ಕಾಸರಗೋಡು; ಪೆಟ್ರೋಲ್ ಬಂಕ್‌ಗಳಲ್ಲಿ ಮಾರಾಟ ಕುಸಿತ!
ಕಾಸರಗೋಡು, ಏಪ್ರಿಲ್ 08; ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ದಿನ ದಿನವೂ ಏರಿಕೆಯಾಗುತ್ತಿದೆ. ಆದರೆ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ತೆರಿಗೆಗೆ ಅನುಗುಣವಾಗಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ವ್ಯತ್ಯಾಸವಿದೆ.
ಕರ್ನಾಟಕ-ಕೇರಳ ಗಡಿಭಾಗದಲ್ಲಿರುವ ಕಾಸರಗೋಡು ಮತ್ತು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಹಲವು ಪೆಟ್ರೋಲ್ ಬಂಕ್‌ಗಳಲ್ಲಿ ದರ ವ್ಯತ್ಯಾಸದಿಂದ ಹಲವಾರು ಬದಲಾವಣೆಗಳು ಆಗುತ್ತಿವೆ. ಕೇರಳದಲ್ಲಿ ಪೆಟ್ರೋಲ್, ಡೀಸೆಲ್ ದರ ಶೇ 25 ರಿಂದ 30ರಷ್ಟು ಕಡಿಮೆಯಾಗಿದೆ.
ಕಾಸರಗೋಡಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಪೆಟ್ರೋಲ್ ಲೀಟರ್‌ಗೆ 6 ರೂ., ಡೀಸೆಲ್ 8 ರಿಂದ 9 ರೂ. ಕಡಿಮೆ ದರವಿದೆ. ಇದರಿಂದಾಗಿ ವಾಹನ ಸವಾರರು ಕಾಸರಗೋಡು ಬಿಟ್ಟು ಕರ್ನಾಟಕಕ್ಕೆ ಬಂದು ತೈಲ ತುಂಬಿಸಿಕೊಳ್ಳುತ್ತಿದ್ದಾರೆ.

ಕೇರಳ ಪೆಟ್ರೋಲ್, ಡೀಸೆಲ್ ಡೀಲರ್ಸ್ ಅಸೋಸಿಯೇಷನ್ ಖಜಾಂಚಿ ಕೆ. ಲಕ್ಷ್ಮೀನಾರಾಯಣ ಮಾತನಾಡಿ, "ಕೊಚ್ಚಿ ತನಕ ಸರಕು ಸಾಗಣೆ ಮಾಡುವ ಯಾವ ಲಾರಿಯವರು ಸಹ ಕೇರಳದಲ್ಲಿ ಡೀಸೆಲ್ ಹಾಕಿಸುತ್ತಿಲ್ಲ" ಎಂದು ಹೇಳಿದ್ದಾರೆ.
ಕೆ. ಲಕ್ಷ್ಮೀನಾರಾಯಣ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಪೆಟ್ರೋಲ್ ಬಂಕ್ ಹೊಂದಿದ್ದಾರೆ. ಪ್ರತಿದಿನ ಸುಮಾರು 10 ಸಾವಿರ ಲೀಟರ್ ಡೀಸೆಲ್ ಅವರು ಮಾರಾಟ ಮಾಡುತ್ತಿದ್ದರು. ಆದರೆ ಕರ್ನಾಟಕ ಸರ್ಕಾರ ತೆರಿಗೆ ಕಡಿತಗೊಳಿಸಿದ ಬಳಿಕ ಕರ್ನಾಟಕದಲ್ಲಿ ದರ ಇಳಿಕೆಯಾಗಿ ಈಗ ಡೀಸೆಲ್ ಮಾರಾಟ 2,500 ಲೀಟರ್‌ಗೆ ಕುಸಿತಗೊಂಡಿದೆ.
ಕರ್ನಾಟಕ ಮೂಲಕ ಕೇರಳಕ್ಕೆ ಆಗಮಿಸುವ ಲಾರಿಗಳು ಕರ್ನಾಟಕದಲ್ಲಿಯೇ 300 ರಿಂದ 400 ಲೀಟರ್ ಡೀಸೆಲ್ ತುಂಬಿಸಿಕೊಳ್ಳುತ್ತಾರೆ. ಬಳಿಕ ಮಾಹೆಯಲ್ಲಿ ಭರ್ತಿ ಮಾಡಿಸಿಕೊಳ್ಳುತ್ತಾರೆ. ಕೇರಳ ರಾಜ್ಯದಲ್ಲಿ ಇಂಧನ ತುಂಬಿಸಿಕೊಳ್ಳುವುದೇ ಇಲ್ಲ.
ಹೆದ್ದಾರಿಯಲ್ಲಿರುವ ಪೆಟ್ರೋಲ್ ಬಂಕ್‌ಗಳ ಆದಾಯ ಬಹುತೇಕ ಲಾರಿಗಳ ಮೇಲೆ ನಿರ್ಧರಿತವಾಗುತ್ತದೆ. 200 ಪ್ರಯಾಣಿಕರ ವಾಹನ ಇಂಧನ ತುಂಬಿಸಿಕೊಳ್ಳುವುದು ಒಂದೇ 10 ಲಾರಿಗಳು ಡೀಸೆಲ್ ಭರ್ತಿ ಮಾಡಿಸಿಕೊಳ್ಳುವುದೇ ಒಂದೇ. ಆದರೆ ಈಗ ಲಾರಿಗಳೇ ಕರ್ನಾಟಕದ ಮೊರೆ ಹೋಗಿವೆ.
ಕಾಸರಗೋಡಿನ ಪೆಟ್ರೋಲ್ ಬಂಕ್‌ಗಳಲ್ಲಿ ಶೇ 75ರಷ್ಟು ಮಾರಾಟ ಕುಸಿತವಾಗಿದೆ. ಆದರೆ ಕರ್ನಾಟಕ-ಕೇರಳ ಗಡಿಯಲ್ಲಿ ಇರುವ ತಲಪಾಡಿ ಚೆಕ್ ಪೋಸ್ಟ್ ಆಚೆ ಇರುವ ಬಂಕ್‌ಗಳಲ್ಲಿ ಶೇ 90ರಷ್ಟು ಮಾರಾಟ ಹೆಚ್ಚಾಗಿದೆ.
2021ರ ನವೆಂಬರ್ ಬಳಿಕ ಪೆಟ್ರೋಲ್, ಡೀಸೆಲ್ ಮಾರಾಟದಲ್ಲಿ ಕುಸಿತವಾಗಿದೆ. ಪೆಟ್ರೋಲ್ ಬಂಕ್ ಮಾಲೀಕರ ಪ್ರಕಾರ ಪ್ರತಿದಿನ 4 ಸಾವಿರ ಲೀಟರ್ ಪೆಟ್ರೋಲ್, 8 ಸಾವಿರ ಲೀಟರ್ ಡೀಸೆಲ್ ಮಾರಾಟವಾಗುತ್ತಿತ್ತು. ಈಗ ತಿಂಗಳಿಗೆ 36 ಸಾವಿರ ಲೀಟರ್ ಮಾರಾಟವಾಗುತ್ತಿದೆ.
ಕೇರಳ-ಕರ್ನಾಟಕ ಗಡಿಯ 50 ಮೀಟರ್ ದೂರದಲ್ಲಿರುವ ಕರ್ನಾಟಕದ ಪೆಟ್ರೋಲ್ ಬಂಕ್‌ಗಳಲ್ಲಿ ಮಾರುದ್ದದ ಕ್ಯೂ ಇರುತ್ತದೆ. ಪ್ರತಿದಿನ ಅವರು ಸುಮಾರು 24 ಸಾವಿರ ಲೀಟರ್ ತೈಲ ಮಾರಾಟ ಮಾಡುತ್ತಿದ್ದಾರೆ.
ಕೇರಳದಲ್ಲಿ 2016ರಲ್ಲಿ ಎಲ್‌ಡಿಎಫ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯಲ್ಲಿ ಬದಲಾವಣೆ ಮಾಡಿಲ್ಲ. ವ್ಯಾಟ್ ಅನ್ನು ಸಹ ಇಳಿಕೆ ಮಾಡಿಲ್ಲ. ಇದರಿಂದಾಗಿ ಪ್ರತಿ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದಾಗಲೂ ಕೇರಳದಲ್ಲಿ ದರ ಜಾಸ್ತಿಯೇ ಆಗುತ್ತದೆ.
ಕಳೆದ 11 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಶೇ 11ರಷ್ಟು ಏರಿಕೆಯಾಗಿದೆ. ಸರಕು ಸಾಗಣೆ ಲಾರಿಗಳು ಮಾತ್ರವಲ್ಲ ಬೋರ್‌ವೆಲ್ ಕೊರೆಯುವ ಲಾರಿಗಳು ಸಹ ಕರ್ನಾಟಕದಲ್ಲಿಯೇ ಇಂಧನ ತುಂಬಿಸಿಕೊಳ್ಳುತ್ತಿವೆ. ಈ ಲಾರಿಗಳು ಒಂದು ಬಾರಿ ಸುಮಾರು 1,200 ಲೀಟರ್ ಡೀಸೆಲ್ ತುಂಬಿಸಿಕೊಳ್ಳುತ್ತವೆ. ಇವು ಕರ್ನಾಟಕದ ಕಡೆ ಸಾಗುತ್ತಿರುವುದು ಬಂಕ್ ಮಾಲೀಕರಿಗೆ ನಷ್ಟ ಉಂಟು ಮಾಡಿದೆ.












Click it and Unblock the Notifications