ಈದ್ ಮಿಲಾದ್ ದಿನ ಮೀನು ವ್ಯಾಪಾರ ಮಾಡಿದ್ರೆ ಬಹಿಷ್ಕಾರ: ಆಕ್ರೋಶಕ್ಕೆ ಕಾರಣವಾದ ಬ್ಯಾನರ್
ಮಂಗಳೂರು, ಸೆಪ್ಟೆಂಬರ್ 25: ಈದ್ ಮಿಲಾದ್ ವಿಚಾರದಲ್ಲಿ ನಗರದ ಬಂದರು ಮೀನುಗಾರಿಕಾ ಧಕ್ಕೆಯಲ್ಲಿ ಹಸಿ ಮೀನು ವ್ಯಾಪಾರಸ್ಥರ ಸಂಘದ ಹೆಸರಲ್ಲಿ ಅಳವಡಿಕೆಯಾಗಿರುವ ಬ್ಯಾನರ್ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಈದ್ ಮಿಲಾದ್ ದಿನದಂದು ಅಂದರೆ ಸೆ.28ರ ಮುಂಜಾನೆ 3:45ರಿಂದ ಯಾವುದೇ ಮೀನು ವ್ಯಾಪಾರಿಗಳು ಕೆಲಸ ಮಾಡದೇ ಕಡ್ಡಾಯ ರಜೆ ಹಾಕಬೇಕು. ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಸಂಘದ ವತಿಯಿಂದ ಒಂದು ತಿಂಗಳ ಕಾಲ ನಿಷೇಧ ಹೇರಲಾಗುವುದು ಎಂದು ಬ್ಯಾನರಿನಲ್ಲಿ ಎಚ್ಚರಿಸಲಾಗಿದೆ.

ನಿಯಮ ಉಲ್ಲಂಘಿಸಿದ ಮೀನು ವ್ಯಾಪಾರಿಗಳ ವಿರುದ್ಧ ಒಂದು ತಿಂಗಳ ಕಾಲ ಬಂದರು ಧಕ್ಕೆಯಲ್ಲಿ ವ್ಯಾಪಾರ ಮಾಡದಂತೆ ಹಸಿ ಮೀನು ವ್ಯಾಪಾರಸ್ಥರ ಸಂಘವು ಕಾನೂನು ಕ್ರಮ ತೆಗೆದುಕೊಳ್ಳುಲ್ಲದೆ, ದಂಡನೆಯನ್ನೂ ವಿಧಿಸಲಾಗುತ್ತದೆ. ಇತರ ಯಾವುದೇ ಸಹಾಯ, ಸಹಕಾರದಿಂದ ವಂಚಿತರಾಗಬೇಕಾಗುತ್ತದೆ ಎಂದು ಹಸಿ ಮೀನು ವ್ಯಾಪಾರಸ್ಥರ ಸಂಘದ ಹೆಸರಲ್ಲಿ ಬ್ಯಾನರ್ ಹಾಕಿ ಹಿಂದೂ ವ್ಯಾಪಾರಿಗಳನ್ನು ಎಚ್ಚರಿಸಲಾಗಿದೆ.
ಈ ಬ್ಯಾನರ್ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ನಾಯಕ ಶರಣ್ ಪಂಪ್ ವೆಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಧಕ್ಕೆಯಲ್ಲಿ ಈ ರೀತಿ ದಂಡನೆ ವಿಧಿಸಲು ಇಲ್ಲಿ ಶರೀಯತ್ ಕಾನೂನು ಜಾರಿಯಲ್ಲಿದೆಯಾ?. ಇವರ ಬೆದರಿಕೆಯ ತಂತ್ರಗಳಿಗೆ ಹಿಂದೂ ಮೀನುಗಾರರು ಮಣಿಯಬಾರದು. ನಿಮ್ಮ ಜೊತೆಗೆ ಹಿಂದು ಸಮಾಜ ಇದೆ. ಪೊಲೀಸ್ ಇಲಾಖೆ ತಕ್ಷಣ ಈ ಬ್ಯಾನರನ್ನು ತೆರವು ಮಾಡಬೇಕೆಂದು' ಆಗ್ರಹಿಸಿದ್ದಾರೆ.

ಮಂಗಳೂರು ಧಕ್ಕೆ ಹಸಿಮೀನು ಮಾರಾಟಗಾರರ ಮತ್ತು ಕಮಿಷನ್ ಏಜೆಂಟರ ಸಂಘದ ಅಧ್ಯಕ್ಷ ಕೆ.ಅಶ್ರಫ್ ಸ್ಪಷ್ಟನೆ ನೀಡಿ, 'ಮಂಗಳೂರು ಧಕ್ಕೆಯಲ್ಲಿ ಹಸಿ ಮೀನು ವ್ಯಾಪಾರಸ್ಥರ ಸಂಘವು ತಮ್ಮ ಸದಸ್ಯರು ಆಚರಿಸಿಕೊಂಡು ಬರುತ್ತಿರುವ ಧಾರ್ಮಿಕ ಹಬ್ಬಗಳಂದು ವ್ಯವಹಾರಕ್ಕೆ ಕಡ್ಡಾಯ ರಜೆ ಹೊಂದುವ ಪೂರ್ವ ನಿರ್ಧರಿತ ಪದ್ಧತಿಯಂತೆ ಈದ್ ಮಿಲಾದ್ ರಂದು ಮುಸ್ಲಿಮರು ಮತ್ತು ಇತರ ಧರ್ಮ ಭಾಂದವರು ಕಡ್ಡಾಯ ರಜೆ ಪಾಲಿಸುವ ಬ್ಯಾನರ್ ಅಳವಡಿಸಲಾಗಿರುತ್ತದೆ'.
'ಅದೇ ರೀತಿಯಲ್ಲಿ ಇತರ ಹಬ್ಬಗಳಾದ ಬಾರ್ಕೂರು ಪೂಜೆ, ಉಚ್ಚಿಲ ಪೂಜೆ, ಗಣೇಶ ಚತುರ್ಥಿ, ಈದ್ ಉಲ್ ಫಿತರ್, ಬಕ್ರೀದ್, ಈದ್ ಮಿಲಾದ್, ಗುಡ್ ಫ್ರೈಡೇ ಮತ್ತು ಕ್ರಿಸ್ಮಸ್ ಹಬ್ಬಗಳಂದೂ ಸಂಘಗಳ ನಿರ್ಣಯದಂತೆ ಮಾರಾಟಗಾರರು ಕಡ್ಡಾಯ ರಜೆ ಘೋಷಿಸಿ ಮೀನುಗಾರಿಕಾ ಮಾರಾಟ ಚಟುವಟಿಕೆ ಸ್ಥಗಿತ ಗೊಳಿಸಲಾಗುತ್ತದೆ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಘದ ಈದ್ ಮಿಲಾದ್ ರಜೆಯ ಬಗ್ಗೆ ಕೆಲವರು ತಪ್ಪುಗ್ರಹಿಕೆಯ ಪ್ರಚೋದನಾತ್ಮಕ ಮಾಹಿತಿ ಹಂಚುತ್ತಿದ್ದಾರೆ. ಇಂತಹ ತಪ್ಪು ಮಾಹಿತಿಗಳಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದು' ಎಂದು ವಿನಂತಿಸಿದ್ದಾರೆ.












Click it and Unblock the Notifications