ನಿಗೂಢವಾಗಿ ನಾಪತ್ತೆಯಾಗಿದ್ದ ಜ್ಯುವೆಲರ್ಸ್ ಮಾಲೀಕನ ಶವ ಸಮುದ್ರ ಕಿನಾರೆಯಲ್ಲಿ ಪತ್ತೆ
ಮಂಗಳೂರು,ಆಗಸ್ಟ್ 28: ನಿಗೂಢವಾಗಿ ನಾಪತ್ತೆಯಾಗಿದ್ದ ಜ್ಯುವೆಲರ್ಸ್ ಮಳಿಗೆ ಮಾಲೀಕನ ಶವ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ. ಮಂಗಳೂರು ಹೊರವಲಯದ ಬೊಳಿಯಾರ್ ನ ಪ್ರಭಾ ಜ್ಯುವೆಲರ್ಸ್ ಮಾಲೀಕ ಪ್ರಭಾಕರ ಆಚಾರ್ಯ ಅವರು ಕಳೆದ ಮೂರು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹ ಸುರತ್ಕಲ್ ಸಮೀಪದ ಮುಕ್ಕ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ಕಳೆದ ರವಿವಾರ ಮಧ್ಯಾಹ್ನ ಔಷಧ ತರಲೆಂದು ಮನೆಯಿಂದ ಹೊರಟಿದ್ದ ಪ್ರಭಾಕರ ಆಚಾರ್ಯ ಅವರು ಬಳಿಕ ನಾಪತ್ತೆಯಾಗಿದ್ದರು. ಅವರ ಕಾರು ಮುಡಿಪು ಎಂಬಲ್ಲಿ ಪತ್ತೆಯಾಗಿತ್ತು. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಪ್ರಭಾಕರ ಆಚಾರ್ಯ ಅವರು ನಾಪತ್ತೆಯಾಗಿರುವುದಕ್ಕೆ ಸಂಬಂಧಿಸಿದಂತೆ ಅವರ ಮಗ ಕೊಣಾಜೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

57 ವರ್ಷದ ಪ್ರಭಾಕರ ಆಚಾರ್ಯ ಅವರು ಬೋಳಿಯಾರ್ ನಲ್ಲಿ ಪ್ರಭಾ ಜುವೆಲರ್ಸ್ ಹಾಗೂ ಪ್ರಭಾ ಫೈನಾನ್ಸ್ ಗಳನ್ನು ನಡೆಸುತ್ತಿದ್ದರು.
ಪ್ರಭಾಕರ ಆಚಾರ್ಯ ಅವರ ಕಾರು ಮುಡಿಪು ಬಳಿ ಪತ್ತೆಯಾಗಿತ್ತು. ಅದರೆ ಅವರ ಶವ ಸುರತ್ಕಲ್ ನಲ್ಲಿ ಇಂದು ಪತ್ತೆಯಾಗಿದೆ. ಪ್ರಭಾಕರ್ ಆಚಾರ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಈ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಈ ನಿಟ್ಟಿನಲ್ಲೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.












Click it and Unblock the Notifications