ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ-ಸೌಮ್ಯ ಅಭ್ಯರ್ಥಿಗಳ ಭಾಷೆ ವಾರ್
ಉಡುಪಿ, ಮಾರ್ಚ್ 23: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಜ್ಜನ ಅಭ್ಯರ್ಥಿಗಳ ಘೋಷಣೆಯಾಗಿದೆ. ಸರಳತೆಗೆ ಹೆಸರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬದ್ಧತೆಗೆ ಹೆಸರಾದ ಜಯಪ್ರಕಾಶ್ ಹೆಗ್ಡೆ ನಡುವೆ ಟಾಕ್ ವಾರ್ ಶುರುವಾಗಿದೆ.
ಸಂಸದರಾಗುವವರಿಗೆ ಹಿಂದಿ ಅಥವಾ ಇಂಗ್ಲಿಷ್ ಬರಬೇಕಲ್ವಾ ಅಂತ ಜಯಪ್ರಕಾಶ್ ಹೆಗ್ಡೆ ಹೇಳಿದ್ರೆ, ಸಂಸದನಾದ ನಂತರ ಆರೇ ತಿಂಗಳಲ್ಲಿ ಹಿಂದಿ ಭಾಷೆಯಲ್ಲಿ ಭಾಷಣ ಮಾಡುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಕಿಚಾಯಿಸಿದ್ದಾರೆ.

ರಾಜ್ಯದ್ಯಂತ ಬೇರೆ ಬೇರೆ ವಿಚಾರಗಳು ಚುನಾವಣೆ ಸಮಯದಲ್ಲಿ ಮುಂಚೂಣಿಗೆ ಬಂದರೆ, ಉಡುಪಿ ಚಿಕ್ಕಮಗಳೂರಿನಲ್ಲಿ ಭಾಷೆಯ ವಿಷಯ ಚಾಲ್ತಿಯಲ್ಲಿದೆ. ಕೋಟ ಶಿವರಾಮ ಕಾರಂತರ ಶಿಷ್ಯ ಕೋಟ ಶ್ರೀನಿವಾಸ ಪೂಜಾರಿಗೆ ಹೇಳಿ ಕೇಳಿ ಕನ್ನಡ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ವಿಧಾನ ಪರಿಷತ್‌ನಲ್ಲಿ ಸದನ ವೀರನಾಗಿ ಗುರುತಿಸಿಕೊಂಡರೂ, ಕನ್ನಡ ಹೊರತು ಇತರ ಭಾಷೆಗಳೆಂದರೆ ಇವರಿಗೆ ತೊಡಕು. ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಜಯಪ್ರಕಾಶ್ ಹೆಗ್ಡೆ, ಸೌಮ್ಯವಾಗಿಯೇ ಉತ್ತರಿಸಿದ್ದಾರೆ.
ಸಂಸದರಾದರೆ ಸದನದಲ್ಲಿ ಕನ್ನಡದಲ್ಲಿ ಮಾತನಾಡಬಹುದು, ಆದರೆ ಯಾರೂ ಗಮನ ಕೊಡುವುದಿಲ್ಲ. ಇನ್ನು ಅಧಿಕಾರಿಗಳ ಜೊತೆ ವ್ಯವಹರಿಸುವಾಗ ಇಂಗ್ಲಿಷ್ ಅಥವಾ ಹಿಂದಿ ಭಾಷೆ ಬರದಿದ್ದರೆ ಚರ್ಚೆ ಮಾಡೋಕೆ ಆಗೋಲ್ಲ. ನಾನು ಸಂಸದನಾದಾಗ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದೆ, ಆದರೆ ಕನ್ನಡದಲ್ಲಿ ಭಾಷಣ ಮಾಡಿದರೆ ಯಾರಿಗೂ ಅರ್ಥ ಆಗಲ್ಲ ಅಂತ ಟ್ರಾನ್ಸ್‌ಲೇಟರ್ ಹೇಳಿದರು. ಹಾಗಾಗಿ ಭಾಷೆ ಬಹಳ ಮುಖ್ಯ ಅಂತ ಪರೋಕ್ಷವಾಗಿ ಕೋಟ ಶ್ರೀನಿವಾಸ ಪೂಜಾರಿಗೆ ಟಾಂಗ್ ನೀಡಿದ್ದರು.

ಇನ್ನು ತಮ್ಮ ಭಾಷೆ ಚರ್ಚೆ ಬಗ್ಗೆ ಉತ್ತರ ನೀಡಿರುವ ಕೋಟ ಶ್ರೀನಿವಾಸ ಪೂಜಾರಿ. ಭಾಷೆ ಬದುಕಿನ ಒಂದು ಭಾಗ. ನನ್ನ ಬಗ್ಗೆ ಹೆಗ್ಡೆ ಅವರ ಕಾಳಜಿ ಅರ್ಥವಾಗಿದೆ. ಮತದಾರರಿಗೆ ಆತಂಕ ಬೇಡ ಸಂಸದನಾಗಿ ಆಯ್ಕೆಯಾದ ಆರೇ ತಿಂಗಳಲ್ಲಿ ಹಿಂದಿ ಕಲಿತು ಸದನದಲ್ಲಿ ಭಾಷಣ ಮಾಡುತ್ತೇನೆ. ಅಭಿವೃದ್ಧಿ ಚಟುವಟಿಕೆಗಳಲ್ಲಿ ಹಿಂದೆ ಬೀಳಲ್ಲ ಅಂತ ಕೌಂಟರ್ ನೀಡಿದ್ದಾರೆ.
ಉಡುಪಿ ಹಾಗೂ ಚಿಕ್ಕಮಗಳೂರು ಎರಡು ಜಿಲ್ಲಾ ವ್ಯಾಪ್ತಿ ಹೊಂದಿದ್ದರೂ, ಈ ಬಾರಿ ಕ್ಷೇತ್ರದ ಅಭ್ಯರ್ಥಿಗಳಿಬ್ಬರೂ ಕುಂದಾಪುರದವರು, ಒಂದೇ ಊರಿನವರು. ಹಳೆ ಒಡನಾಡಿಗಳ ಹೊಸ ಜಗಳ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಲು ಕಾರಣವಾಗಿದೆ. ಇನ್ನು ಈ ಎಲ್ಲಾ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ, ಬಿಜೆಪಿಯ ಪ್ರಮುಖ ಮುಖಂಡ ಐದು ಬಾರಿ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರನ್ನು ಭೇಟಿಯಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಜೊತೆ ಬಿಜೆಪಿಯ ಪ್ರಮುಖ ಮುಖಂಡರ ಚರ್ಚೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿದ ಕಾಂಗ್ರೆಸ್ ಕಾರ್ಯಕರ್ತರು ಒಬ್ಬರಿಗೆ ಪಕ್ಷಕ್ಕೆ ಕರೆಸಿ ಮೋಸ, ಇನ್ನೊಬ್ಬರಿಗೆ ಪಕ್ಷದೊಳಗಿದ್ದಾಗಲೇ ಮೋಸ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.












Click it and Unblock the Notifications