Mangaluru Constituency: ಉಳ್ಳಾಲದ ಧರ್ಮ ರಾಜಕಾರಣದಲ್ಲಿ ಕಾಂಗ್ರೆಸ್ಸಿನದ್ದೇ ಪ್ರಾಬಲ್ಯ
ಒಂದು ಕಾಲದಲ್ಲಿ ಕಮ್ಯೂನಿಸ್ಟರ ಭದ್ರಕೋಟೆಯಾಗಿದ್ದ ಮಂಗಳೂರು ಅಸೆಂಬ್ಲಿ ಕ್ಷೇತ್ರದಲ್ಲಿ ಈಗ ಹಲವು ಚುನಾವಣೆಯಲ್ಲಿ ಕಾಂಗ್ರೆಸ್ಸಿನದ್ದೇ ಪಾರುಪತ್ಯ. ಧರ್ಮ ರಾಜಾಕಾರಣಕ್ಕೆ ಹೆಸರಾಗಿರುವ ಈ ಕ್ಷೇತ್ರ 1978 ರಿಂದ 2008ರ ತನಕ ಕ್ಷೇತ್ರ ವಿಂಗಡಣೆಯಾಗುವವರೆಗೆ ಉಳ್ಳಾಲ ವಿಧಾನಸಭಾ ಕ್ಷೇತ್ರವಾಗಿತ್ತು. ಅಲ್ಲಿಂದ ಸತತ ಮೂರು ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಯು.ಟಿ.ಖಾದರ್ ಜಯಭೇರಿ ಸಾಧಿಸುತ್ತಾ ಬರುತ್ತಿದ್ದಾರೆ.
ದೇಶದ ಅತಿ ಹಳೆಯ ಪ್ರದೇಶಗಳಲ್ಲಿ ಒಂದು ಉಳ್ಳಾಲ, ಇದಕ್ಕೆ ಇನ್ನಷ್ಟು ಪ್ರದೇಶಗಳನ್ನು ಸೇರ್ಪಡಿಸಿ, ಕ್ಷೇತ್ರ ವಿಂಗಡಣೆಯ ವೇಳೆ ಹೊಸ ಕ್ಷೇತ್ರವನ್ನಾಗಿ ಪರಿಚಯಿಸಲಾಯಿತು. ಉಳ್ಳಾಲದ ರಾಣಿ ಅಬ್ಬಕ್ಕ ಪೋರ್ಚುಗೀಸರನ್ನು ಎದುರಿಸಿದ್ದು ಇದೇ ಪ್ರದೇಶದಲ್ಲಿ. ಸೋಮೇಶ್ವರ ಬೀಚ್, ಜುಮ್ಮಾ ಮಸೀದಿ, ಅರಬ್ಬೀ ಸಮುದ್ರ ಕ್ಷೇತ್ರದ ವಿಶೇಷ.

ಮಂಗಳ ಗಂಗೋತ್ರಿ ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆ, ಮೆಡಿಕಲ್ ಕಾಲೇಜುಗಳನ್ನು ತನ್ನ ಮಡಿಲಲ್ಲಿ ಹೊಂದಿರುವ ಮಂಗಳೂರು ಕ್ಷೇತ್ರ, 2018ರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸಂಪೂರ್ಣ ಮುಖಭಂಗವಾಗದಂತೆ ತಡೆದಂತಹ ಕ್ಷೇತ್ರ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹದಿಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಬ್ಬರಕ್ಕೆ ತತ್ತರಿಸಿ ಹೋಗಿದ್ದ ಕಾಂಗ್ರೆಸ್ಸಿನ ಮರ್ಯಾದೆ ಉಳಿಸಿದವರು ಯು.ಟಿ.ಖಾದರ್.
ಮಂಗಳೂರು ಮತ್ತು ಬಂಟ್ವಾಳ ತಾಲೂಕಿನ ಹತ್ತು ಗ್ರಾಮ ಪಂಚಾಯತಿ ಮತ್ತು ಉಳ್ಳಾಲ ನಗರಸಭೆಯನ್ನು ಹೊಂದಿರುವ ಮಂಗಳೂರು ಕ್ಷೇತ್ರದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚು. ಕ್ಷೇತ್ರದಲ್ಲಿ ಐದು ಮಹಿಳಾ ಸ್ನೇಹಿ ಮತಗಟ್ಟೆಗಳು ಸೇರಿದಂತೆ ಒಟ್ಟು 210 ಮತಗಟ್ಟೆಗಳಿವೆ. ವಿಪಕ್ಷಗಳ ನಾಯಕರು, ಕಾರ್ಯಕರ್ತರು ಎದುರು ಸಿಕ್ಕಿದಾಗಲೂ ನಗುತ್ತಲೇ ಮಾತನಾಡುವ ಖಾದರ್ ಅವರ ವೈಯಕ್ತಿಕ ವರ್ಚಸ್ಸು ಕ್ಷೇತ್ರದಲ್ಲಿ ಚೆನ್ನಾಗಿದೆ.

ಇದುವರೆಗಿನ ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿ ಎರಡು ಬಾರಿ ಕಮ್ಯೂನಿಸ್ಟ್, ಒಂದು ಬಾರಿ ಬಿಜೆಪಿ ಬಿಟ್ಟರೆ, ಕಾಂಗ್ರೆಸ್ ಇಲ್ಲಿ ಸತತವಾಗಿ ಗೆಲುವು ಸಾಧಿಸುತ್ತಾ ಬರುತ್ತಿದೆ. ಖಾದರ್ ಅವರ ತಂದೆ ಯು.ಟಿ.ಫರೀದ್ ನಾಲ್ಕು ಬಾರಿ, ಮೂರು ಬಾರಿ ಬಿ.ಎಂ.ಇದಿನಬ್ಬ ಇಲ್ಲಿಂದ ಆಯ್ಕೆಯಾಗಿದ್ದಾರೆ. ಅಲ್ಲಿಂದ, ಖಾದರ್ ಅವರದ್ದೇ ದರ್ಬಾರ್. ಅಡ್ಯಾರ್-ಪಾವೂರಿಗೆ ದೊಡ್ದ ಸೇತುವೆ/ಅಣೆಕಟ್ಟು ನಿರ್ಮಿಸಿದ ಕೀರ್ತಿ ಖಾದರ್ ಅವರಿಗೆ ಸಲ್ಲಬೇಕು.
ರಾಜ್ಯದ ಸೂಕ್ಷ್ಮ ಅಸೆಂಬ್ಲಿ ಕ್ಷೇತ್ರಗಳಲ್ಲಿ ಒಂದಾಗಿರುವ ಮಂಗಳೂರು ಸ್ಥಳೀಯರಿಗೆ ಇನ್ನೂ ಉಳ್ಳಾಲವೇ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಿಂದ ಮತ್ತೆ ಕಾಂಗ್ರೆಸ್ ಟಿಕೆಟಿನಿಂದ ಖಾದರ್ ಸ್ಪರ್ಧಾಳುವಾಗಿದ್ದಾರೆ. ಇವರಿಗೆ ಕಾಂಗ್ರೆಸ್ಸಿನಿಂದ ಯಾರು ಪೈಪೋಟಿ ಇಲ್ಲದಿದ್ದರೂ, ಹೇಗಾದರೂ ಮಾಡಿ ಕ್ಷೇತ್ರವನ್ನು ವಶ ಪಡಿಸಿಕೊಳ್ಳಬೇಕು ಎಂದು ಬಿಜೆಪಿ ತಂತ್ರಗಾರಿಕೆಯನ್ನು ರೂಪಿಸುತ್ತಿದೆ. ಸ್ಥಳೀಯವಾಗಿ ಪ್ರಾಬಲ್ಯವಿರುವ ಎಸ್‌ಡಿಪಿಐ, ಖಾದರ್ ಪಾಲಿಗೆ ಮುಳುವಾಗುವ ಸಾಧ್ಯತೆಯಿಲ್ಲದಿಲ್ಲ.

ಜಾತಿ ರಾಜಕಾರಣಕ್ಕಿಂತ ಧರ್ಮ ರಾಜಕಾರಣ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿನ ರಾಜಕೀಯ ಹೇಗೆ ಎಂದರೆ ಜಾತಿ ರಾಜಕಾರಣಕ್ಕಿಂತ ಧರ್ಮ ರಾಜಕಾರಣಕ್ಕೆ ಪ್ರಾಮುಖ್ಯತೆ. ಈ ವಿಚಾರವನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಹಾಲೀ ಶಾಸಕ ಯು.ಟಿ.ಖಾದರ್, ಕ್ಷೇತ್ರದ ವ್ಯಾಪ್ತಿಯ ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಮಂಚೂಣಿಯಲ್ಲಿ ಬಂದು ನಿಲ್ಲುತ್ತಾರೆ. ಅದು ಕೋಲ ಇರಬಹುದು, ಬ್ರಹ್ಮಕಲಶ ಇರಬಹುದು ಅಥವಾ ಉರುಸ್ ಇರಬಹುದು.
ಕ್ಷೇತ್ರದ ಜಾತಿ ಲೆಕ್ಕಾಚಾರ
ಮಂಗಳೂರು ಕ್ಷೇತ್ರದಲ್ಲಿ ಮುಸ್ಲಿಮರ ನಂತರ ಬಿಲ್ಲವ, ಬಂಟ್ಸ್, ಪರಿಶಿಷ್ಟ ಸಮುದಾಯ, ಮೊಗವೀರ, ಕುಲಾಲ,ಬ್ರಾಹ್ಮಣ, ಕ್ರೈಸ್ತ ಮತಗಳು ನಂತರದ ಸ್ಥಾನ ಪಡೆದಿವೆ. ಕಳೆದ ಬಾರಿಯ ಚುನಾವಣೆಯಲ್ಲಿ ಖಾದರ್ ಅವರು ಬಿಜೆಪಿಯ ಸಂತೋಷ್ ಕುಮಾರ್ ರೈ ವಿರುದ್ದ 19,739 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಕಾಂಗ್ರೆಸ್, ಬಿಜೆಪಿಯಿಂದ ಯಾರು ಸ್ಪರ್ಧಿಗಳು?
ಈ ಬಾರಿಯೂ ಕಾಂಗ್ರೆಸ್ಸಿನಿಂದ ಖಾದರ್ ಸ್ಪರ್ಧಿಸುವುದು ಪಕ್ಕಾ, ಬಿಜೆಪಿಯಿಂದ ಸಂತೋಷ್ ಶೆಟ್ಟಿ ಬೋಳಿಯಾರ್, ಸತೀಶ್ ಕುಂಪಲ, ಚಂದ್ರಹಾಸ್ ಪಂಡಿತ್, ವಿಶ್ವ ಹಿಂದೂ ಪರಿಷದ್ ಮುಖಂಡ ಶರಣ್ ಪಂಪ್ ವೆಲ್ ಹೆಸರೂ ಈ ಬಾರಿಯ ಚುನಾವಣಾ ರೇಸ್ ನಲ್ಲಿದೆ. ಇದರ ಜೊತೆಗೆ, ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಫಿ ಬೆಳ್ಳಾರೆ ತಮ್ಮ ಅಭ್ಯರ್ಥಿ ಎಂದು ಎಸ್ಪಿಡಿಐ ಪ್ರಕಟಿಸಿದೆ. ಇದರಿಂದ, ಮುಸ್ಲಿಂ ಮತ ವಿಭಜನೆಯಾಗುವ ಸಾಧ್ಯತೆಯಿಲ್ಲದಿಲ್ಲ.
ಕ್ಷೇತ್ರದ ಮತದಾರರ ಸಂಖ್ಯೆ (2018ರ ಚುನಾವಣಾ ಆಯೋಗದ ಅಂಕಿಅಂಶ ಪ್ರಕಾರ)
ಪುರುಷರು: 96,197
ಮಹಿಳೆಯರು: 99,549
ಒಟ್ಟು ಮತದಾರರು: 1,95,746











Click it and Unblock the Notifications