವಿಧ ತಂಡಗಳನ್ನು ರಚಿಸಿ ಶೋಧಕಾರ್ಯ ಮುಂದುವರಿಸಿದ್ದಾರೆ. ಸಿಸಿಬಿ ಪೊಲೀಸರು ಆರೋಪಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೆಹಂದಿ ಶಾಸ್ತ್ರದಲ್ಲಿ ಭಾಗವಹಿಸಿರುವ ಜನರ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ತೊಕ್ಕೊಟ್ಟು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಪರಾಧಿಗಳ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ.












Click it and Unblock the Notifications