ಸಯನೈಡ್ ಕಿಲ್ಲರ್ ಮೋಹನನಿಗೆ ಸಾವೇ ಗತಿಯಾಯ್ತು

ನ್ಯಾಯಾಧೀಶ ಬಿಕೆ ನಾಯ್ಕ್ ಅವರು ಮೂವರು ಯವತಿಯರ ಹತ್ಯೆ ಪ್ರಕರಣದ ಸಂಬಂಧ ಈ ಗಲ್ಲು ಶಿಕ್ಷೆ ಪ್ರಕಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ಎರಡನೆಯ ಹಂತಕ ಇವನಾಗಿದ್ದಾನೆ.
(ನಿರ್ದಯಿ ಹಂತಕ ಬ್ಯಾಂಕ್ ಮ್ಯಾನೇಜರಿಗೆ ಗಲ್ಲು)
ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದ ಕರಾವಳಿಯವನೇ ಆದ ಸಯನೈಡ್ ಕಿಲ್ಲರ್ ಮೋಹನ ಒಟ್ಟು 20 ಮಹಿಳೆಯರನ್ನು ಸಾಯಿಸಿದ್ದಾನೆ. ಒಟ್ಟು 33 ವರ್ಷ ಕಠಿಣ ಶಿಕ್ಷೆಯನ್ನೂ ವಿಧಿಸಲಾಗಿದೆ. ಗಲ್ಲು ಶಿಕ್ಷೆಯ ವಿರುದ್ಧ ತಾನು ರಾಜ್ಯ ಹೈಕೋರ್ಟ್ ಮೊರೆಹೋಗುವುದಾಗಿ ಸಯನೈಡ್ ಕಿಲ್ಲರ್ ಮೋಹನ ತಿಳಿಸಿದ್ದಾನೆ.
ತಪ್ಪಿತಸ್ಥ ಸಯನೈಡ್ ಕಿಲ್ಲರ್ ಮೋಹನನಿಗೆ ಇಬ್ಬರು ಮಕ್ಕಳು ಮತ್ತು ಒಬ್ಬ ಪತ್ನಿ ಇದ್ದಾರೆ. ಶಿಕ್ಷಕ ಮೋಹನ್ ಕುಮಾರ್ ಬಂಟ್ವಾಳದ ಬರಿಮಾರು ಅನಿತಾ ಹಾಗೂ ವಾಮದಪದವಿನ ಲೀಲಾವತಿ ಹಾಗೂ ಸುಳ್ಯ ಪೆರುವಾಜೆಯ ಸುನಂದಾ ಕೊಲೆ ಪ್ರಕರಣಗಳಲ್ಲಿ ಅಪರಾಧಿ ಎಂದು ನ್ಯಾಯಾಲಯ ಪರಿಗಣಿಸಿದೆ.
ಗಮನಾರ್ಹವೆಂದರೆ 'ನನ್ನ ತಾಯಿ ವೃದ್ಧೆ, ಅನಾರೋಗ್ಯ ಪೀಡಿತೆಯಾಗಿದ್ದಾರೆ. ಪತ್ನಿ ಮತ್ತು ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಆದ್ದರಿಂದ ಶಿಕ್ಷೆ ಪ್ರಕಟಿಸುವಾಗ ತನ್ನ ಮೇಲೆ ಕರುಣೆ ತೋರಬೇಕು. ಅಲ್ಲದೇ ತನಗೆ ಹಾಗೂ ತನ್ನ ಕುಟುಂಬಸ್ಥರಿಗೆ ಆದಾಯದ ಮೂಲ ಇಲ್ಲದಿರುವುದರಿಂದ ಶಿಕ್ಷೆಯ ರೂಪದಲ್ಲಿ ಜುಲ್ಮಾನೆ ವಿಧಿಸದೆ ಕರುಣೆ ತೋರಬೇಕು' ಎಂದು ಸಯನೈಡ್ ಕಿಲ್ಲರ್ ಮೋಹನ ನ್ಯಾಯಾಧೀಶರಿಗೆ ಲಿಖಿತ ಕೋರಿಕೆಯನ್ನು ಸಲ್ಲಿಸಿದ್ದ.
ಆದರೆ ಸರಕಾರಿ ವಿಶೇಷ ಅಭಿಯೋಜಕ ಚೆಯ್ಯಬ್ಬ ಬ್ಯಾರಿ ಅವರು ಮಹಿಳೆಯರ ಮಾನ ಹಾಗೂ ಪ್ರಾಣದ ಬಗ್ಗೆ ಯಾವುದೇ ಕಾಳಜಿ ಇಲ್ಲದೆ, ಹೆಂಗಸರು ಇರುವುದೇ ತನ್ನ ಭೋಗಕ್ಕೆ ಎಂಬಂತೆ ಬೇಟೆಗಾರನ ರೀತಿಯಲ್ಲಿ, ಹುಲಿಯು ಸಣ್ಣ ಪ್ರಾಣಿಗಳ ಮೇಲೆ ಎರಗುವಂತೆ ಹೊಂಚು ಹಾಕಿ ಕೊಲೆಗೈದ ಮೋಹನ್ ಕುಮಾರ್ ಸಮಾಜ ವಿರೋಧಿಯಾಗಿದ್ದಾನೆ. ಸಮಾಜ ಕಂಟಕವಾಗಿರುವ ಈತನಿಗೆ ಗಲ್ಲು ಶಿಕ್ಷೆ ವಿಧಿಸುವುದೇ ಸೂಕ್ತ' ಎಂದು ನ್ಯಾಯಾಧೀಶರಲ್ಲಿ ಕೋರಿಕೊಂಡರು.












Click it and Unblock the Notifications