ತಂತ್ರಜ್ಞಾನದಲ್ಲಿ ಸಂಸ್ಕೃತ ಭಾಷೆ ಬಳಕೆಯಾಗಲಿದೆ:ಅನಂತ್ ಕುಮಾರ್ ಹೆಗಡೆ
ಮಂಗಳೂರು, ಡಿಸೆಂಬರ್ 11: ಸಂಸ್ಕೃತ ಅತ್ಯಂತ ಶ್ರೀಮಂತ ಭಾಷೆ. ಇದರ ಪ್ರತಿಯೊಂದು ಶಬ್ದವೂ ಕೋಡ್ ವರ್ಡ್ ಗೆ ಸಮಾನವಾಗಿದ್ದು, ತಂತ್ರಜ್ಞಾನದಲ್ಲಿ ಸಂಸ್ಕೃತ ಭಾಷೆ ಬಳಕೆಯಾಗಲಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಇಲಾಖೆಯ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದರು.
ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜಿನ ಆಫ್ ಎಂಜಿನಿಯರಿಂಗ್ ನ ಸಭಾಂಗಣದಲ್ಲಿಆಯೋಜಿಸಲಾಗಿದ್ದ ' ಸ್ಕಿಲ್ ಇನ್ ಹೈಯರ್ ಎಜುಕೇಶನ್' ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಆಧಾರಿತವಾಗಿರುವ ಐಟಿ ವಲಯದಲ್ಲಿ ಸಂಸ್ಕೃತ ಭಾಷೆ ಮುಂಚೂಣಿಯಲ್ಲಿರಲಿದ್ದು, ಮುಂದಿನ ದಿನಗಳಲ್ಲಿ ಆಯುರ್ವೇದವು ಮುಂಚೂಣಿಯಲ್ಲಿ ಇರಲಿದೆ ಎಂದರು.
ತಂತ್ರಜ್ಞಾನದಲ್ಲಿ ಸಂಸ್ಕೃತ ಭಾಷೆ ಬಳಕೆಯ ಕುರಿತು ಸ್ವತಃ ಐಟಿ ತಜ್ಞರೇ ಸಾಧ್ಯತೆಯನ್ನು ಗುರುತಿಸಿದ್ದಾರೆ. ವಿದ್ಯಾರ್ಥಿಗಳ ಮನದಲ್ಲಿ ಹೊಸ ಚಿಂತನೆ ಆವಿಷ್ಕಾರದ ಯೋಜನೆ ಹುಟ್ಟುಹಾಕಲು ಉಪನ್ಯಾಸಕ ವರ್ಗ ಪ್ರೇರೇಪಿಸುವ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.

ಭಾರತ ಜಗತ್ತಿಗೆ ಗಣಿತ ನೀಡದಿದ್ದರೆ ಯಾವುದೇ ಆವಿಷ್ಕಾರವೂ ನಡೆಯುತ್ತಿರಲಿಲ್ಲ. ನಾನು ಜನರ ಜತೆ ಹೋದರೆ ಇತಿಹಾಸ ಸೃಷ್ಟಿ ಆಗಲ್ಲ. ಜನರ ಮುಂದೆ ಬಂದು ನಿಂತಾಗ ಇತಿಹಾಸ ಸೃಷ್ಟಿ ಆಗುತ್ತದೆ. ನಾವಿಂದು ಬೇರೆ ದೇಶದಲ್ಲಿ ಮಾಡಿದ ಫಾರ್ಮುಲಾಗಳನ್ನು ಬಿಡಿಸುತ್ತಾ ಕಾಲ ಕಳೆಯುತ್ತಿದ್ದೇವೆ ಹೊರತು ನಮ್ಮದೇ ಆದ ಸ್ವಂತಿಕೆಯನ್ನು ಉಪಯೋಗಿಸುತ್ತಿಲ್ಲ.
ದೇಶದ ವಿಜ್ಞಾನ-ತಂತ್ರಜ್ಞಾನ ಕಾಲೇಜುಗಳು, ಯುವಶಕ್ತಿ ಹೊಸಹೊಸ ಆವಿಷ್ಕಾರ ಮಾಡಲು ಮುಂದಾದಲ್ಲಿ ಭಾರತ ಸರ್ಕಾರ ಸಹಾಯ ಹಸ್ತ ಚಾಚಲು ಸದಾ ಸಿದ್ಧ. ಭಾರತದ ಪ್ರತಿಭೆಗಳು ಅನ್ಯ ದೇಶಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ತಮ್ಮ ಪ್ರತಿಭೆಗಳನ್ನು ಬೆಳೆಸಿ ನಮ್ಮಲ್ಲೇ ಉಳಿಸಿಕೊಳ್ಳಲು ಕೌಶಲ್ಯಾಭಿವೃದ್ಧಿಯ ಅಗತ್ಯ ಇದೆ ಎಂದು ಅನಂತ್ ಕುಮಾರ್ ಹೆಗಡೆ ತಿಳಿಸಿದರು.











Click it and Unblock the Notifications