ಮೋದಿ, ರಾಹುಲ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕನ್ನಡಿಗ ಸ್ಪರ್ಧೆ
ಮಂಗಳೂರು ಏಪ್ರಿಲ್ 26:ವಾರಣಾಸಿಯಲ್ಲಿ ಗುರುವಾರ (ಏ.25) ಅಬ್ಬರದ ರೋಡ್ ಶೋ ಬಳಿಕ ಪ್ರಧಾನಿ ಮೋದಿ ವಾರಣಾಸಿಯಿಂದ ಸ್ಪರ್ಧಿಸಲು ಇಂದು ಶುಕ್ರವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಇಲ್ಲಿ ಗಮನಹರಿಸಬೇಕಾದ ಇನ್ನೊಂದು ವಿಷಯವಿದೆ. ಮೋದಿ ಅವರ ವಿರುದ್ಧ ಕನ್ನಡಿಗ ಪತ್ರಕರ್ತರೊಬ್ಬರು ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗಮನ ಸೆಳೆದಿದ್ದಾರೆ.
ಈ ಚುನಾವಣೆಯಲ್ಲಿ ಮೋದಿ ಅವರ ವಿರುದ್ಧ ಮಾತ್ರವಲ್ಲದೇ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸುವ ಅಮೇಥಿ ಕ್ಷೇತ್ರದಲ್ಲಿಯೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅವರೇ ಪುತ್ತೂರಿನ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಡಾ.ಯು.ಪಿ. ಶಿವಾನಂದ.

ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆ "ಡೆಲ್ಲಿಯಿಂದ ಹಳ್ಳಿಗೆ ಆಡಳಿತ ಅಲ್ಲ, ಹಳ್ಳಿಯಿಂದ ಡೆಲ್ಲಿಗೆ ಆಡಳಿತ ಆಗಬೇಕು" ಎಂಬ ವಿಚಾರವನ್ನು ರಾಷ್ಟ್ರದ ಪ್ರಮುಖ ನಾಯಕರಿಗೆ ಹಾಗೂ ಮೋದಿ ಮತ್ತು ಎಐಸಿಸಿ ರಾಹುಲ್ ಗಾಂಧಿಯವರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಯು.ಪಿ. ಶಿವಾನಂದ ಚುನಾವಣೆಗೆ ಸ್ಪರ್ಧಿಸಿದ್ದಾರಂತೆ.
ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಶಿವಾನಂದರವರು ಏಪ್ರಿಲ್ 18ರಂದು ನಾಮಪತ್ರ ಸಲ್ಲಿಸಿದ್ದಾರೆ. ಏಪ್ರಿಲ್ 20ರಂದು ನಾಮಪತ್ರ ಪರಿಶೀಲನೆ ನಡೆದಿದ್ದು, ಅಂಗೀಕಾರಗೊಂಡಿದೆ. ಅಮೇಥಿ ಲೋಕಸಭಾ ಕ್ಷೇತ್ರದ 10 ಮಂದಿ ಮತದಾರರು ಇವರಿಗೆ ಸೂಚಕರಾಗಿದ್ದರು. ಅಮೇಥಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರದ ಸಚಿವೆ ಸ್ಮೃತಿ ಇರಾನಿ ಸ್ಪರ್ಧಿಸುತ್ತಿದ್ದಾರೆ.
ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿಯೂ ಈಗಾಗಲೇ ನಾಮಪತ್ರ ಸಲ್ಲಿಸಿರುವ ಶಿವಾನಂದರವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು . ಸುಳ್ಯದಲ್ಲಿ ಬಳಕೆದಾರರ ವೇದಿಕೆಯನ್ನು ಸ್ಥಾಪಿಸಿ ಆ ಮೂಲಕ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬಂದವರು.
ಶಿವಾನಂದ ಅವರು ವೈದ್ಯರಾಗಿ ಸಾಮಾಜಿಕ ಪಿಡುಗುಗಳಿಗೆ ಔಷಧಿ ಕೊಡುವ ಕೆಲಸ ಮಾಡಿದ್ದಾರೆ. ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿ ಸುದ್ದಿ ಬಿಡುಗಡೆ' ಎಂಬ ಸ್ಥಳೀಯ ಪತ್ರಿಕೆ ನಡೆಸುತ್ತಿದ್ದು, 1985ರಲ್ಲಿ ವೀರಪ್ಪ ಮೊಯ್ಲಿ, ಎಸ್. ಬಂಗಾರಪ್ಪ ಮತ್ತು ರಾಮಕೃಷ್ಣ ಹೆಗಡೆ ಅವರ ಕ್ಷೇತ್ರದಲ್ಲಿ ಮತ್ತು ಪುತ್ತೂರಿನಲ್ಲಿ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.











Click it and Unblock the Notifications