ಯಡಿಯೂರಪ್ಪ ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದ ಜನಾರ್ಧನ ಪೂಜಾರಿ
ಮಂಗಳೂರು, ಫೆಬ್ರವರಿ 14:ಬಿಜೆಪಿಯ ಆಪರೇಷನ್ ಕಮಲ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ಧನ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಒಪ್ಪಲಿ, ಬಿಡಲಿ ತನಿಖೆ ಆಗಲೇಬೇಕು. ಕಾಂಗ್ರೆಸ್ ತಪ್ಪು ಮಾಡಿದರೂ ಸತ್ಯಾಂಶ ಹೊರಬರಲೇಬೇಕು. ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯಲಿ. ದೂರು ನೀಡಿಯೇ ತನಿಖೆ ಆಗಬೇಕೆಂದೇನಿಲ್ಲ.
ಎಲ್ಲರಲ್ಲೂ ಒಂದು ಸಂಶಯವಿದೆ, ಅದು ನಿವಾರಣೆಯಾಗಬೇಕಿದೆ. ಬಿಜೆಪಿಯವರು ಯಾವ ತನಿಖೆಗೆ ಒತ್ತಾಯಿಸುತ್ತಾರೆ ಅದು ಆಗಲಿ. ಜನತೆಗೆ ಸತ್ಯಾಂಶ ತಿಳಿಸೋದು ಶಾಸಕರ ಕರ್ತವ್ಯ ಎಂದ ಪೂಜಾರಿ ಅವರು, ಸ್ಪೀಕರ್ ಸದನದ ನಿರ್ಣಯದ ಮೇಲೆ ತೀರ್ಮಾನ ಕೈಗೊಳ್ಳಲಿ. ಸದನದ ನಿರ್ಣಯಕ್ಕೆ ಸ್ಪೀಕರ್ ಅವಕಾಶ ಕೊಡಲಿ ಎಂದರು.

ಪ್ರಾಣ ಹೋದರೂ ಯಡಿಯೂರಪ್ಪನವರು ಆಪರೇಷನ್ ಮಾಡುವುದು ಬಿಡಲ್ಲ. ಅದು ಅವರ ಹವ್ಯಾಸವಾಗಿದೆ. ಇನ್ನಾದರೂ ಆಪರೇಷನ್ ಕಮಲ ಬಿಡಿ ಎಂದು ತಿಳಿಸಿದರು.
ಯಡಿಯೂರಪ್ಪನವರು ಅವರ ಪಕ್ಷವನ್ನೇ ನಾಶ ಮಾಡುತ್ತಿದ್ದಾರೆ. ಇದು ರಾಷ್ಟ್ರೀಯ ಮಟ್ಟದಲ್ಲೂ ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತಂದಿದೆ. ತಕ್ಷಣವೇ ಯಡಿಯೂರಪ್ಪ ಕ್ಷಮೆಯಾಚಿಸಲಿ
ಎಂದು ಜನಾರ್ಧನ ಪೂಜಾರಿ ಆಗ್ರಹಿಸಿದರು.
ಅತೃಪ್ತ ಶಾಸಕರಿಗೆ ಸಿದ್ದರಾಮಯ್ಯ ಬೆಂಬಲ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜನಾರ್ಧನ ಪೂಜಾರಿ, ಸಿದ್ದರಾಮಯ್ಯ ಕಾಂಗ್ರೆಸ್ ಗೆ ಇನ್ನೊಂದು ಶನಿ. ಅವರಿಗೆ ಯಾವಾಗ ಬುದ್ಧಿ ಬರುತ್ತೋ ಪರಮಾತ್ಮನಿಗೇ ಗೊತ್ತು ಎಂದು ಕಿಡಿಕಾರಿದರು.
ಶಾಸಕ ಪ್ರೀತಂ ಗೌಡ ಹೇಳಿಕೆ ವಿಚಾರವಾಗಿ ಮಾತನಾಡಿದ ಜನಾರ್ಧನ ಪೂಜಾರಿ, ಯಾರೇ ಆಗಲಿ ಈ ಮಾತು ಆಡಬಾರದು. ಅದನ್ನು ದೇವರೂ ಮೆಚ್ಚಲಾರನು ಎಂದು ಬೇಸರ ವ್ಯಕ್ತಪಡಿಸಿದರು.
ಮಹಾಘಟ್ ಬಂಧನ್ ನಿಂದ ಕಾಂಗ್ರಸ್ ನ್ನು ದೂರ ಇಟ್ಟಿದ್ದೇ ಒಳ್ಳೆಯದೇ ಆಯಿತು. ಅವರು ಮಾಡಿದ ಪಾಪ ನಮಗೇಕೆ? ಜನ ಒಪ್ಪದಿದ್ದರೆ ರಾಹುಲ್ ಗಾಂಧಿಗೂ ಬುದ್ಧಿ ಕಲಿಸುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ಜನಾರ್ಧನ ಪೂಜಾರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.












Click it and Unblock the Notifications