ಮಂಗಳೂರು: ರಾತ್ರಿಯೂ ಪ್ರವಾಸಿಗರು ಬೀಚ್‌ಗೆ ಭೇಟಿ ನೀಡಲು ಅವಕಾಶ
ಮಂಗಳೂರು, ಡಿಸೆಂಬರ್ 29: ಕರಾವಳಿ ತೀರದ ಸೌಂದರ್ಯ ಸವಿಯಲು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳುವ ಜನರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಶೀಘ್ರವೇ ಸಿಹಿಸುದ್ದಿ ನೀಡಲಿದೆ. ಹೌದು, ಮಂಗಳೂರಿನಲ್ಲಿ ರಾತ್ರಿಯ ವೇಳೆಯೂ ಬೀಚ್‌ಗಳಿಗೆ ಜನರು ಭೇಟಿ ನೀಡಲು ಅವಕಾಶ ಮಾಡಿಕೊಡುವ ಕುರಿತು ಚಿಂತನೆ ನಡೆಯುತ್ತಿದೆ. ಅಲ್ಲದೇ ಇದಕ್ಕಾಗಿ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಒದಗಿಸುವ ಕಾರ್ಯ ನಡೆಯುತ್ತಿದೆ.
ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ. ಪಿ. ಮಾತನಾಡಿದ್ದಾರೆ, "ರಾತ್ರಿ ವೇಳೆಯೂ ಬೀಚ್‌ಗಳಿಗೆ ಸಾರ್ವಜನಿಕರಿಗೆ ಪ್ರವೇಶ ನೀಡುವ ಕುರಿತು ಚಿಂತನೆ ಇದೆ. ಇದಕ್ಕಾಗಿ ಬೀದಿ ದೀಪದ ವ್ಯವಸ್ಥೆ, ಬೀಚ್‌ಬಳಿಕ ರಕ್ಷಣಾ ತಂಡಗಳ ನಿಯೋಜನೆ ಕಾರ್ಯ ನಡೆಯುತ್ತಿದೆ" ಎಂದು ಹೇಳಿದ್ದಾರೆ.

"ಪ್ರವಾಸಿಗರ ಸುರಕ್ಷತೆಯೇ ನಮ್ಮ ಆದ್ಯತೆಯಾಗಿದೆ. ಮೊದಲ ಹಂತದಲ್ಲಿ ಈ ಯೋಜನೆಯನ್ನು ಪಣಂಬೂರು ಬೀಚ್‌ನಲ್ಲಿ ಜಾರಿಗೊಳಿಸಲಾಗುತ್ತದೆ. ಇದಕ್ಕಾಗಿ ಅಗತ್ಯ ಕೆಲಸಗಳನ್ನು ಕೈಗೊಳ್ಳಲಾಗಿದೆ" ಎಂದು ಡಿಸಿ ತಿಳಿಸಿದ್ದಾರೆ.
"ತಣ್ಣೀರುಬಾವಿ ಬೀಚ್‌ಗೆ ಸಹ ಬ್ಲೂ ಫ್ಯಾಗ್ ಬೀಚ್ ಮಾನ್ಯತೆಯನ್ನು ಪಡೆಯಲು ಪ್ರಯತ್ನ ನಡೆಸಲಾಗುತ್ತದೆ. ಬೀಚ್‌ಗಳಿಗೆ ತಡರಾತ್ರಿ 1 ಗಂಟೆಯ ತನಕ ಜನರ ಭೇಟಿಗೆ ಅವಕಾಶ ನೀಡುವ ಕುರಿತು ಚಿಂತನೆ ಇದೆ" ಎಂದು ಜಿಲ್ಲಾಧಿಕಾರಿಗಳು ವಿವರಿಸಿದ್ದಾರೆ.
ಪೊಲೀಸರು ಹೇಳುವುದೇನು?; ತಡರಾತ್ರಿ ತನಕ ಬೀಚ್‌ಗಳಿಗೆ ಸಾರ್ವಜನಿಕರು ಭೇಟಿ ನೀಡಲು ಅವಕಾಶ ನೀಡಿದರೆ ಅವರ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗುತ್ತದೆ. ಈ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅರ್ಗವಾಲ್ ಮಾತನಾಡಿ, "ಸುರಕ್ಷತಾ ಕ್ರಮಗಳು, ಮೂಲ ಸೌಲಭ್ಯಗಳನ್ನು ಒದಗಿಸಿದ ಬಳಿಕ ರಾತ್ರಿಯೂ ಬೀಚ್‌ಗೆ ಜನರ ಭೇಟಿಗೆ ಅವಕಾಶ ನೀಡಲಾಗುತ್ತದೆ" ಎಂದರು.
"ಬೀಚ್‌ಗಳಿಗೆ ತಡರಾತ್ರಿ 1 ಗಂಟೆಯ ತನಕ ಭೇಟಿಗೆ ಅವಕಾಶ ನೀಡುವ ಕುರಿತು ಮಾತುಕತೆಗಳು ನಡೆಯುತ್ತಿವೆ. ಆದರೆ ನಗರದಲ್ಲಿ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳು 1 ಗಂಟೆಯ ತನಕ ತೆರೆದಿರಲು ಈಗ ಅವಕಾಶ ನೀಡುವುದಿಲ್ಲ" ಎಂದು ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದರು.
ಮಂಗಳೂರು ನಗರದಲ್ಲಿ 5ಕ್ಕೂ ಅಧಿಕ ಬೀಚ್‌ಗಳಿವೆ ಸಮುದ್ರದ ಸೌಂದರ್ಯ ಸವಿಯಲು ನೂರಾರು ಪ್ರವಾಸಿಗರು ಪ್ರತಿದಿನ ಆಗಮಿಸುತ್ತಾರೆ. ಆದರೆ ಸದ್ಯ ಸಂಜೆ 7 ಗಂಟೆಯ ನಂತರ ಬೀಚ್‌ಗಳಿಗೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ. ಆದರೆ ಈಗ ತಡರಾತ್ರಿ ತನಕ ಬೀಚ್‌ಗಳನ್ನು ತೆರೆದಿರಲು ಚಿಂತನೆ ನಡೆಸಲಾಗುತ್ತಿದೆ.
ಈಗ ಹೊಸ ವರ್ಷದ ಸಂಭ್ರಮವನ್ನು ಆಚರಣೆ ಮಾಡಲು ನೂರಾರು ಪ್ರವಾಸಿಗರು ಮಂಗಳೂರು ಕಡೆಗೆ ಆಗಮಿಸಿದ್ದಾರೆ. ಡಿಸೆಂಬರ್ 31ರಂದು ಎಷ್ಟು ಹೊತ್ತಿನ ತನಕ ಬೀಚ್‌ಗೆ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ? ಎಂಬುದು ಇನ್ನೂ ಅಂತಿಮಗೊಂಡಿಲ್ಲ.
ಪ್ರವಾಸೋದ್ಯಮವನ್ನು ಉತ್ತೇಜಿಸಲು ಈಗಾಗಲೇ ಬೀಚ್‌ಗಳಿಗೆ ಬ್ಲೂ ಫ್ಯಾಗ್ (ನೀಲಿ ಧ್ವಜ) ಮಾನ್ಯತೆಯನ್ನು ನೀಡಲಾಗುತ್ತಿದೆ. ಇದು ಕಡಲ ತೀರಗಳಿಗೆ ಗೌರವಾನ್ವಿತ ಲೇಬಲ್ ಆಗಿದೆ ಮತ್ತು ಇದನ್ನು ಡೆನ್ಮಾರ್ಕ್‌ನ ಪರಿಸರ ಶಿಕ್ಷಣಕ್ಕಾಗಿ ಫೌಂಡೇಶನ್ ಮೂಲಕ ನೀಡಲಾಗುತ್ತದೆ. ಭಾರತದಲ್ಲಿ ಒಟ್ಟು 8 ಬೀಚ್‌ಗಳಿಗೆ ಈ ಮಾನ್ಯತೆ ನೀಡಲಾಗಿದೆ. ಕಾಸರಕೋಡು ಮತ್ತು ಪಡುಬಿದ್ರಿ ಅವುಗಳಲ್ಲಿ ಸೇರಿವೆ.
ಕಡಲ ತೀರದ ನೈರ್ಮಲ್ಯವನ್ನು ಕಾಪಾಡುವ ಮತ್ತು ಶುಲ್ಕದ ಮಾನದಂಡಗಳನ್ನು ಪೂರೈಸುವ ಬೀಚ್‌ಗಳಿಗೆ ಮಾತ್ರ ಈ ಶೀರ್ಷಿಕೆ ನೀಡಲಾಗುತ್ತದೆ. ಈ ಲೇಬಲ್ ಅನ್ನು ಗೆಲ್ಲಲು ಕಡಲತೀರಗಳು ಒಟ್ಟು 33 ಮಾನದಂಡಗಳನ್ನು ಅನುಸರಿಸಬೇಕು. ಕಾಸರಕೋಡು ಮತ್ತು ಪಡುಬಿದ್ರಿ ಕರ್ನಾಟಕದ ಎರಡು ಅತ್ಯಂತ ಸ್ವಚ್ಛ ಮತ್ತು ಸುಸ್ಥಿತಿಯಲ್ಲಿರುವ ಕಡಲತೀರಗಳಾಗಿವೆ.
ಇತರ ಕಡಲ ತೀರಗಳಿಗಿಂತ ಇವು ಭಿನ್ನವಾಗಿದೆ. ಪರಿಸರವು ಹೆಚ್ಚು ಶಾಂತಿಯುತ ಮತ್ತು ಪ್ರಶಾಂತವಾಗಿದೆ. ಎರಡೂ ಬೀಚ್ ಘನ ತ್ಯಾಜ್ಯ ನಿರ್ವಹಣಾ ಘಟಕಗಳು, ಗ್ರೇವಾಟರ್ ಸಂಸ್ಕರಣಾ ಘಟಕಗಳು, ಆಸನ ವ್ಯವಸ್ಥೆಗಳು, ಶುದ್ಧ ಕುಡಿಯುವ ನೀರು, ವಾಶ್‌ರೂಮ್, ಬಟ್ಟೆ ಬದಲಾಯಿಸುವ ಕೊಠಡಿ, ಸ್ನಾನದ ಸೌಲಭ್ಯ, ಅಂಗವಿಕಲರ ಸ್ನೇಹಿ ಮತ್ತು ಸಾಮಾನ್ಯ ಶೌಚಾಲಯಗಳು, ಪಾರ್ಕಿಂಗ್ ಸೌಲಭ್ಯಗಳು, ಸೌರ ವಿದ್ಯುತ್ ಸ್ಥಾವರಗಳು ಮತ್ತು ಸೌರ ದೀಪಗಳನ್ನು ಹೊಂದಿವೆ.












Click it and Unblock the Notifications