ಪಾತಕಿಗೆ ಗೌಪ್ಯ ಮಾಹಿತಿ ನೀಡುತ್ತಿದ್ದ ಸಿಸಿಬಿ ಪೊಲೀಸ್ ಆಡಿಯೋ ಬಹಿರಂಗ
ಮಂಗಳೂರು, ಡಿಸೆಂಬರ್ 04: ಪೊಲೀಸ್ ಇಲಾಖೆಯ ಕೆಲವು ಪ್ರಮುಖ ಗೌಪ್ಯ ಮಾಹಿತಿಯನ್ನು ಸಿಸಿಬಿ ಪೊಲೀಸ್ ಓರ್ವ ಕುಖ್ಯಾತ ನಟೋರಿಯಸ್ ಆರೋಪಿಗೆ ನೀಡುತ್ತಿದ್ದ ವಿಚಾರ ಬಹಿರಂಗಗೊಂಡಿದೆ.
ಈ ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆ ಮಂಗಳೂರು ಪೊಲೀಸ್ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಮಂಗಳೂರು ಸಿಸಿಬಿ ಪೊಲೀಸ್ ಪಿ.ಸಿ. ಚಂದ್ರ ಪೊಲೀಸ್ ಇಲಾಖೆಯ ಗೌಪ್ಯ ಮಾಹಿತಿಗಳನ್ನು ನೀಡುತ್ತಿದ್ದ ಎಂಬುದು ಇದೀಗ ಬಹಿರಂಗವಾಗಿದೆ. ಅಪರಾಧಿ ಸ್ಥಾನದಲ್ಲಿರುವ ಸಿಸಿಬಿ ಪೊಲೀಸ್ ಕಾನ್ಸ್ಟೇಬಲ್ ಮುಖ್ಯಮಂತ್ರಿ ಪದಕ ವಿಜೇತ ಕೂಡ.
ಸಿಸಿಬಿ ಪೊಲೀಸ್ ಚಂದ್ರ ಸುಮಾರು 19 ಪ್ರಕರಣದ ಪ್ರಮುಖ ಆರೋಪಿ ಕೇರಳದ ಮಂಜೇಶ್ವರ ನಿವಾಸಿ ನಟೋರಿಯಸ್ ತಲಕಿ ರಫೀಕ್ ಗೆ ಇಲಾಖೆಯ ಗೌಪ್ಯ ಮಾಹಿತಿ ನೀಡುತ್ತಿದ್ದ. ಪ್ರತಿ ಮಾಹಿತಿಗೆ ಇಂತಿಷ್ಟು ಅಮೌಂಟ್ ಎಂದು ಮೊದಲೇ ಡೀಲ್ ಮಾಡುತ್ತಿದ್ದ ಎಂದು ಹೇಳಲಾಗಿದೆ. ಈ ಕುರಿತ ಆಡಿಯೋ ಕ್ಲಿಪ್ ಈಗ ಬಹಿರಂಗವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಆಡಿಯೋ ಕ್ಲಿಪ್ ಬಹಿರಂಗವಾಗುತ್ತಿದ್ದಂತೆ ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
ಅವನಿಗೆ ಬೇಕಾದವರ ಅಥವಾ ವಿರೋಧಿ ಗ್ಯಾಂಗ್ ನ ಸದಸ್ಯರ ಮೊಬೈಲ್ ಲೊಕೇಶನ್ ಮಾಹಿತಿ, ವ್ಯಕ್ತಿಗಳ ಹಿನ್ನೆಲೆ ಸೇರಿದಂತೆ ಪೊಲೀಸ್ ಇಲಾಖೆಗಳ ಕೆಲವೊಂದು ಗೌಪ್ಯ ವಿಚಾರಗಳನ್ನುಪಿ.ಸಿ. ಚಂದ್ರ ನೀಡುತ್ತಿದ್ದ ಎಂದು ಹೇಳಲಾಗಿದೆ. ಬಹಿರಂಗಗೊಂಡಿರುವ ಆಡಿಯೋ ಕ್ಲಿಪ್ ಮಲಯಾಳಂ ಭಾಷೆಯಲ್ಲಿದ್ದು, ಮೊಬೈಲ್ ಸಿಡಿಆರ್ ರಿಪೋರ್ಟ್ ನೀಡುವ ಬಗ್ಗೆ ಡೀಲ್ ಮಾತುಕತೆ ಇದೆ.
ಚಂದ್ರ ನೀಡುತ್ತಿದ್ದ ಮಾಹಿತಿಯನ್ನು ರಫೀಕ್ ದುಷ್ಕೃತ್ಯ ಎಸಗಲು ಬಳಸುತ್ತಿದ್ದ ಎಂದು ಹೇಳಲಾಗಿದೆ. ಕಳೆದ ಜೂನ್ ನಲ್ಲಿ ರಫೀಕ್ ನನ್ನು ಮಂಗಳೂರು ದಕ್ಷಿಣ ಠಾಣೆಯ ರೌಡಿ ನಿಗ್ರಹ ದಳ ಅಕ್ರಮ ಆಯುಧ ಹಾಗೂ ಮಾದಕ ವಸ್ತು ಹೊಂದಿದ್ದ ಪ್ರಕರಣದಲ್ಲಿ ಬಂಧಿಸಿತ್ತು.












Click it and Unblock the Notifications