ಮಂಗಳೂರು ಜೈಲಿನಲ್ಲಿ ಕೊಲೆ ಮಾಡಿಸಿದ್ದು ವಿಕ್ಕಿ ಶೆಟ್ಟಿ
ಮಂಗಳೂರು, ನವೆಂಬರ್ 04 : 'ಮಂಗಳೂರು ಜೈಲಿನಲ್ಲಿ ನಡೆದ ಹತ್ಯೆಗೆ ನಾನೇ ಕಾರಣ. ನಮ್ಮ ತಂಟೆಗೆ ಬಂದರೆ ಯಾರನ್ನೂ ಬಿಡುವುದಿಲ್ಲ. ಯೂಸುಫ್ ಕೊಲೆಗೆ ನಾನು ಹೊಣೆ. ನನ್ನ ಸಹಚರರು ಆತನನ್ನು ಮುಗಿಸಿದ್ದಾರೆ' ಎಂದು ಭೂಗತ ವಿಕ್ಕಿ ಶೆಟ್ಟಿ ಹೇಳಿಕೊಂಡಿದ್ದಾನೆ.
ಮಂಗಳವಾರ ಟಿವಿ ವಾಹಿನಿಗಳಿಗೆ ಕರೆ ಮಾಡಿರುವ ವಿಕ್ಕಿ ಶೆಟ್ಟಿ, 'ಮಂಗಳೂರು ಜೈಲಿನಲ್ಲಿ ಮಾಡೂರು ಯೂಸುಫ್ ಹತ್ಯೆ ಮಾಡಿದ್ದು ನನ್ನ ಸಹಚರರು. ಹೊರ ದೇಶಗಳಿಂದ ಹಣ ಸಂಗ್ರಹಿಸಿ ದೇಶದ್ರೋಹಿ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಯೂಸ್‌ಫ್ ಸಹ ಇದೇ ರೀತಿ ಕೃತ್ಯ ಮಾಡುತ್ತಿದ್ದ. ದೇಶದ್ರೋಹಿಗಳು ನಮ್ಮ ವಿರೋಧಿಗಳು' ಎಂದು ಹೇಳಿದ್ದಾನೆ. [ಮಂಗಳೂರು ಜೈಲಿನಲ್ಲಿ ಇಬ್ಬರು ಕೈದಿಗಳ ಹತ್ಯೆ]

'ನಮ್ಮ ತಂಟೆಗೆ ಬಂದರೆ ಯಾರನ್ನೂ ಬಿಡುವುದಿಲ್ಲ. ಯೂಸುಫ್ ಕೊಲೆಗೆ ನಾನು ಹೊಣೆ. ಯೂಸುಫ್ ನನ್ನ ಸ್ನೇಹಿತ ಸುಖಾನಂದ ಶೆಟ್ಟಿಯನ್ನು ಹತ್ಯೆ ಮಾಡಿದ್ದ. ನನ್ನ ಸ್ನೇಹಿತನ ಹತ್ಯೆಗೆ ಪ್ರತೀಕಾರ ಮಾಡಬೇಕೆಂದಿದ್ದೆ. ನನ್ನವರ ತಂಟೆಗೆ ಬಂದರೆ ಒಂದಲ್ಲ, ಹತ್ತಲ್ಲ ಇಪ್ಪತ್ತು ವರ್ಷವಾದರೂ ಬಿಡುವುದಿಲ್ಲ. ಯೂಸುಫ್ ದಾವೂದ್ ಗ್ಯಾಂಗ್‌ನಲ್ಲಿದ್ದ ಆತನನ್ನು ಮುಗಿಸಲು ಸೂಕ್ತ ಕಾಲಕ್ಕಾಗಿ ಕಾದಿದ್ದೆವು' ಎಂದು ತಿಳಿಸಿದ್ದಾನೆ. [ಮಂಗಳೂರು ಜೈಲಿನಲ್ಲಿ ಮಾರಾಮಾರಿ]
'ನಾನು 20 ವರ್ಷ ಛೋಟಾ ರಾಜನ್ ಗ್ಯಾಂಗ್‌ನಲ್ಲಿದ್ದೆ. ಕಳೆದ 5 ವರ್ಷಗಳಿಂದ ನನ್ನದೆ ಆದ ಗ್ಯಾಂಗ್ ಕಟ್ಟಿಕೊಂಡಿದ್ದೇನೆ. ಆತಂಕವಾದ, ದೇಶದ್ರೋಹ ಕೆಲಸ ಮಾಡುವ ಯಾರೇ ಇರಲಿ. ಆದು ಭಟ್ಕಳ್ ಆಗಿರಲಿ ಇನ್ಯಾರೆ ಆಗಿರಲಿ ಅವರ ಮೇಲೆ ನಮ್ಮ ಹುಡುಗರ ಟಾರ್ಗೆಟ್ ಇದ್ದೇ ಇರುತ್ತದೆ' ಎಂದು ವಿಕ್ಕಿ ಶೆಟ್ಟಿ ಹೇಳಿದ್ದಾನೆ.
ಇಬ್ಬರ ಹತ್ಯೆ ನಡೆದಿತ್ತು : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನವೆಂಬರ್ 2ರ ಸೋಮವಾರ ಬೆಳಗ್ಗೆ ನಡೆದ ಮಾರಾಮಾರಿಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ಕುಖ್ಯಾತ ರೌಡಿ ಮಾಡೂರು ಯೂಸೂಬ್ (42) ಹಾಗೂ ವಿಚಾರಣಾಧೀನ ಕೈದಿ ಗಣೇಶ್ ಶೆಟ್ಟಿ (47)ಯನ್ನು ಹತ್ಯೆ ಮಾಡಲಾಗಿತ್ತು.












Click it and Unblock the Notifications