ಮಗುವಿನ ಡಯಾಪರ್‌ನಲ್ಲಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ ಬಂಧನ
ಪುರುಷ ಪ್ರಯಾಣಿಕರೊಬ್ಬರು ತಮ್ಮ 21 ತಿಂಗಳ ಮಗಳ ಡಯಾಪರ್‌ನಲ್ಲಿ ಚಿನ್ನವನ್ನು ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದಾಗ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಂಐಎ) ಇತ್ತೀಚೆಗೆ ಸಿಕ್ಕಿಬಿದ್ದಿದ್ದಾರೆ
ಮಂಗಳೂರು, ಮಾರ್ಚ್ 18: ಮಗುವಿನ ಡಯಾಪರ್‌ನಲ್ಲಿ ಅಕ್ರಮವಾಗಿ ಚಿನ್ನವನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನದಲ್ಲಿ ಬಂಧಿಸಲಾಗಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನಕ್ಕೆ ಬಂದಿದ್ದ ಪುರುಷ ಪ್ರಯಾಣಿಕರೊಬ್ಬರು ತಮ್ಮ 21 ತಿಂಗಳ ಮಗಳ ಡಯಾಪರ್‌ನಲ್ಲಿ ಚಿನ್ನವನ್ನು ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದಾಗ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಂಐಎ) ಇತ್ತೀಚೆಗೆ ಸಿಕ್ಕಿಬಿದ್ದಿದ್ದಾರೆ ಎಂದು ಕಸ್ಟಮ್ಸ್ ಪ್ರಕಟಣೆ ಶನಿವಾರ ತಿಳಿಸಿದೆ.

ಪೇಸ್ಟ್ ರೂಪದಲ್ಲಿ ಚಿನ್ನವನ್ನು ಡಯಾಪರ್ ಒಳಗೆ ಚೀಲಗಳಲ್ಲಿ ಇರಿಸಲಾಗಿತ್ತು. ಆದರೆ, ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಪತ್ತೆಯಾಗಿದೆ. ಇನ್ನೊಂದು ಘಟನೆಯಲ್ಲಿ ಪುರುಷ ಪ್ರಯಾಣಿಕನೊಬ್ಬ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಬಚ್ಚಿಟ್ಟು ತನ್ನ ಸೊಂಟಕ್ಕೆ ಬೆಲ್ಟ್‌ನಂತೆ ಕಟ್ಟಿಕೊಂಡಿದ್ದ. ಇನ್ನೊಬ್ಬ ವ್ಯಕ್ತಿ ತನ್ನ ಗುದನಾಳದಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಬಚ್ಚಿಟ್ಟಿದ್ದನು.
ಒಟ್ಟಾರೆಯಾಗಿ ಎಂಐಎಯ ಕಸ್ಟಮ್ಸ್ ಅಧಿಕಾರಿಗಳು ಈ ವರ್ಷದ ಮಾರ್ಚ್ 1 ರಿಂದ 15 ರವರೆಗೆ 90.67 ಲಕ್ಷ ರೂಪಾಯಿ ಮೌಲ್ಯದ 1,606 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಮೂವರು ಪ್ರಯಾಣಿಕರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇದೇ ಮಾದರಿಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿತ್ತು.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಿದ ಪ್ರಯಾಣಿಕನೊಬ್ಬನನ್ನು ಬಂಧಿಸಿದ್ದಾರೆ. ಚಪ್ಪಲಿಯಲ್ಲಿ ಬಚ್ಚಿಟ್ಟು ಕೆಜಿಗಟ್ಟಲೇ ಚಿನ್ನವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಣೆ ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಅಧಿಕಾರಿಗಳು ಸೆರೆ ಹಿಡಿದಿದ್ದರು. ಆರೋಪಿ ಬ್ಯಾಂಕಾಕ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಸಿದ್ದ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಇಂಡಿಗೋ ಏರ್‌ವೇಸ್ ವಿಮಾನದಲ್ಲಿ ಬಂದ ಪ್ರಯಾಣಿಕರನ್ನು ತಪಾಸಣೆಗಾಗಿ ನಿಲ್ಲಿಸಲಾಯಿತು. ಪ್ರಯಾಣಿಕರಲ್ಲಿ ಒಬ್ಬ ಅನುಮಾನಸ್ಪದವಾಗಿ ಕಂಡುಬಂದಿದ್ದನು. ಬಳಿಕ ಆತನಿಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನು ತಪಾಸಣೆ ಮಾಡಲಾಯಿತು. ಆತನ ಚಪ್ಪಲಿಗಳಲ್ಲಿ ಹುದುಗಿದ್ದ ಒಟ್ಟು ನಾಲ್ಕು ಬಂಗಾರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.
ಆ ಪ್ರಯಾಣಿಕ ಚಪ್ಪಲಿಯಲ್ಲಿ 69.40 ಲಕ್ಷ ರೂ ಮೌಲ್ಯದ ಚಿನ್ನ ಸಿಕ್ಕಿದೆ. ಚಪ್ಪಲಿಗಳ ಒಳಗಿದ್ದ ಚಿನ್ನದ ತುಂಡುಗಳನ್ನು ಸ್ಕ್ಯಾನ್ ಮಾಡುವಾಗ ಕಂಡುಹಿಡಿಯಲಾಯಿತು. ಕಸ್ಟಮ್ಸ್ ಅಧಿಕಾರಿಗಳು ಈಗ ಹೆಚ್ಚು ಜಾಗರೂಕರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು. 24 ಕ್ಯಾರಟ್ ಶುದ್ಧತೆ ಹೊಂದಿರುವ ಕನಿಷ್ಠ 1.2 ಕೆಜಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಬೆಲೆ 69.40 ಲಕ್ಷ ರೂಪಾಯಿ ಎನ್ನಲಾಗಿತ್ತು.
ಮಾರ್ಚ್ 12 ರಂದು, ಇಂಡಿಗೋ ವಿಮಾನ 6E 76 ಮೂಲಕ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕರನ್ನು ಬೆಂಗಳೂರು ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ಅಧಿಕಾರಿಗಳು ತಡೆದರು. ಪ್ರಯಾಣದ ಉದ್ದೇಶವನ್ನು ಕೇಳಿದಾಗ, ಪ್ರಯಾಣಿಕನು ವೈದ್ಯಕೀಯ ಉದ್ದೇಶಕ್ಕಾಗಿ ಪ್ರಯಾಣಿಸುತ್ತಿದ್ದೇನೆ ಎಂದು ಹೇಳಿದರು ಎಂದು ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದ್ದರು.
ಆದರೆ, ಯಾವುದೇ ಮಾನ್ಯ ವೈದ್ಯಕೀಯ ದಾಖಲೆಗಳನ್ನು ನೀಡಲು ಪ್ರಯಾಣಿಕನಿಗೆ ಸಾಧ್ಯವಾಗಿರಲಿಲ್ಲ. ಇದು ಅಧಿಕಾರಿಗಳಿಗೆ ಅನುಮಾನ ಮೂಡಿಸಿತ್ತು. ಅದರಂತೆ ಪ್ರಯಾಣಿಕನನ್ನು ಕೂಲಂಕಷ ತಪಾಸಣೆಗೆ ಒಳಪಡಿಸಲಾಗಿತ್ತು. ಆತನ ಬ್ಯಾಗ್ ಮತ್ತು ಚಪ್ಪಲಿಗಳನ್ನು ತಪಾಸಣೆ ಮಾಡಿಲಾಯಿತು. ಸ್ಕ್ಯಾನಿಂಗ್ ಮಾಡಿದಾಗ, ಪ್ರಯಾಣದ ವೇಳೆ ಧರಿಸಿದ್ದ ಚಪ್ಪಲಿಯಲ್ಲಿ ಕಟ್ ಪೀಸ್ ರೂಪದಲ್ಲಿ ಚಿನ್ನ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿತ್ತು. ಚಪ್ಪಲಿಗಳನ್ನು ತುಂಡರಿಸಿ 1.2 ಕೆಜಿ ತೂಕದ 4 ಕತ್ತರಿಸಿದ ಚಿನ್ನದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.












Click it and Unblock the Notifications