ಪುತ್ತೂರು: ಪ್ರಯಾಣಿಕನನ್ನು ಕಾಲಿಂದ ಒದ್ದು ರಸ್ತೆಗೆ ಬೀಳಿಸಿದ್ದ KSRTC ಕಂಡಕ್ಟರ್ ಅಮಾನತು
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲದಲ್ಲಿ ಪ್ರಯಾಣಿಕನೊಂದಿಗೆ ಅಮಾನವೀಯವಾಗಿ ನಡೆದುಕೊಂಡ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಅನ್ನು ಅಮಾನತುಗೊಳಿಸಲಾಗಿದೆ. ಪ್ರಯಾಣಿಕನಿಗೆ ಕಾಲಿನಿಂದ ಒದ್ದು ಬಸ್ ಕಂಡಕ್ಟರ್ ರಸ್ತೆಗೆ ತಳ್ಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಂಡಕ್ಟರ್ ವರ್ತನೆಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲವರು ಬಸ್ ಕಂಡಕ್ಟರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.
ವೈರಲ್ ವಿಡಿಯೋದಲ್ಲಿ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಪ್ರಯಾಣಿಕನನ್ನು ಮನಬಂದಂತೆ ಥಳಿಸಿ, ಕಾಲಿನಿಂದ ಒದ್ದಿದ್ದಾರೆ. ಈ ಮೂಲಕ ಬಸ್ ಹತ್ತದಂತೆ ತಡೆದಿದ್ದಾರೆ. ಇದರಿಂದ ಪ್ರಯಾಣಿಕ ಬಸ್‌ನಿಂದ ಕೆಳಗೆ ಬೀಳುತ್ತಾನೆ. ಬಸ್ ಕಂಡಕ್ಟರ್ ಇಂಥಹ ವರ್ತನೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಬಹುಶಃ ಪ್ರಯಾಣಿಕ ಮದ್ಯಪಾನ ಮಾಡಿರಬಹುದು ಅಥವಾ ದುರ್ವರ್ತನೆ ತೋರಿರಬಹುದು ಎನ್ನುವ ಶಂಕೆಗಳಿವೆ. ಆದರ ಇಷ್ಟೊಂದು ಕಠೋರವಾಗಿ ವರ್ತಿಸುವುದು ಪ್ರಯಾಣಿಕನ ಜೀವನಕ್ಕೆ ಅಪಾಯ ತಂದೊಡ್ಡಬಹುದು ಎಂದು ಕೆಲವರು ಹೇಳಿದ್ದಾರೆ. ಒಂದು ವೇಳೆ ಪ್ರಯಾಣಿಕ ಮದ್ಯಪಾನ ಮಾಡಿದ್ದೇ ನಿಜವಾದರೂ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ದೂರಲಾಗಿದೆ.
ಪುತ್ತೂರು : ಈಶ್ವರಮಂಗಲದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಅಮಾನವೀಯ ಕೃತ್ಯ.
— ಕರುನಾಡಿನ ನೀಲಿ ನಕ್ಷತ್ರ💛❤️ (@NaadaPremiSha) September 7, 2022
ಪ್ರಯಾಣಿಕನಿಗೆ ಕಾಲಿನಿಂದ ಒದ್ದು ರಸ್ತೆಗೆ ತಳ್ಳಿದ ನಿರ್ವಾಹಕ. pic.twitter.com/qhpUhNohSM

ಪ್ರಯಾಣಿಕ ಬಸ್‌ನಿಂದ ಕೆಳಗೆ ಬೀಳುತ್ತಿದ್ದಂತೆ ಬಸ್ ಅಲ್ಲಿಂದ ತೆರಳಿದೆ. ಪ್ರಯಾಣಿಕನ ಜೊತೆ ಅನುಚಿತ ಅಮಾನವೀಯ ವರ್ತನೆ ತೋರಿದ ವ್ಯಕ್ತಿಯನ್ನು ಕೆಎ 21 ಎಫ್ 0002 ಬಸ್ ನಂಬರ್‌ನ ನಿರ್ವಾಹಕ ಸುಬ್ಬರಾಜ್ ರೈ ಎಂದು ಗುರುತಿಸಲಾಗಿದೆ. ಆದರೆ ಬಸ್ಸಿನಲ್ಲಿರುವ ವ್ಯಕ್ತಿ ಯಾವುದೇ ಸ್ಥಿತಿಯಲ್ಲಿದ್ದರೂ ಕಾನೂನು ಕೈಗೆತ್ತಿಕೊಳ್ಳುವ ಯಾವುದೇ ಅಧಿಕಾರ ನಿರ್ವಾಹಕರಿಗಿರುವುದಿಲ್ಲ. ಇಲ್ಲಿ ಬಸ್ ಕಂಡಕ್ಟರ್ ಮಾಡಿರುವುದು ತಪ್ಪು ಎಂದು ಕಾಣುತ್ತಿದ್ದು, ಹೀಗಾಗಿ ಕೂಡಲೇ ಸೇವೆಯಿಂದ ಅಮಾನತು ಮಾಡಲಾಗುವುದು ಎಂದು ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದ್ದರು. ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಸುಬ್ಬರಾಜ್ ರೈ ಅವರನ್ನು ಅಮಾನವೀಯ ವರ್ತನೆಯಿಂದಾಗಿ ಅಮಾನತುಗೊಳಿಸಲಾಗಿದೆ.












Click it and Unblock the Notifications