Ullal JDS Candidate: ಬೆದರಿಕೆ ಹಿನ್ನೆಲೆ ನಾಮಪತ್ರ ವಾಪಸ್ ಪಡೆದಿದ್ದೇನೆ: ಉಲ್ಲಾಳದ ಜೆಡಿಎಸ್ ಅಭ್ಯರ್ಥಿ ಸ್ಪಷ್ಟನೆ
ಮಂಗಳೂರು, ಏಪ್ರಿಲ್, 24: ಉಳ್ಳಾಲದ ಜೆಡಿಎಸ್ ಅಭ್ಯರ್ಥಿ ನಾಮಪತ್ರ ವಾಪಾಸ್ ಪಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಜೆ.ಡಿ.ಎಸ್ ನಾಯಕರು ಸುದ್ದಿಗೋಷ್ಟಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅಲ್ತಾಫ್ ಕುಂಪಲ, ನಾನು ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೆ. ಆದರೆ ಹಿಂದಿನ ಶುಕ್ರವಾರ ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ವಾಪಸ್ ಬರುತ್ತಿರುವ ವೇಳೆ ನನಗೆ ನಾಮಪತ್ರ ವಾಪಸ್ ಪಡೆಯುವಂತೆ ಗೊಂಪೊಂದು ಧಮ್ಕಿ ಹಾಕಿತ್ತು ಎಂದಿದ್ದಾರೆ.
ಕಾಂಗ್ರೆಸ್‌ನ ಉಸ್ಮಾನ್ ಕಲ್ಲಾಪು ಸೇರಿ ಹಲವರು ನನ್ನನ್ನ ಕರೆದುಕೊಂಡು ಹೋಗಿ ಬೆದರಿಕೆ ಹಾಗೂ ಧಮ್ಕಿ ಹಾಕಿ ನಾಮಪತ್ರ ವಾಪಸ್ ಪಡೆಯುವಂತೆ ಸಹಿ ಹಾಕಿಸಿದ್ದಾರೆ. ಆಗ ನಾನು ಯಾವುದೇ ಆಮಿಷಗಳಿಗೆ ಒಳಗಾಗಿಲ್ಲ, ಒತ್ತಡದಿಂದ ನಾಮಪತ್ರ ವಾಪಾಸ್ ಪಡೆದಿದ್ದೇನೆ ಎಂದು ಉಳ್ಳಾಲದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ಸ್ಪಷ್ಟನೆ ನೀಡಿದ್ದಾರೆ.

ನಂತರ ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ.ಸದಾಶಿವ ಮಾತನಾಡಿ, ನಾವು ಎಂಟು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ್ದೇವೆ. ಹಾಗೆಯೇ ಎಲ್ಲವೂ ಸಿಂಧುವಾಗಿ ಸ್ವೀಕಾರವಾಗಿದೆ ಎಂದರು. ಮಂಗಳೂರು ಉತ್ತರದಲ್ಲಿ ಪ್ರಭಾವಿ ನಾಯಕ ಮೊಯಿದ್ದೀನ್ ಬಾವಾ ಸ್ಪರ್ಧೆ ಮಾಡಿದ್ದಾರೆ. ಅಲ್ಲದೆ ಮತ್ತೊಂದೆಡೆ ಜನಸಾಮಾನ್ಯರಿಗೆ ಬೇಕೆನಿಸಿದ ಸಾಮಾಜಿಕ ಕಳಕಳಿಯ ವ್ಯಕ್ತಿ ಆಗಿದ್ದರಿಂದ ಕ್ಷೇತ್ರದಲ್ಲಿ ಅಲ್ತಾಫ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೆವು.
ಅಲ್ತಾಫ್ ಅವರಿಗೆ ಜನರ ಪ್ರೀತಿ, ವಿಶ್ವಾಸ ಇದೆ. ಅವರು ಏಪ್ರಿಲ್ 20ರಂದು ಉಳ್ಳಾಲದಲ್ಲಿ ನಾಮಪತ್ರ ಸಲ್ಲಿಸಿದ್ದರು. ಮುಂದೆ ಅವರ ಹಬ್ಬದ ದಿನ ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ಹೊರ ಬರುತ್ತಾ ಇದ್ದರು. ಆ ವೇಳೆ ಯಾರೋ ಅವರನ್ನು ಕರೆದುಕೊಂಡು ಹೋಗಿ ಪತ್ರಕ್ಕೆ ಸಹಿ ಹಾಕಿಸಿ ಚುನಾವಣಾಧಿಕಾರಿ ಎದುರು ನಿಲ್ಲಿಸಿ ನಾಮಪತ್ರ ವಾಪಸ್ ತೆಗೆಸಿದ್ದಾರೆ ಎಂದರು.
ಸಜ್ಜನ ವ್ಯಕ್ತಿ ಕುಟುಂಬದಿಂದ ಬಂದ ವ್ಯಕ್ತಿ ಆದ್ದುದರಿಂದ ಅವರು ಬೆದರಿಕೆಗೆ ಒಳಗಾಗಿ ನಾಮಪತ್ರ ವಾಪಸ್ ಪಡೆದಿದ್ದಾರೆ.
ಇಂತಹ ಘಟನೆ ಇಡೀ ಜಿಲ್ಲೆಗೆ ಒಂದು ಕಪ್ಪು ಚುಕ್ಕೆಯಾಗಿದೆ. ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಎದುರಿಸಲಾಗದವರು ಎಂತಹ ನಾಯಕ? ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಅಲ್ಲದೆ ಈಗಾಗಲೇ ಪೊಲೀಸ್ ಕಮಿಷನರ್ ಹಾಗೂ ಚುನಾವಣಾಧಿಕಾರಿಗೆ ದೂರು ನೀಡಿದ್ದು, ಕಾನೂನು ಮೂಲಕ ಹೋರಾಟ ಮಾಡುತ್ತೇವೆ ಎಂದರು.
ಇದು ಒಬ್ಬ ಪ್ರಭಾವಿ ಮತ್ತು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯ ಷಡ್ಯಂತ್ರ ಆಗಿದೆ. ಈ ಸಂಬಂಧ ಸೂಕ್ತ ತನಿಖೆ ಆಗಲಿ ಎಂದು ಒತ್ತಾಯಿಸಿದರು.












Click it and Unblock the Notifications