ಪುತ್ತೂರು ಬಳಿಕ ಸುಳ್ಯದಲ್ಲಿ ಬಾಯಿ ತೆರೆದ ಭೂಮಿ, ಜನರಲ್ಲಿ ಆತಂಕ
ಮಂಗಳೂರು ಆಗಸ್ಟ್ 17: ಇತ್ತೀಚೆಗೆ ಸುರಿದ ಮಹಾಮಳೆಯ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ತೆಂಕಿಲ ದರ್ಖಾಸು ಎಂಬಲ್ಲಿ ಭೂಮಿ ಬಿರುಕು ಬಿಟ್ಟ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಸುಳ್ಯದಲ್ಲೂ ಭೂಮಿ ಬಿರುಕು ಬಿಡುತ್ತಿರುವ ವಿಚಾರ ಜನರನ್ನು ಆತಂಕಗೊಳಿಸಿದೆ. ಸುಳ್ಯ ತಾಲೂಕಿನ ಕಲ್ಮಡ್ಕದ ಮಂಚಿಕಟ್ಟೆಯಲ್ಲಿ ಭೂಮಿ ಬಿರುಕು ಬಿಟ್ಟಿರುವುದು ಕಂಡುಬಂದಿದೆ.
ಈ ಪ್ರದೇಶದಲ್ಲಿ ಮಡಪ್ಪಾಡಿ ಎಂಬ ಹೊಳೆ ಹರಿಯುತ್ತಿದ್ದು, ಇದರ ಪಕ್ಕದ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ಭಾರೀ ಮಳೆ ಸುರಿದರೆ ಗುಡ್ಡ ಕುಸಿದು ಬೀಳುವ ಆತಂಕ ಎದುರಾಗಿದೆ. ಭೂಮಿಯಲ್ಲಿ ಬಿರುಕು ಕಂಡು ಬರಲು ಕಾರಣ ಏನೆಂದು ತಿಳಿದುಬಂದಿಲ್ಲ.

ಇತ್ತೀಚೆಗೆ ಪುತ್ತೂರು ಸಮೀಪದ ಪಂಜದಲ್ಲಿ ಇದೇ ರೀತಿ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಬಳಿಕ ವಿಜ್ಞಾನಿಗಳು ಭೂಕಂಪದ ಎಚ್ಚರಿಕೆಯನ್ನು ನೀಡಿದ್ದರು. ಕೆಲ ದಿನಗಳ ಹಿಂದೆ ಪುತ್ತೂರಿನ ತೆಂಕಿಲ ದರ್ಖಾಸಿನ ಗುಡ್ಡ ಭಾಗದಲ್ಲಿ ಇದೇ ರೀತಿ ಬಿರುಕು ಕಂಡಿತ್ತು. ಗುಡ್ಡ ಕುಸಿದು ಬೀಳುವ ಆತಂಕ ಎದುರಾಗಿರುವ ಕಾರಣ ಈ ಪ್ರದೇಶದಲ್ಲಿ ವಾಸವಾಗಿರುವ 11 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.











Click it and Unblock the Notifications