ಮಂಗಳೂರು : ಹರೀಶ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ
ಮಂಗಳೂರು, ನವೆಂಬರ್ 13 : ಬಂಟ್ವಾಳದಲ್ಲಿ ಗುರುವಾರ ಸಂಜೆ ಹತ್ಯೆಯಾದ ಹರೀಶ್ ಕುಟುಂಬಕ್ಕೆ ಸರ್ಕಾರದ ಪರವಾಗಿ 5 ಲಕ್ಷ ರೂ. ಪರೊಹಾರ ಘೋಷಣೆ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
ಶುಕ್ರವಾರ ಸಚಿವ ರಮಾನಾಥ ರೈ ಮತ್ತು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರು ನಾವೂರು ಹಳೆಗೇಟು ನಿವಾಸಿ ಹರೀಶ (30) ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಮಯದಲ್ಲಿ ಹರೀಶ್ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವುದಾಗಿ ಸಚಿವರು ಪ್ರಕಟಿಸಿದರು. [ಬಂಟ್ವಾಳದಲ್ಲಿ ಯುವಕನ ಕೊಲೆ]

ಆಸ್ಪತ್ರೆಗೆ ಭೇಟಿ : ಹರೀಶ್ ಮನೆಗೆ ಭೇಟಿ ನೀಡಿದ ಬಳಿಕ ಸಚಿವರು ಹರೀಶ ಜೊತೆ ಗುರುವಾರ ಇದ್ದ ಶಮೀವುಲ್ಲ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಗುರುವಾರ ಸಂಜೆ ಕ್ರಿಕೆಟ್ ಆಡಿ ಮನೆಗೆ ವಾಪಸ್ ಆಗುವಾಗ ಹರೀಶ್ ಮತ್ತು ಶಮೀವುಲ್ಲ ಅವರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು. ಹರೀಶ್ ಮೃತಪಟ್ಟರೆ ಶಮೀವುಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ಮಾತನಾಡಿದ ಸಚಿವ ರಮಾನಾಥ ರೈ ಅವರು, 'ಹರೀಶ್ ಅವರನ್ನು ಹತ್ಯೆ ಮಾಡಿದ ಆರೋಪಿಗಳು ಯಾವುದೇ ಧರ್ಮಕ್ಕೆ ಸೇರಿದ್ದರೂ ಅವರನ್ನು ಬಂಧಿಸಿ, ಕಾನೂನಿನಂತೆ ಕ್ರಮಕೈಗೊಳ್ಳಲಾಗುವುದು' ಎಂದು ಹೇಳಿದರು. [ಮಂಗಳೂರು ಬಂದ್ ಚಿತ್ರಗಳು]

ಗುರುವಾರ ರಾತ್ರಿ ಬಂಟ್ವಾಳದಲ್ಲಿ ನಡೆದ ಹರೀಶ್ ಕೊಲೆ ಮತ್ತು ಮಡಿಕೇರಿಯಲ್ಲಿ ನಡೆದ ವಿಎಚ್‌ಪಿ ಮುಖಂಡ ಕುಟ್ಟಪ್ಪ ಹತ್ಯೆ ಖಂಡಿಸಿ ಇಂದು ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಮಂಗಳೂರು ಬಂದ್‌ಗೆ ಕರೆ ನೀಡಿದ್ದವು. ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.












Click it and Unblock the Notifications