ನೈತಿಕ ಪೊಲೀಸ್ ಗಿರಿ ವಿರುದ್ಧ ಸ್ಪೆಷಲ್ ಪೊಲೀಸ್ ಟೀಂ: ಹೊಸ ವಿಂಗ್‌ಗೆ ಸ್ವಾಗತ ಕೋರಿದ ಹಿಂದೂ ಸಂಘಟನೆಗಳು!
ಮಂಗಳೂರು, ಜೂನ್ 07: ನೈತಿಕ ಪೊಲೀಸ್ ಗಿರಿಯ ವಿರುದ್ಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಆ್ಯಂಟಿ ಕಮ್ಯುನಲ್ ವಿಂಗ್ ರಚಿಸುವುದಾಗಿ ಹೇಳಿರುವುದನ್ನು ವಿಎಚ್‌ಪಿ ಮುಖಂಡ ಶರಣ್ ಪಂಪ್ ವೆಲ್ ಹಾಗೂ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.
ಈ ವಿಂಗ್‌ನಿಂದ ಇಸ್ಲಾಮಿಕ್ ಜಿಹಾದಿಗಳಿಂದ ಹಿಂದೂ ಸಮಾಜದ ಮೇಲಿನ ದಬ್ಬಾಳಿಕೆ ನಿಲ್ಲಲಿ. ಜೊತೆಗೆ ಇದು ಕರಾವಳಿಯಲ್ಲಿ ಶಾಂತಿ ನೆಲೆಸಲು ಉಪಕಾರಿಯಾಗಬೇಕು ಎಂದು ಇಬ್ಬರೂ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಈ ಹೊಸ ಯೋಜನೆಯ ಬಗ್ಗೆ ಮಾತನಾಡಿದ ವಿಎಚ್‌ಪಿ ಮುಖಂಡ ಶರಣ್ ಪಂಪ್ ವೆಲ್, ಲವ್ ಜಿಹಾದ್‌ನಿಂದ ಪ್ರೀತಿಯ ಬಲೆಗೆ ಬಿದ್ದು, ಮತಾಂತರವಾಗುವ ಹಿಂದೂ ಹೆಣ್ಣು ಮಕ್ಕಳು ಉಳಿಯುವಂತಾಗಬೇಕು. ಜೊತೆಗೆ ಇದೇ ವಿಂಗ್ ಮಾದರಿಯಲ್ಲಿ ಗೋಹತ್ಯೆ, ಅಕ್ರಮ ಗೋಸಾಗಟ ನಿಲ್ಲಿಸಲೂ ಹೊಸ ವಿಂಗ್ ರಚನೆಯಾಗಲಿ.
ಕಮ್ಯುನಲ್ ಅಂದರೆ ಹಿಂದೂ-ಮುಸ್ಲಿಂ ಜಗಳ ಎಂದು ಬಿಂಬಿಸಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಂ ಗಲಾಟೆಯಾಗುತ್ತಿಲ್ಲ. ಮುಸಲ್ಮಾನ ಪುಂಡರಿಂದ ಹಿಂದೂ ಯುವಕರು ಪೆಟ್ಟು ತಿನ್ನುತ್ತಿದ್ದಾರೆ. ಇದರ ಹೊರತಾಗಿ ಯಾವುದೇ ಹಿಂದೂ ಮುಸ್ಲಿಂ ಗಲಾಟೆ ನಡೆಯುತ್ತಿಲ್ಲ ಎಂದರು.
ಇನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ದೇಶ ದ್ರೋಹ, ಸಮಾಜ ದ್ರೋಹ ಕೆಲಸ ಮಾಡುತ್ತಿಲ್ಲ. ಹಿಂದೂ ಸಮಾಜದ ಮೇಲೆ ಅನ್ಯಾಯವಾದಾಗ ಪ್ರತಿಭಟಿಸುತ್ತೇವೆ. ನೈತಿಕ ಪೊಲೀಸ್ ಗಿರಿಯನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಮಾಡುವುದಿಲ್ಲ. ಸಮಾಜಕ್ಕೆ ತೊಂದರೆಯಾದಾಗ ಪ್ರತಿಕ್ರಿಯೆ ನೀಡಿದ್ದೇವೆ. ಗೃಹ ಸಚಿವರ ತಂಡ ನ್ಯಾಯಯುತವಾಗಿ ನಡೆಯಲಿ ಎಂದು ಆಶಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಈ ವಿಂಗ್ ಅನ್ಯಕೋಮಿನ ಜೋಡಿಗಳ ಸುತ್ತಾಟವನ್ನು ನಿಲ್ಲಿಸಬೇಕು. ತಿರುಗಾಡಲು ಬಿಟ್ಟು ಲವ್ ಜಿಹಾದ್‌ಗೆ ಅನುವು ಮಾಡಿಕೊಡಬಾರದು. ತಂಗಿ ಅಥವಾ ಅಕ್ಕ ಅಡ್ಡದಾರಿ ಹಿಡಿದಾಗ ಅಣ್ಣ-ತಮ್ಮನಾದವರು ಸರಿಯಾದ ದಾರಿಗೆ ತರುವುದು ಸಹಜ.
ಅದೇ ಕೆಲಸವನ್ನು ಹಿಂದೂ ಸಂಘಟನೆ ಯುವಕರು ಮಾಡುತ್ತಿದ್ದಾರೆ. ಅದನ್ನು ನೈತಿಕ ಪೊಲೀಸ್ ಗಿರಿ ಎಂದು ಹೇಳಲಾಗದು. ಆದರೆ ಹಿಂದೂ ಹುಡುಗಿ ಸ್ವೇಚಾಚ್ಚಾರದಲ್ಲಿ ತೊಡಗಿರುವುದನ್ನು ಪ್ರೋತ್ಸಾಹಿಸುವುದನ್ನು ಮಾಡಿದ್ದಲ್ಲಿ ಮುಂದೆ ಸರಕಾರಕ್ಕೆ ಇದನ್ನು ನಿಭಾಯಿದೋದೇ ಕಷ್ಟವಾದೀತು ಎಂದು ಹೇಳಿದರು.
ಇನ್ನು ಬಜರಂಗದಳ ಮುಖಂಡ ಪುನೀತ್ ಅತ್ತಾವರ ಕೂಡಾ ಗೃಹ ಸಚಿವರ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಈ ಪೊಲೀಸ್ ತಂಡದಿಂದ ಹೆಣ್ಣು ಮಕ್ಕಳ ರಕ್ಷಣೆಯಾಗಲಿ. ಜಿಹಾದ್‌ನ ಬಲೆಗೆ ಬಿಳುವುದು ತಪ್ಪಲಿ ಎಂದು ಹೇಳಿದ್ದಾರೆ.












Click it and Unblock the Notifications