ಮರದ ಕೊಂಬೆ ಕಡಿದ ತಪ್ಪಿಗೆ ಕೃತಕ ಅರಣ್ಯ ನಿರ್ಮಿಸಿ ಋಣ ತೀರಿಸಿದ ಲೈನ್‌ಮ್ಯಾನ್!

ಮಂಗಳೂರು, ಆಗಸ್ಟ್ 23: ನಮಗೆಲ್ಲಾ ಪ್ರಕೃತಿ ಮುನಿದಾಗ, ಪ್ರಕೃತಿಯ ರಕ್ಷಣೆಯ ನೆನಪಾಗುತ್ತದೆ. ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾದಾಗ ಮರದ ಮಹತ್ವ ಅರಿವಾಗುತ್ತದೆ. ಮಳೆ ಬಾರದೇ ಭೂಮಿ ಬರಡಾದಾಗ ಕಾಡಿನ ಮಹತ್ವ ತಿಳಿಯುತ್ತದೆ. ಇದರ ಪರಿಣಾಮವಾಗಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಾವೆಲ್ಲಾ ಒಂದೊಂದು ಗಿಡ ನೆಟ್ಟು, ಫೋಟೋಗೆ ಪೋಸ್ ನೀಡಿ ಮನೆಗೆ ಮರಳುತ್ತೇವೆ.
ನಾವು ನೆಟ್ಟ ಗಿಡ ನಂತರದ ದಿನಗಳಲ್ಲಿ ಸತ್ತು ಹೋಗಿರುವುದು ನಮ್ಮ‌ ಗಮನಕ್ಕೆ ಬರುವುದು ಮುಂದಿನ ಪರಿಸರ ದಿನಾಚರಣೆಯಂದೇ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಲೈನ್‌ಮ್ಯಾನ್ ಒಬ್ಬರು, ವಿದ್ಯುತ್ ತಂತಿಗೆ ಅಡ್ಡಿಯಾದ ಮರಗಳ ಕೊಂಬೆಗಳನ್ನು ಕಡಿದಿರುವುದಕ್ಕೆ ಪಶ್ಚಾತ್ತಾಪವಾಗಿ ಪ್ರತಿ ಮರದ ಕೊಂಬೆ ಕಡಿದಾಗ ಒಂದೊಂದು ಗಿಡ ನೆಟ್ಟು ಈಗ ಮಿನಿ ಅರಣ್ಯವನ್ನೇ ನಿರ್ಮಿಸಿದ್ದಾರೆ. ನಿಮಗೆ ಆಶ್ಚರ್ಯವಾಗಬಹುದು, ಈ ಲೈನ್‌ಮ್ಯಾನ್ ಸುಮಾರು ಐದು ಕಡೆಗಳಲ್ಲಿ ಇಂತಹ ಕೃತಕ ಅರಣ್ಯವನ್ನು ನಿರ್ಮಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಲೈನ್‌ಮ್ಯಾನ್ ದುರ್ಗಾ ಸಿಂಗ್, ಅಪ್ರತಿಮ ಪರಿಸರ ಪ್ರೇಮಿ, ಸಾವಿರಾರು ಗಿಡಗಳನ್ನು ಸಾಕಿ ಪೋಷಿಸಿ, ಮಿನಿ ಅರಣ್ಯವನ್ನೇ ನಿರ್ಮಿಸಿದ ಗ್ರೀನ್ ಹೀರೋ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಗೋಳಿತೊಟ್ಟು ಭಾಗದ ಜನರು ವಿದ್ಯುತ್ ಸಮಸ್ಯೆ ಎದುರಾದರೆ ಪಕ್ಕನೇ ಕಾಲ್ ಮಾಡುವುದು ದುರ್ಗಾಸಿಂಗ್ ಎಂಬ ಲೈನ್‌ಮ್ಯಾನ್‌ಗೆ. ಪರಿಸರದ ಕತ್ತಲನ್ನು ಹೋಗಲಾಡಿಸುವ ಲೈನ್‌ಮ್ಯಾನ್ ದುರ್ಗಾಸಿಂಗ್ ಈಗ ಮರಗಳಿಗೂ ಬೆಳಕಾಗಿ ಗಿಡಗಳಿಗೆ ಉಸಿರಾಗಿದ್ದಾರೆ.

 ಕೃತಕ ಕಾಡುಗಳನ್ನು ಬೆಳೆಸುವ ಯೋಜನೆ

ಕೃತಕ ಕಾಡುಗಳನ್ನು ಬೆಳೆಸುವ ಯೋಜನೆ

ಕಾಡಿನಂಚಿನಲ್ಲಿರುವ ಪ್ರದೇಶದಲ್ಲಿ ಲೈನ್‌ಮ್ಯಾನ್ ಕರ್ತವ್ಯ ನಿರ್ವಹಿಸುತ್ತಿರುವ ದುರ್ಗಾಸಿಂಗ್ ಈ ಭಾಗದಲ್ಲಿ ವಿದ್ಯುತ್ ತಂತಿಗಳಿಗೆ ತೊಂದರೆಯಾಗುವ ಮರಗಳನ್ನು ಹಾಗೂ ಕೊಂಬೆಗಳನ್ನು ಕಡಿಯುತ್ತಿರುವ ಸಂದರ್ಭದಲ್ಲಿ ಇದೇ ರೀತಿ ಮರಗಳನ್ನು ಕಡಿದಲ್ಲಿ ಮುಂದೆ ಮರಗಳಿಲ್ಲದೆ ಪರಿಸರಕ್ಕೆ ಹಾನಿಯಾಗಲಿದೆ ಎನ್ನುವುದನ್ನು ಮನಗಂಡಿದ್ದರು. ಈ ಕಾರಣಕ್ಕಾಗಿ ಪರಿಸರವನ್ನು ಹಸಿರಾಗಿ ಉಳಿಸಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ದುರ್ಗಾ ಸಿಂಗ್ ಕೃತಕ ಕಾಡುಗಳನ್ನು ಬೆಳೆಸುವ ಯೋಜನೆಗೆ ಮುಂದಾಗಿದ್ದಾರೆ.

 1000 ಚದರಡಿಯ ಜಾಗದಲ್ಲಿ 400ಕ್ಕೂ ಹೆಚ್ಚು ಗಿಡ

1000 ಚದರಡಿಯ ಜಾಗದಲ್ಲಿ 400ಕ್ಕೂ ಹೆಚ್ಚು ಗಿಡ

ಜಪಾನ್ ವಿಜ್ಞಾನಿ ಮಿಯಾ ವಾಕಿಯವರ ಕಡಿಮೆ ಜಾಗದಲ್ಲಿ ದಟ್ಟ ಕಾಡು ಬೆಳೆಸುವುದು ಹೇಗೆ ಎನ್ನುವ ವಿಧಾನವನ್ನು ಅನುಸರಿಸಿ ಕಾಡು ಬೆಳೆಸಲು ಮುಂದಾಗಿದ್ದಾರೆ. ಈ ಪ್ರಯೋಗವನ್ನು ತನ್ನ ಮನೆಯಿಂದಲೇ ಆರಂಭಿಸಿದ ದುರ್ಗಾಸಿಂಗ್, ಕೇವಲ 1000 ಚದರಡಿಯ ಜಾಗದಲ್ಲಿ 400ಕ್ಕೂ ಮಿಕ್ಕಿದ ಗಿಡಗಳನ್ನು ನೆಟ್ಟಿದ್ದಾರೆ. ಕೇವಲ ಒಂದು ವರ್ಷದಲ್ಲೇ ಆಳೆತ್ತರಕ್ಕೆ ಏರಿರುವ ಈ ಗಿಡಗಳು ಇನ್ನು ಎರಡು ವರ್ಷಗಳಲ್ಲಿ ಬೆಳೆದು ದಟ್ಟ ಕಾಡಾಗುವ ಹಂತದಲ್ಲಿದೆ. ಗಿಡಗಳನ್ನು ನೆಡುವ ಓಬೀರಾಯನ ಕಾಲದ ಪದ್ಧತಿಯಿಂದ ಹೊರಬಂದು ಹೊಸ ವಿಧಾನದಲ್ಲಿ ಕಾಡು ಬೆಳೆಸಬಹುದು ಎನ್ನುವುದನ್ನು ದುರ್ಗಾಸಿಂಗ್ ತೋರಿಸಿಕೊಟ್ಟಿದ್ದಾರೆ.

 ಇದೀಗ ಶಾಲಾ-ಕಾಲೇಜುಗಗೂ ತಲುಪಿದೆ

ಇದೀಗ ಶಾಲಾ-ಕಾಲೇಜುಗಗೂ ತಲುಪಿದೆ

ಮನೆಯಿಂದ ಆರಂಭಿಸಿದ ಈಳಿ ಕೃತಕ ಕಾಡಿನ ಆಲೋಚನೆ ಇದೀಗ ಶಾಲಾ-ಕಾಲೇಜುಗಗೂ ತಲುಪಿದೆ. ಈಗಾಗಲೇ ಗೋಳಿತೊಟ್ಟು, ಆಲಂತಾಯ ಗ್ರಾಮದ ಶಾಲೆಗಳಲ್ಲಿ ಈ ಕೃತಕ ಅರಣ್ಯವನ್ನು ನಿರ್ಮಿಸಿರುವ ದುರ್ಗಾಸಿಂಗ್, ಆಸಕ್ತಿಯಿರುವವರ ಖಾಸಗಿ ಜಮೀನಿನಲ್ಲೂ ಕಾಡು ಬೆಳೆಸಿದ್ದಾರೆ. ಗಿಡ ನೆಟ್ಟ ಬಳಿಕ ಎರಡು ವರ್ಷಗಳ ಕಾಲ ಆ ಗಿಡಗಳಿಗೆ ಉತ್ತಮ ಪೋಷಕಾಂಶ ಹಾಗೂ ನಿರ್ವಹಣೆ ಮಾಡಿದ್ದಲ್ಲಿ ಕೇವಲ ಒಂದು ವರ್ಷದಲ್ಲೇ ಉತ್ತಮ ಬೆಳವಣಿಗೆ ಗಿಡಗಳಲ್ಲಿ ಕಂಡು ಬರಲಿದೆ.

 ಪ್ರತೀ ಮನೆಯಲ್ಲಿ ಕಾಡು ಬೆಳೆಸಲು ಯೋಜನೆ

ಪ್ರತೀ ಮನೆಯಲ್ಲಿ ಕಾಡು ಬೆಳೆಸಲು ಯೋಜನೆ

ಗಿಡಗಳು ಮರಗಳಾಗಿ ಬದಲಾದ ಬಳಿಕ ಆ ಕಾಡಿನೊಳಗೆ ಮನುಷ್ಯನಿಗೂ ಪ್ರವೇಶಿಸಲಾಗದ ರೀತಿಯಲ್ಲಿ ಈ ಕಾಡುಗಳು ಬೆಳೆಯಲಿದೆ. ದುರ್ಗಾಸಿಂಗ್‌ರ ಈ ಪರಿಸರ ಸಂರಕ್ಷಣೆಯ ಸೈಲೆಂಟ್ ಕೆಲಸಕ್ಕೆ ಇದೀಗ ಸಾರ್ವಜನಿಕರೂ ಕೈ ಜೋಡಿಸಲಾರಂಭಿಸಿದ್ದಾರೆ. ತಮ್ಮ ತಮ್ಮ ಗ್ರಾಮದಲ್ಲಿರುವ ಶಾಲೆಗಳಲ್ಲಿ ಹೆಚ್ಚುವರಿಯಾಗಿರುವ ಜಾಗದಲ್ಲಿ ಕಾಡು ಬೆಳೆಸಲು ಜನ ಆಸಕ್ತರಾಗಿದ್ದಾರೆ. ಅಲ್ಲದೆ ಪ್ರತೀ ಮನೆಯಲ್ಲೂ ಒಂದು ಪುಟ್ಟ ಕಾಡು ಮಾಡಬೇಕೆನ್ನುವ ಪ್ರಯತ್ನಕ್ಕೂ ಕೈ ಹಾಕಿದ್ದಾರೆ. ಹತ್ತನ್ನೆರಡು ವರ್ಷಗಳ ಹಿಂದೆ ದಟ್ಟ ಕಾಡುಗಳಂತಿದ್ದ ಪ್ರದೇಶ ಇದೀಗ ಅಭಿವೃದ್ಧಿಯ ಕಾರಣಕ್ಕಾಗಿ ಬೋರು ಗುಡ್ಡಗಳಾಗುತ್ತಿವೆ. ಬೇಸಿಗೆಯಲ್ಲಿ ಅತ್ಯಂತ ತಂಪಾಗಿದ್ದ ಪ್ರದೇಶ ಇದೀಗ ಉರಿ ಬಿಸಿಲಿನಲ್ಲಿ ನಿಲ್ಲಲಾರದಂತಹ ಸ್ಥಿತಿಯಲ್ಲಿದೆ. ಈ ಕಾರಣಕ್ಕಾಗಿ ದುರ್ಗಾಸಿಂಗ್ ಅವರ ಮಾರ್ಗದರ್ಶನದಲ್ಲಿ ಪ್ರತೀ ಮನೆಯಲ್ಲಿ ಕಾಡು ಬೆಳೆಸಲು ಯೋಜನೆ ಹಾಕಿಕೊಂಡಿದ್ದೇವೆ ಎನ್ನುತ್ತಾರೆ.

Recommended Video

    IPLನಲ್ಲಿ ಕಳಪೆ ಪ್ರದರ್ಶನ ನೀಡಿರೋ ಈ 3 ನಾಯಕರಿಗೆ ಸಂಕಷ್ಟ | Oneindia Kannada
     ಕರ್ತವ್ಯದ ನಡುವೆಯೇ ಪರಿಸರ ಪ್ರೇಮ

    ಕರ್ತವ್ಯದ ನಡುವೆಯೇ ಪರಿಸರ ಪ್ರೇಮ

    ತನ್ನ ಬಿಡುವಿಲ್ಲದ ಕರ್ತವ್ಯದ ನಡುವೆಯೇ ದುರ್ಗಾಸಿಂಗ್ ಪರಿಸರದ ಉಳಿವಿಗಾಗಿ ದುಡಿಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ. ಪರಿಸರ ಉಳಿಸಿ, ಬೆಳೆಸಿ ಎನ್ನುವುದು ಕೇವಲ ಪುಸ್ತಕ ಹಾಗೂ ಭಾಷಣಕ್ಕೆ ಸೀಮಿತವಾಗಿರುವ ಈ ದಿನಗಳಲ್ಲಿ ದುರ್ಗಾಸಿಂಗ್‌ನಂತಹ ಕೆಲವೇ ಜನ ಪರಿಸರದ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+