ಮಂಗಳೂರಿನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮ:ಅಂತಿಮ ಹಂತದ ಸಿದ್ಧತೆ
ಮಂಗಳೂರು, ಏಪ್ರಿಲ್ 12:ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ರಣೋತ್ಸಾಹ ಹೆಚ್ಚಿದ್ದು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮೋದಿ ಪೇಟಾ ಧರಿಸಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಪ್ರಧಾನಿ ಮೋದಿ ಏಪ್ರಿಲ್ 13 ರಂದು ನಗರದ ಕೇಂದ್ರ ಮೈದಾನದಲ್ಲಿ ನಡೆಯಲಿರುವ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆ ನಡೆಸಲಾಗುತ್ತಿದೆ.
ನಾಳೆ ಶನಿವಾರ ಮೋದಿ ಅವರು ಅಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಧ್ಯಾಹ್ನ 2.45ಕ್ಕೆ ತಮಿಳುನಾಡಿನ ಮಧುರೈಯಿಂದ ವಿಶೇಷ ವಿಮಾನದಲ್ಲಿ ಹೊರಡಲಿರುವ ಮೋದಿ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 4 ಗಂಟೆಗೆ ತಲುಪಲಿದ್ದಾರೆ.

ಬಳಿಕ ರಸ್ತೆ ಮಾರ್ಗದ ಮೂಲಕ ಕೇಂದ್ರ ಮೈದಾನಕ್ಕೆ ಆಗಮಿಸಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಲಿದ್ದಾರೆ. 5.20ರ ಸುಮಾರಿಗೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಸನ್ಮಾನ ನಡೆಯಲಿದ್ದು, ತುಳುನಾಡನ್ನು ನೆನಪಿಸುವ ವಿಶೇಷ ಸ್ಮರಣಿಕೆ ನೀಡಲು ನಿರ್ಧರಿಸಲಾಗಿದೆ.
ಮೋದಿ ಅವರು ಭಾಗವಹಿಸುವ ಕಾರ್ಯಕ್ರಮದ ಭದ್ರತೆಗೆ 1472 ಪೊಲೀಸರ ನಿಯೋಜನೆಗೆ ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿದೆ. ಇದರಲ್ಲಿ 5 ಎಸ್‌ಪಿ , 10 ಡಿವೈಎಸ್ಪಿ, 36 ಇನ್ಸ್ ಪೆಕ್ಟರ್ , 67 ಪಿಎಸ್ಐ, 147 ಎಎಸ್ಐ , 1207 ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 1,472 ಪೊಲೀಸರನ್ನು ಭಧ್ರತೆಗೆ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.

ಅದಲ್ಲದೇ 5 ಕೆಎಸ್ಆರ್ ಪಿ ತುಕಡಿ, 19 ಸಿ ಎ ಆರ್ ತುಕಡಿ ಮತ್ತು 2 ಸಿ ಆರ್ ಪಿ ಎಫ್ ತುಕಡಿಗಳ ಅಧಿಕಾರಿ ಮತ್ತು ಸಿಬಂದಿ, 4 ಎ ಎಸ್ ಸಿ ತಂಡ, 1 ಬಿಡಿಎಸ್ ತಂಡ, 30 ಡಿಎಫ್ಎಂಡಿ ಎಚ್‌ಎಚ್‌ಎಂಡಿಯನ್ನು ಬಂದೋಬಸ್ತು ಕರ್ತವ್ಯದಲ್ಲಿ ಒಟ್ಟು 34 ಸೆಕ್ಟರ್ ಮೊಬೈಲ್‌ಗಳು ಹಾಗೂ 144 ಸೂಕ್ಷ್ಮ ಪ್ರದೇಶಗಳಲ್ಲಿ ಪಿಕೆಟಿಂಗ್ ಪಾಯಿಂಟ್‌ಗಳು ಕಾರ್ಯ ನಿರ್ವಹಿಸಲಿವೆ.
ನಗರದ ಆಯಕಟ್ಟಿನ ಪ್ರದೇಶದಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದೆ. ಹೊಟೇಲ್ ಲಾಡ್ಜ್ ಗಳನ್ನು ತಪಾಸಣೆ ಮಾಡಲಾಗುತ್ತಿದೆ. ವಿಮಾನ, ರೈಲು ನಿಲ್ದಾಣಗಳಲ್ಲಿ ನಿಗಾ ಇಡಲಾಗಿದೆ. ಏಪ್ರಿಲ್ 13 ರಂದು ಮೋದಿ ಅವರು ಭಾಗವಹಿಸುವ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆಯಿದೆ.












Click it and Unblock the Notifications