ಕಾರ್ತಿಕ ರಾಜ್ ಕೊಲೆ: ಅಮಾಯಕನಂತಿದ್ದ ಶಿಹಾಬ್ ಮೇಲಿವೆ ಕ್ರಿಮಿನಲ್ ಕೇಸ್
'ಮಂಗಳೂರು ಚಲೋ' ವೇದಿಕೆಯಲ್ಲಿ ಕಾರ್ತಿಕ್ ರಾಜ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದಾನೆ ಎನ್ನಲಾದ ಶಿಹಾಬ್ ನನ್ನುಕುಳ್ಳಿರಿಸಿ ಅಮಾಯಕ ಎಂದು ಬಿಂಬಿಸಲಾಗಿತ್ತು.
ಮಂಗಳೂರು, ಮೇ 8: ಕಾರ್ತಿಕ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರದ ಶಿಹಾಬ್ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಕಾರ್ತಿಕ್ ರಾಜ್ ಕೊಲೆ ಪ್ರಕರಣದಲ್ಲಿ ಶಿಹಾಬ್ ನನ್ನು ವಶಕ್ಕೆ ಪಡೆದಿರಲಿಲ್ಲ. ಬದಲಾಗಿ ಶಿಹಾಬ್ ವಿರುದ್ಧ ಇತರೆ ನಾಲ್ಕು ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಇದೇ ಕಾರಣಕ್ಕೆ ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತ ಪ್ರಕಾಶ್ ಪೂಜಾರಿ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಅಹ್ಮದ್ ಖುರೇಶಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಖುರೇಶಿ ಮೇಲೆ ಪೊಲೀಸ್ ದೌರ್ಜನ್ಯ ಎಸಗಿದರಿಂದಲೇ ಆತನ ಕಿಡ್ನಿ ವೈಫಲ್ಯ ಗೊಂಡಿದೆ ಎಂದು ಆರೋಪಿಸಿ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ಕೂಡ ನಡೆದಿತ್ತು.[ಹಳದಿ ಜೋಡಿ ಅನಕೊಂಡಗಳ ಆಗಮನಕ್ಕೆ ಕಾದಿದೆ ಪಿಲಿಕುಳ]

ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದು ಲಾಠಿ ಚಾರ್ಜ್ ಆಗಿ ಪೊಲೀಸ್ ಸೇರಿದಂತೆ ಹೆಚ್ಚಿನ ಮಂದಿ ಗಾಯಗೊಂಡಿದ್ದರು. ಈ ಹಿನ್ನಲೆಯಲ್ಲಿ ಪೊಲೀಸ್ ದೌರ್ಜನ್ಯದ ವಿರುದ್ಧವಾಗಿ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ 'ಮಂಗಳೂರು ಚಲೋ ' ಎಂಬ ಕಾರ್ಯಕ್ರಮ ಕೂಡಾ ನಡೆದಿತ್ತು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾರ್ತಿಕ್ ರಾಜ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದಾನೆ ಎಂದು ಹೇಳಲಾದ ಶಿಹಾಬ್ ನನ್ನುಕುಳ್ಳಿರಿಸಿ ಆತನನ್ನು ಅಮಾಯಕ ಎಂದು ಬಿಂಬಿಸಲಾಗಿತ್ತು. ಆದರೆ ಅದೇ ಶಿಹಾಬ್ ವಿರುದ್ಧ ನಾಲ್ಕು ಕ್ರಿಮಿನಲ್ ಕೇಸುಗಳು ದಾಖಲಾಗಿವೆ ಎನ್ನುವ ಬಗ್ಗೆ ಇದೀಗ ಪೊಲೀಸ್ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.[3ರಿಂದ 63ಕ್ಕೆ ಕುಸಿತ, ಸ್ವಚ್ಛತೆಯಲ್ಲಿ ಮಂಗಳೂರು ಎಡವಿದ್ದೆಲ್ಲಿ?]
ಕಳೆದ ನವೆಂಬರ್ 19 ರಂದು ಯುವತಿಯೋರ್ವಳು ಕಾಣೆಯಾಗಿದ್ದ ಹಿನ್ನಲೆಯಲ್ಲಿ ಶಿಹಾಬ್ ಸೇರಿದಂತೆ ಸುಮಾರು 15 ಮಂದಿಯ ತಂಡವೊಂದು ಕುತ್ತಾರಿನ ವಿಕ್ಟರ್ ಲೋಬೊ ಎಂಬವರ ಮನೆಗೆ ನುಗ್ಗಿ ದಾಂಧಲೆ ನಡೆಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಶಿಹಾಬ್ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಎನ್ನಲಾಗಿದೆ.
ಇನ್ನು ಡಿಸೆಂಬರ್ 4 ರಂದು ಶಿಹಾಬ್ ಮತ್ತು ತಂಡ ಪಡೀಲ್ ನ ಕ್ಯಾಮ್ಕೋ ಕ್ವಾಟ್ರಸ್ ನಲ್ಲಿರುವ ಭರತ್ ಆಳ್ವ ಎಂಬವರ ಮನೆಗೆ ನುಗ್ಗಿ ಅವರನ್ನು ಕೊಲೆಗೆ ಯತ್ನಿಸಿತ್ತು ಎನ್ನಲಾಗಿದೆ.ಈ ಸಂದರ್ಭದಲ್ಲಿ ಭರತ್ ಆಳ್ವ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಡಿಸೆಂಬರ್ 19 ರಂದು ಮತ್ತೊಂದು ಪ್ರಕರಣದಲ್ಲಿ ಶಿಹಾಬ್ ತನ್ನ ಜೊತೆಗಾರರೊಂದಿಗೆ ಅರ್ಕುಳದಲ್ಲಿ ವೈಟ್ ಶೆಲ್ ಎಂಬ ಕಚೇರಿಗೆ ನುಗ್ಗಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಈ ಪ್ರಕರಣದಲ್ಲಿ ಕಚೇರಿಯೊಳಗಿದ್ದ ಒಂದು ಮೊಬೈಲ್ ಮತ್ತು 2,000 ನಗದು ಲೂಟಿಗೈಯ್ಯಲಾಗಿತ್ತು. ನಂತರ ಶಿಹಾಬ್ ನನ್ನು ಬಂಧಿಸಲಾಗಿತ್ತು.
ಕಳೆದ ಮಾರ್ಚ್ ೨೧ ರಂದು ಮುಂಜಾನೆ ಶಿಹಾಬ್ ಕೊಣಾಜೆ ಠಾಣಾ ವ್ಯಾಪ್ತಿಯ ಕಲ್ಲರಕೊಡಿಯಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ವೇಳೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿರುವುದನ್ನು ಗಮನಿಸಿ ಅಲ್ಲಿಂದ ಪರಾರಿಯಾಗಲು ಯತ್ನಿಸಿ ಪೋಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಈ ವೇಳೆ ಈತನನ್ನು ವಿಚಾರಣೆಗೆ ಒಳಪಡಿಸಲಾಗಿ ಈತ ಬಳಸುತ್ತಿದ್ದುದು ಕಳವು ಗೈದ ಬೈಕ್ ಎಂದು ಪೊಲೀಸರಿಗೆ ತಿಳಿದು ಬಂದಿತ್ತು. ಈ ಸಂದರ್ಭದಲ್ಲೂ ಈತನ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.
ಹೀಗೆ ಅಧಿಕಾರಿಯೋರ್ವರು ಶಿಹಾಬ್ ಮೇಲಿರುವ ಸಮಸ್ತ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಸಲಿಗೆ ಕೊಣಾಜೆ ಪೊಲೀಸರು ಈತನನ್ನು ಬಂಧಿಸಿದ್ದು, ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದ್ದರೂ ಇದೀಗ ಶಿಹಾಬ್ ನನ್ನು ಕಾರ್ತಿಕ್ ರಾಜ್ ಕೊಲೆ ಪ್ರಕರಣದಲ್ಲಿ ಬಂಧಿಸಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಪೋಲೀಸರ ವಿರುದ್ಧ ಗೂಬೆಗೂರಿಸುವ ಪ್ರಯತ್ನವಾಗುತ್ತಿದೆ ಎಂದು ಅಧಿಕಾರಿ ಆರೋಪಿಸಿದ್ದಾರೆ.
ಈ ವ್ಯವಸ್ಥಿತ ಸಂಚಿನ ಹಿಂದೆ ಮರಳು ಮಾಫಿಯಾ , ಡ್ರಗ್ ಮಾಫಿಯಾ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾದ ಕೈವಾಡ ಅಡಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್, "ಕಾರ್ತಿಕ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಶಿಹಾಬ್ ಮೇಲೆ ಪೊಲೀಸ್ ದೌರ್ಜನ್ಯ ನಡೆಸಲಾಗಿದೆ ಎಂಬ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಆದರೆ ಇಂಥ ಯಾವುದೇ ಹೇಳಿಕೆಯಾಗಲಿ, ದೂರಾಗಲಿ ನನ್ನ ಗಮನಕ್ಕೆ ಬಂದಿಲ್ಲ. ಶಿಹಾಬ್ ಮೇಲೆ ಈಗಾಗಲೇ ಸುಮಾರು 4 ಕ್ರಿಮಿನಲ್ ಕೇಸುಗಳು ದಾಖಲಾಗಿದೆ. ಕಾರ್ತಿಕ್ ರಾಜ್ ಕೊಲೆ ಪ್ರಕರಣದಲ್ಲಿ ಶಿಹಾಬ್ ನನ್ನು ವಶಕ್ಕೆ ಪಡೆಯಲಾಗಿಲ್ಲ. ಅಲ್ಲದೆ ಒಂದು ವೇಳೆ ದೌರ್ಜನ್ಯ ನಡೆದಿದ್ದೇ ಆದರೆ ಆತ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಬಹುದಾಗಿತ್ತು," ಎಂದು ತಿಳಿಸಿದ್ದಾರೆ.












Click it and Unblock the Notifications