ಕರಾವಳಿ ಭಾಗದ ರೈಲು ಸಂಪರ್ಕ: ಪ್ರಮುಖ ಬೇಡಿಕೆಗೆ ಸ್ಪಂದಿಸಿದ ರೈಲ್ವೆ ಸಚಿವರು
ಮಂಗಳೂರು, ನವೆಂಬರ್ 27: ಕರ್ನಾಟಕದ ಕರಾವಳಿ ಭಾಗದ ರೈಲು ಸಂಚಾರದ ಕುರಿತು ಹಲವು ಬೇಡಿಕೆಗಳಿವೆ. ಹಬ್ಬ ಮತ್ತು ಸಾಲು ಸಾಲು ರಜೆ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರು ನಗರದಿಂದ ಕರಾವಳಿ ಭಾಗಕ್ಕೆ ಸಂಚಾರ ನಡೆಸುವ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಕರಾವಳಿ ಭಾಗದ ಸಂಸದರು ಸಮಸ್ಯೆಗಳ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದಾರೆ. ಸಚಿವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ವಿವಿಧ ಬೇಡಿಕೆಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಸಂಸದ ಕಾಪ್ಟನ್ ಬ್ರಿಜೇಶ್ ಚೌಟ ದೆಹಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿ ಮಾಡಿದರು. ಹಲವು ಬೇಡಿಕೆಗಳ ಕುರಿತು ಚರ್ಚೆಯನ್ನು ನಡೆಸಿದರು. ಕರಾವಳಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ರೈಲು ಸೇವೆಗಳ ಕುರಿತು ವಿವರವಾಗಿ ಸಚಿವರ ಜೊತೆ ಚರ್ಚಿಸಿದರು.

ಕೊಂಕಣ ರೈಲ್ವೆ ವಿಲೀನ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಚಿವರ ಭೇಟಿ ಕುರಿತು ಮಾಹಿತಿ ನೀಡಿದ್ದಾರೆ. ಈಗಾಗಲೇ ರೈಲ್ವೆ ಸಚಿವರಿಗೆ ತಿಳಿದಿರುವ ಕೊಂಕಣ ರೈಲ್ವೆ ವಿಲೀನದ ಕುರಿತು ಮುಂದಿನ ಹಂತದ ಬಗ್ಗೆ ಮಾತುಕತೆ ನಡೆಸಲಾಯಿತು. ಪಾಲುದಾರಿಕಾ ರಾಜ್ಯ ಸರ್ಕಾರಗಳಾದ ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರದ ಶೇರು ಮರು ಖರೀದಿಗೆ ಕಾರ್ಯಪ್ರವ್ರತ್ತರಾಗಲು ಮನವಿ ಮಾಡಲಾಗಿದ್ದು, ಸಚಿವರು ಈ ಕುರಿತು ಮಹತ್ವದ ಸೂಚನೆಯನ್ನು ಅಧಿಕಾರಿಗಳಿಗೆ ರವಾನಿಸಿದರು ಎಂದು ಹೇಳಿದರು.
ಸಂಸದರು ಕರಾವಳಿಯ ಕಾರವಾರ-ಕುಂದಾಪುರ-ಉಡುಪಿ-ಮಂಗಳೂರು ನಡುವೆ ಜನರ ಬೇಡಿಕೆಯಂತೆ ರೈಲು ಓಡಿಸಲು ತೀವ್ರ ಅಡ್ಡಿ ಉಂಟು ಮಾಡಿರುವ ಸಕಲೇಶಪುರ ಘಾಟ್ ಸಮಸ್ಯೆಗೆ ಈಗಾಗಲೇ ಪರಿಣಿತರಿಂದ ಸೂಚಿಸಲ್ಪಟ್ಟ ಪರಿಹಾರವನ್ನು ಸಚಿವರ ಸಮ್ಮುಖದಲ್ಲಿ ಚರ್ಚಿಸಲಾಗಿದೆ.
ಅದರಂತೆ ಸಕಲೇಶಪುರ-ಸುಬ್ರಮಣ್ಯ ನಡುವೆ ಹಳಿ ದ್ವಿಗುಣ, ಘಾಟ್ ಭಾಗದ ಹರೇಬೆಟ್ಟ ನಿಲ್ದಾಣವನ್ನು ಕ್ರಾಸಿಂಗ್ ನಿಲ್ದಾಣವಾಗಿ ಬಳಸುವ ಕುರಿತು ಸವಿಸ್ತಾರವಾಗಿ ಚರ್ಚಿಸಿದ್ದಾರೆ. ಘಾಟ್ ಮದ್ಯ ಭಾಗದ ಹರೇಬೆಟ್ಟ ಕ್ರಾಸಿಂಗ್ ನಿಲ್ದಾಣವಾಗಿ ಆರಂಭವಾದರೆ ಬೆಂಗಳೂರು-ಮಂಗಳೂರು ಕುಂದಾಪುರ-ಕಾರವಾರ ನಡುವೆ ಹೊಸ ರೈಲು ಹಾಗು ಹೆಚ್ಚು ಬೋಗಿ ಅಳವಡಿಸಿ ಉತ್ತಮ ಸಮಯ ವೇಳಾಪಟ್ಟಿ ರಚಿಸಲು ಸಾಧ್ಯವಾಗುತ್ತದೆ ಎಂದು ವಿವರಿಸಲಾಗಿದೆ.
ಕಾರವಾರ-ಕುಂದಾಪುರ-ಬೆಂಗಳೂರು ನಡುವೆ ಪಂಚಗಂಗಾ ಮಾದರಿಯಲ್ಲಿಯೇ ಆದರೆ ತಡವಾಗಿ ಬೆಂಗಳೂರಿನಿಂದ ಹೊರಡುವ ಹೊಸ ರೈಲು ಪಡೀಲ್ ಬೈಪಾಸ್ ಮೂಲಕ ನೇರವಾಗಿ ಸಂಚಾರ ನಡೆಸುವಂತೆ ಸಚಿವರಿಗೆ ಮನವಿ ಸಲ್ಲಿಕೆ ಮಾಡಲಾಗಿದೆ.
ಬೆಂಗಳೂರು-ಮುರುಡೇಶ್ವರ ರೈಲಿನ ವಾಸ್ಕೋ ವಿಸ್ತರಣೆ ಮತ್ತು ಅದರಿಂದ ಕರಾವಳಿಗೆ ಸಿಗುವ ಗೋವಾ ವಿಮಾನ ನಿಲ್ದಾಣ ಹಾಗೂ ವೇಲಾಂಕಣಿ, ತಿರುಪತಿ, ಉತ್ತರ ಕರ್ನಾಟಕ ಸಂಪರ್ಕದ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ.
ರೈಲು ಸಂಖ್ಯೆ 16585 ಸರ್ ಎಂ. ವಿಶ್ವೇಶ್ವರಯ್ಯ-ಮುರುಡೇಶ್ವರ ಎಕ್ಸ್‌ಪ್ರೆಸ್ ಅನ್ನು ವಾಸ್ಕೋವರೆಗೆ ವಿಸ್ತರಿಸಲು ಹಾಗೂ ರೈಲು ಸಂಖ್ಯೆ 17317/18 ಎಕ್ಸ್‌ಪ್ರೆಸ್ ಅನ್ನು ಕಾರವಾರದವರೆಗೆ ವಿಸ್ತರಿಸಲು ಮತ್ತು ರೈಲು ಸಂಖ್ಯೆ 17317/ 18 ಖಾನಾಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆಯೂ ಮನವಿ ಮಡಲಾಗಿದೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಚಿವರ ಜೊತೆ ಹುಬ್ಬಳ್ಳಿ-ಅಂಕೋಲಾ ಹಾಗೂ ತಾಳಗುಪ್ಪ-ಹುಬ್ಬಳ್ಳಿ ರೈಲ್ವೆ ಮಾರ್ಗಗಳ ಕುರಿತು ಚರ್ಚಿಸಿದ್ದಾರೆ. ಸಚಿವರು ಉತ್ತಮ ಸ್ಪಂದನೆ ನೀಡಿದ್ದು, ಬೇಡಿಕೆ ಈಡೇರಿಸುವ ಆಶ್ವಾಸನೆ ನೀಡಿದ್ದಾರೆ.












Click it and Unblock the Notifications