ಈ ಬಾರಿಯ ಮಂಗಳೂರು ದಸರಾ ಉದ್ಘಾಟಿಸಲಿದ್ದಾರೆ ಸಿಎಂ ಕುಮಾರಸ್ವಾಮಿ
ಮಂಗಳೂರು, ಅಕ್ಟೋಬರ್ 05: ಮಂಗಳೂರಿನ ಶ್ರೀಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರದಲ್ಲಿ ನಡೆಯುವ ಮಂಗಳೂರು ದಸರಾವನ್ನು ಈ ಬಾರಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಉದ್ಘಾಟಿಸಲಿದ್ದಾರೆ.
ಮಂಗಳೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುವ ವೈಭವದ ಮಂಗಳೂರು ದಸರಾ ಮಹೋತ್ಸವ ಕಾರ್ಯಕ್ರಮವನ್ನು ಅಕ್ಟೋಬರ್ 14ರಂದು ಸಂಜೆ 6 ಗಂಟೆಗೆ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.
ಅಕ್ಟೋಬರ್ 10ರಂದು ಕುದ್ರೋಳಿ ಕ್ಷೇತ್ರದಲ್ಲಿ ದರ್ಬಾರು ಮಂಟಪದಲ್ಲಿ ಗಣಪತಿ, ನವದುರ್ಗೆಯರು, ಶಾರದಾ ಮಾತೆ ಸೇರದಂತೆ ನವ ದುರ್ಗೆಯರ ಪ್ರತಿಷ್ಠಾಪನೆಯ ಮೂಲಕ ನವರಾತ್ರಿ ಮಹೋತ್ಸವ ಆರಂಭವಾಗಲಿದೆ ಎಂದು ತಿಳಿಸಿದರು.

ದಸರಾ ಮಹೋತ್ಸವ ಅಂಗವಾಗಿ ಪ್ರತಿನಿತ್ಯ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಗರದ ಪ್ರಮುಖ ರಾಜರಸ್ತೆಗಳಿಗೆ ವಿದ್ಯುದ್ದೀಪಾಲಂಕಾರ ನಡೆಯುತ್ತಿದೆ. ಸುಣ್ಣ ಬಣ್ಣ ಬಳಿಯುವ ಕೆಲಸವನ್ನು ಮಂಗಳೂರು ಮಹಾನಗರ ಪಾಲಿಕೆ ನಡೆಸುತ್ತಿದೆ.
ನವರಾತ್ರಿಯ ಕೊನೆಯದಿನ ಅಕ್ಟೋಬರ್ 19ರಂದು ವೈಭವದ ಶೋಭಾಯಾತ್ರೆ ನಡೆಯಲಿದ್ದು, ನವದುರ್ಗೆಯರು ಸೇರಿದಂತೆ ಈ ಬಾರಿ 70ಕ್ಕೂ ಅಧಿಕ ಟ್ಯಾಬ್ಲೋಗಳು, 50ಕ್ಕೂ ಅಧಿಕ ಕಲಾತಂಡಗಳು ಭಾಗವಹಿಸಲಿವೆ.

ದಸರಾ ಉತ್ಸವಕ್ಕೆ ಆಗಮಿಸುವ ಗಣ್ಯರ ಅತಿಥಿ ಹೆಸರು ಉಲ್ಲೇಖಿಸುವ ಸಂದರ್ಭದಲ್ಲಿ ಮಾಜಿ ಶಾಸಕ ಜೆ ಆರ್ ಲೋಬೋ ಅವರ ಹೆಸರನ್ನು ಪದ್ಮರಾಜ್ ಉಲ್ಲೇಖಿಸದಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ಧನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಅಂತ ಕರೆಸಿಕೊಂಡ ತಕ್ಷಣ ಅವರು ಮೂಲೆಗುಂಪು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಅಧಿಕಾರದಲ್ಲಿದ್ದಾಗ ಅವರಿಗೆ ಸಿಗುವ ಗೌರವ ಅಧಿಕಾರ ಹೋದ ಮೇಲೆ ಸಿಗೋದೇ ಇಲ್ಲ. ಆದರೆ ಜೆಆರ್ ಲೋಬೋ ಅವರಿಗೆ ನೀಡುವ ಗೌರವ ನೀಡಲೇಬೇಕು ಎಂದು ಕಿವಿಮಾತು ಹೇಳಿದರು












Click it and Unblock the Notifications