ರಾಜಭವನ ತಲುಪಿದ ಕಬೀರ್ ಶೂಟೌಟ್ ಪ್ರಕರಣ
ಮಂಗಳೂರು, ಏ. 30 : ಶೃಂಗೇರಿಯಲ್ಲಿ ಎಎನ್ಎಫ್ ಗುಂಡಿಗೆ ಬಲಿಯಾದ ಕಬೀರ್ ಪ್ರಕರಣ ಸದ್ಯ ರಾಜಭವನದ ಅಂಗಳ ತಲುಪಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಕಬೀರ್ ಪ್ರಕರಣದ ಮೂಲಕ ವಿವಿಧ ಸಮುದಾಯಗಳನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿ ಮಂಗಳೂರು ಬಿಜೆಪಿ ಘಟಕ ರಾಜ್ಯಪಾಲರಿಗೆ ದೂರು ನೀಡಿದೆ.
ಮಂಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಪ್ರತಾಪ್ ಸಿಂಹ ನಾಯಕ್ ರಾಜ್ಯಪಾಲರಿಗೆ ಕಬೀರ್ ಪ್ರಕರಣದಲ್ಲಿ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಸಚಿವರ ಒತ್ತಡಕ್ಕೆ ಮಣಿದು ಸರ್ಕಾರ ಕಬೀರ್ ಮೇಲೆ ಗುಂಡು ಹಾರಿಸಿದ ಎಎನ್ಎಫ್ ಸಿಬ್ಬಂದಿ ನವೀನ್ ನಾಯಕ್ ಮೇಲೆ ಎಫ್ಐಆರ್ ದಾಖಲಿಸಿದೆ ಎಂದು ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. [ಕಬೀರ್ ಶೂಟೌಟ್ ತನಿಖಾ ವರದಿ ಬಹಿರಂಗ]

ಸರ್ಕಾರ ಮೃತ ಕಬೀರ್ ಕುಟುಂಬಕ್ಕೆ ನೀಡಿರುವ ಪರಿಹಾರದ ಕುರಿತು ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ಗುಲ್ಬರ್ಗದಲ್ಲಿ ರೌಡಿಗಳ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರಿಗೆ ಸರ್ಕಾರ 5 ಲಕ್ಷ ಪರಿಹಾರ ನೀಡಿದೆ. [ಎಎನ್ಎಫ್ ಮೇಲಿನ ಎಫ್ಐಆರ್ ಹಿಂಪಡೆಯಿರಿ]
ಆದರೆ, ದನಗಳ ಸಾಗಣೆ ಮಾಡುತ್ತಾ ಸಿಕ್ಕಿಬಿದ್ದು ಮೃತಪಟ್ಟ ಕಬೀರ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಿದೆ. ಇದಕ್ಕೆ ಕಾರಣವೇನು? ಎಂದು ಎಂದು ರಾಜ್ಯಾಪಾಲರಿಗೆ ಬಿಜೆಪಿ ನೀಡಿರುವ ದೂರಿನಲ್ಲಿ ಪ್ರಶ್ನಿಸಿದೆ. ಕಬೀರ್ ಪರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಸಂಪುಟದ ಸದಸ್ಯರು ಹೇಳಿಕೆ ನೀಡುತ್ತಿರುವುದು ನೋಡಿದರೆ, ದನಗಳ ಸಾಗಣೆಯಲ್ಲಿ ಸಚಿವರ ಪಾತ್ರವಿರಬಹುದೆಂಬ ಅನುಮಾನ ಮೂಡುತ್ತಿದೆ ಎಂದು ಬಿಜೆಪಿ ಹೇಳಿದೆ.
ಸಚಿವ ರಮಾನಾಥ ರೈ ಅವರು ಕಬೀರ್ ಶೂಟೌಟ್ ಪ್ರಕರಣದಲ್ಲಿ ಸಂಘ ಪರಿವಾರದ ಹೆಸರನ್ನು ತರಲು ಯತ್ನಿಸುತ್ತಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯಿದ್ದೀನ್ ಭಾವಾ ಮುಂತಾದವರ ಒತ್ತಡದಿಂದಾಗಿ ಸರ್ಕಾರ, ಎಎನ್ಎಫ್ ಸಿಬ್ಬಂದಿ ನವೀನ್ ನಾಯಕ್ ಮೇಲೆ ಎಫ್ಐಆರ್ ದಾಖಲಿಸಿದೆ. ಇದರಿಂದ ಅವರ ನೈತಿಕ ಸ್ಥೈರ್ಯ ಕುಸಿಯುತ್ತದೆ ಎಂದು ಬಿಜೆಪಿ ದೂರಿನಲ್ಲಿ ರಾಜ್ಯಪಾಲರಿಗೆ ವಿವರಿಸಿದೆ. [Isaac Richard , Mangalore]












Click it and Unblock the Notifications