ಫಲ್ಗುಣಿ ನದಿಯ ಮೇಲೆ ಭೂಮಾಫಿಯಾ ಕಣ್ಣು, ನದಿಯೊಡಲು ಸೇರಿತು ಮಣ್ಣು
ಮಂಗಳೂರು, ಜನವರಿ 04: ಇತ್ತೀಚೆಗೆ ಭೂಮಾಫಿಯಾ ಕಬಂಧಬಾಹು ಎಲ್ಲೆಲ್ಲೂ ಬಿಗಿಯಾಗುತ್ತಿದೆ. ಈ ಬಿಗಿಯಿಂದ ಬಿಡಿಸಿಕೊಳ್ಳೋದೇ ಕಷ್ಟವೆನಿಸುವಂತಾಗಿದೆ. ಈ ಕಬಂಧ ಬಾಹು ಮತ್ತಷ್ಟು ವಿಸ್ತಾರಗೊಂಡು ನದಿ ಪ್ರದೇಶವನ್ನು ಆಕ್ರಮಿಸುತ್ತಿದೆ. ಇದರಿಂದ ನದಿಪಾತ್ರಗಳು ಕಿರಿದಾಗುತ್ತಿದೆ. ಈ ಪರಿಸ್ಥಿತಿ ಮಂಗಳೂರಿನಲ್ಲಿ ಹರಿಯುತ್ತಿರುವ ಫಲ್ಗುಣಿ ನದಿಗೆ ಎದುರಾಗಿದೆ.
ದಂಬೆಲ್ ಬಳಿಯ ಫಲ್ಗುಣಿ ನಗರದ ಅಂಚಿನಲ್ಲಿ ಹರಿಯುತ್ತಿರುವ ಫಲ್ಗುಣಿ ನದಿಯ ಮೇಲೆ ಭೂಮಾಫಿಯಾ ಕಣ್ಣು ಬಿದ್ದಿದೆ. ಹಳೆಯ ಕಟ್ಟಡವನ್ನು ಕೆಡವಿರುವ ತ್ಯಾಜ್ಯವನ್ನು ನದಿಯ ಮೇಲೆಯೇ ಸುರಿದು ಒತ್ತುವರಿ ಮಾಡಲಾಗಿದೆ. ಎಕರೆಗಟ್ಟಲೆ ಭೂಮಿಯನ್ನು ಒತ್ತುವರಿ ಮಾಡಿ ನದಿಯನ್ನು ಕಟ್ಟಡ ತ್ಯಾಜ್ಯದ ಮಣ್ಣು - ಕಲ್ಲುಗಳಡಿ ಸಮಾಧಿ ಮಾಡಲಾಗಿದೆ. ರಾಜ್ಯ ಸರಕಾರದ ಭೂಮಿಯ ಸರ್ವೇ ವಿವರ ತಿಳಿಸುವ ದಿಶಾಂಕ್ ಅಪ್ಲಿಕೇಶನ್‌ನಲ್ಲಿ ಈಗಲೂ ಒತ್ತುವರಿ ಪ್ರದೇಶ ನದಿ ಪ್ರದೇಶವೆಂದೇ ತೋರಿಸುತ್ತದೆ.

ಭೂಮಾಫಿಯಾ ನದಿ ಪ್ರದೇಶವನ್ನು ಒತ್ತುವರಿ ಮಾಡಿದರೂ ಅಧಿಕಾರಿಗಳು ಮಾತ್ರ ಇತ್ತಕಡೆ ಗಮನ ಹರಿಸುತ್ತಿಲ್ಲ. ಭೂಸವಕಳಿಯನ್ನು ತಡೆಯುವ ಮ್ಯಾಂಗ್ರೋಸ್ ಎಂಬ ವಿಶೇಷ ತಳಿಯ ಮರಗಳನ್ನೇ ಸಮಾಧಿ ಮಾಡಿ ನದಿಯನ್ನು ಒತ್ತವರಿ ಮಾಡಲಾಗಿದೆ. ಈಗಾಗಲೇ ಈ ಫಲ್ಗುಣಿ ನದಿಗೆ ಒಳಚರಂಡಿ ತ್ಯಾಜ್ಯ ಹರಿದು ಕೊಚ್ಚೆ ಕೊಳಕಾಗಿದೆ.
ನದಿಯ ತಿಳಿನೀರು ಮಾಯವಾಗಿ ಕಪ್ಪು ಕೊಳಚೆಯಾಗಿದೆ. ಇದೇ ಕೊಳಚೆ ನೀರಿನಲ್ಲಿರುವ ಜಲಚರಗಳನ್ನು ಹಿಡಿಯುತ್ತಾರೆ. ಈ ಮೀನುಗಳನ್ನು ಭಕ್ಷಿಸುವವರಿಗೆ ಅದ್ಯಾವ ಮಾರಕ ಕಾಯಿಲೆ ವಕ್ಕರಿಸುತ್ತದೆಯೋ ಆ ದೇವರೇ ಬಲ್ಲ. ಇದೀಗ ಭೂಮಾಫಿಯಾ ಕೈಯಲ್ಲಿ ಸಿಲುಕಿ ಫಲ್ಗುಣಿ ನದಿ ನಲುಗುತ್ತಿದೆ.

ಈ ಬಗ್ಗೆ ಪರಿಸರವಾದಿಗಳು ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ಚೆನೈನಲ್ಲಿರುವ ಎನ್‌ಜಿಟಿ ನ್ಯಾಯಾಲಯಕ್ಕೆ ನದಿ ಒತ್ತುವರಿ ಬಗ್ಗೆ ಕ್ರಮ ಕೈಗೊಳ್ಳುವಂತೆ ಪರಿಸರವಾದಿಗಳು ಮನವಿ ಮಾಡಿದ್ದಾರೆ.
ಎನ್‌ಜಿಟಿ ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಭೂಮಾಫಿಯಾಗಳಿಂದ ಬಿಡಿಸಿಕೊಳ್ಳಲಾಗದೆ ಫಲ್ಗುಣಿ ಸುರಿಸುತ್ತಿರುವ ಕಣ್ಣೀರು ಅದರ ಕೊಚ್ಚೆ ನೀರಿನಲ್ಲಿ ಕರಗಿ ಹೋಗುತ್ತಿರುವುದು ಅಧಿಕಾರಿಗಳ, ಜನಪ್ರತಿನಿಧಿಗಳ ಕಣ್ಣಿಗೆ ಬೀಳರುವುದು ವಿಪರ್ಯಾಸವಾಗಿದೆ..












Click it and Unblock the Notifications