ಕಂಬಳ ನಿಷೇಧ ತೆರವಿಗೆ ಕರ್ನಾಟಕ ಮನವಿ ಮಾಡಿಲ್ಲ
ಮಂಗಳೂರು, ಡಿ. 8 : ಕರ್ನಾಟಕ ಸರ್ಕಾರ ಕಂಬಳ ನಿಷೇಧವನ್ನು ಪುನರ್ ಪರಿಶೀಲಿಸುವಂತೆ ಇದುವರೆಗೆ ಯಾವುದೇ ಮನವಿಯನ್ನು ಸಲ್ಲಿಸಿಲ್ಲ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಕರಾವಳಿ ಕರ್ನಾಟಕದ ಜಾನಪದ ಕ್ರೀಡೆ ಉಳಿಸಲು ಪೂರಕ ಪ್ರಯತ್ನ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಭಾನುವಾರ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಜಿಲ್ಲಾ ಕಂಬಳ ಸಮಿತಿಗಳ ಸದಸ್ಯರು ಮಂಗಳೂರಿನ ನಿವಾಸದಲ್ಲಿ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡರನ್ನು ಭೇಟಿ ಮಾಡಿ, ಕರಾವಳಿಯ ಜಾನಪದ ಕ್ರೀಡೆಯನ್ನು ಉಳಿಸುವಂತೆ ಮನವಿ ಸಲ್ಲಿಸಿದ್ದರು. [ಉಡುಪಿಯಲ್ಲಿ ಕಂಬಳ ನಿಷೇಧ, ಜನರ ಆಕ್ರೋಶ]

ಮನವಿ ಸ್ವೀಕರಿಸಿ ಮಾತನಾಡಿದ ಸದಾನಂದ ಗೌಡರು, ಕಂಬಳ ಕ್ರೀಡೆಗೆ ಈಗಾಗಲೇ ರಾಜ್ಯ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂಬಳ ಮುಂದುವರಿಸಲು ಸಚಿವ ಸಂಪುಟದಲ್ಲಿ ಚರ್ಚಿಸಿ ಪೂರಕ ತೀರ್ಮಾನ ಕೈಗೊಳ್ಳಬೇಕಿತ್ತು. ಆದರೆ, ಸರ್ಕಾರದಿಂದು ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಂಬಳ ನಿಷೇಧದ ಬಗ್ಗೆ ಅಧಿಕಾರಿಗಳು ಆತುರದ ನಿರ್ಧಾರ ಕೈಗೊಂಡಿದ್ದಾರೆ. ಚೆನ್ನೈಯ ಪ್ರಾಣಿದಯಾ ಸಂಘ ಪಶುಸಂಗೋಪನ ಇಲಾಖೆಗೆ ನೋಟೀಸ್ ನೀಡಿದ ಕೂಡಲೇ ಅಧಿಕಾರಿಗಳು ಇದನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. [ಕಂಬಳ ನಿಷೇಧ : ರಸ್ತೆಗಿಳಿದ ಸಿಂಗಾರಗೊಂಡ ಕೋಣಗಳು]
ಜಿಲ್ಲಾಧಿಕಾರಿಗಳು ಅದರ ಅನ್ವಯ ಕಂಬಳಕ್ಕೆ ನಿಷೇಧ ಹೇರಿದ್ದಾರೆ. ಅಧಿಕಾರಿಗಳು ನೊಟೀಸ್ ಬಗ್ಗೆ ವಿಶ್ಲೇಷಣೆ ಮಾಡಬೇಕಿತ್ತು. ಉಭಯ ಜಿಲ್ಲೆಗಳ ಸಚಿವರ ಜತೆ ಚರ್ಚೆ ನಡೆಸಬೇಕಿತ್ತು. ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದುವರಿಯಬೇಕಿತ್ತು ಎಂದು ಸದಾನಂದ ಗೌಡರು ಹೇಳಿದರು. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]
ಕಂಬಳ ಉಳಿಸಲು ಪ್ರಯತ್ನ : ಕರಾವಳಿಯ ಜಾನಪದ ಕ್ರೀಡೆ ಕಂಬಳ ಉಳಿಸಲು ಪೂರಕ ಪ್ರಯತ್ನ ನಡೆಸಲಾಗುವುದು ಎಂದು ಸದಾನಂದ ಗೌಡರು ಈ ಸಮಯದಲ್ಲಿ ನಿಯೋಗಕ್ಕೆ ಭರವಸೆ ನೀಡಿದರು. ಶತಮಾನಗಳಿಂದ ನಡೆಯುತ್ತಿರುವ ಕಂಬಳವನ್ನು ಏಕಾಏಕಿ ನಿಷೇಧಿಸುವುದು ಸರಿಯಲ್ಲ ಎಂದರು.
ಸದ್ಯ ಚಾಲ್ತಿಯಲ್ಲಿರುವ ಕಂಬಳದ ರೂಪುರೇಷೆಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಂಡು ಜಾನಪದ ಕ್ರೀಡೆಯನ್ನು ಉಳಿಸುವ ಹೊಣೆಗಾರಿಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲಿದೆ. ಸಮಿತಿ ನೀಡಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುತ್ತೇನೆ ಎಂದು ತಿಳಿಸಿದರು.
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್, ಕೆ. ಗುಣಪಾಲ ಕಡಂಬ, ಸುರೇಶ್ ಕೆ. ಪೂಜಾರಿ, ಸೀತಾರಾಮ ಶೆಟ್ಟಿ. ಪಿ.ಆರ್. ಶೆಟ್ಟಿ, ಆಶೋಕ ರೈ, ಕಂಬಳ ತೀರ್ಪುಗಾರ ರಾಜೀವ ಶೆಟ್ಟಿ, ನವೀನ್ ಚಂದ್ರ ಆಳ್ವ, ಶ್ರೀನಿವಾಸ ಕಾಮತ್ ಮುಂತಾದವರ ನಿಯೋಗ ಸಚಿವರನ್ನು ಭೇಟಿ ಮಾಡಿತ್ತು.












Click it and Unblock the Notifications