• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಧಾನಿ ನರೇಂದ್ರ ಮೋದಿ ನನ್ನ ಕೈ ಮುಟ್ಟಿದರು; ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 8: ದಕ್ಷಿಣ ಕನ್ನಡದ ಅಕ್ಷರಸಂತ ಹರೇಕಳ ಹಾಜಬ್ಬರಿಗೆ ದೇಶದ ಅತ್ಯುನ್ನತ ನಾಲ್ಕನೇ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ.

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ರವರು ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಬರಿಗಾಲಿನಲ್ಲಿಯೇ ಪ್ರಶಸ್ತಿ ಸ್ವೀಕರಿಸುವ ಮೂಲಕ ಹಾಜಬ್ಬ, ತನ್ನ ವ್ಯಕ್ತಿತ್ವವನ್ನು ಮತ್ತೆ ದೇಶಕ್ಕೆ ಪರಿಚಯಿಸಿದ್ದಾರೆ.

ಬರಿಗಾಲಿನಲ್ಲೇ ಬಂದು 'ಪದ್ಮಶ್ರೀ' ಸ್ವೀಕರಿಸಿದ ಅಕ್ಷರಸಂತ ಹರೇಕಳ ಹಾಜಬ್ಬಬರಿಗಾಲಿನಲ್ಲೇ ಬಂದು 'ಪದ್ಮಶ್ರೀ' ಸ್ವೀಕರಿಸಿದ ಅಕ್ಷರಸಂತ ಹರೇಕಳ ಹಾಜಬ್ಬ

ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪದ್ಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಹಾಜಬ್ಬ ತನ್ನ ನಿಜಗುಣವನ್ನು ಪ್ರದರ್ಶಿಸಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್‌ರವರಿಂದ ಪ್ರಶಸ್ತಿ ಸ್ವೀಕಾರ ಮಾಡುವ ವೇಳೆ ಹಾಜಬ್ಬ ಎಂದಿನಂತೆ ದಿರಿಸು ಧರಿಸಿದ್ದರು.

ಬಿಳಿ ಅಂಗಿ, ಬಿಳಿ ಪಂಚೆ ಧರಿಸಿದ ಹಾಜಬ್ಬ, ಚಪ್ಪಲಿ ಧರಿಸದೇ ಪದ್ಮಶ್ರೀ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ. ಮುಗ್ಧ ಮನಸ್ಸಿನ ಹಾಜಬ್ಬ, ಭಯ ಮಿಶ್ರಿತ ಭಾವನೆಯಿಂದಲೇ ರಾಷ್ಟ್ರಪತಿ ರಾಮನಾಥ ಕೋವಿಂದ್‌ರಿಂದ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ. ರಾಷ್ಟ್ರಪತಿಯವರಿಗೆ ಕೈ ಮುಗಿಯುದರಲ್ಲೇ ತಲ್ಲೀನರಾಗಿದ್ದ ಹಾಜಬ್ಬರನ್ನು ರಾಷ್ಟ್ರಪತಿವರು ಕ್ಯಾಮೆರಾ ನೋಡುವಂತೆ ಸೂಚಿಸಿದರೂ, ಹಾಜಬ್ಬ ಮಾತ್ರ ಕೈ ಮುಗಿದು ವಂದನೆ ಸಲ್ಲಿಸಿದ್ದಾರೆ.

ಇದಕ್ಕೂ ಮೊದಲು ಹಾಜಬ್ಬರು ಪ್ರಶಸ್ತಿ ಸ್ವೀಕರಿಸಲು ಬಂದ ಹಾಜಬ್ಬರ ಹಾವಭಾವ, ವೇಷಭೂಷಣವನ್ನು ರಾಷ್ಟ್ರಪತಿಯವರು ತದೇಕಚಿತ್ತದಿಂದ ಗಮನಿಸಿದ್ದಾರೆ. ಪ್ರಶಸ್ತಿ ಸ್ವೀಕಾರದ ಬಳಿಕ ಹಾಜಬ್ಬರ ಬಗ್ಗೆ ರಾಷ್ಟ್ರಪತಿ ತಮ್ಮ ಪೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಂಗಳೂರಿನಲ್ಲಿ ಕಿತ್ತಳೆ ಹಣ್ಣನ್ನು ಮಾರಿ, ಅದರ ಹಣದಲ್ಲಿ ತನ್ನ ಗ್ರಾಮದಲ್ಲಿ ಶಾಲೆ ಕಟ್ಟಿಸಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಪೋಸ್ಟ್ ಮಾಡಿದ್ದಾರೆ.

Harekala Hajabba Reaction After Receiving Padma Shri Award

ಹರೇಕಳ ಹಾಜಬ್ಬರು ಪ್ರತಿಕ್ರಿಯೆ
ಇನ್ನು ಪದ್ಮಶ್ರೀ ಸ್ವೀಕಾರ ಮಾಡಿದ ಬಳಿಕ ಹರೇಕಳ ಹಾಜಬ್ಬರು ಪ್ರತಿಕ್ರಿಯೆ ನೀಡಿದ್ದು, "ಜನಸಾಮಾನ್ಯನಾದ ನನಗೆ ದೇಶದ ಅತ್ಯುನ್ನತ ನಾಲ್ಕನೇ ನಾಗರಿಕ ಪ್ರಶಸ್ತಿ ಸಿಕ್ಕಿದ್ದು, ತುಂಬಾ ಖುಷಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನನ್ನ ಕೈ ಮುಟ್ಟಿದರು. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೂ ನನ್ನನ್ನು ಸ್ಪರ್ಶ ಮಾಡಿದರು. ಈ ಪ್ರಶಸ್ತಿಗೆ ನನ್ನನ್ನು ಗುರುತಿಸಿದ ಸರ್ಕಾರ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಯು.ಟಿ. ಖಾದರ್ ಹಾಗೂ ಮಾಧ್ಯಮ ಮಿತ್ರರಿಗೆ ಧನ್ಯವಾದ ಸಲ್ಲಿಸುತ್ತೇನೆ," ಅಂತಾ ಹೇಳಿದ್ದಾರೆ. ಅಲ್ಲದೇ ತನ್ನ ಮುಂದಿನ ಕನಸನ್ನು ಬಿಚ್ಚಿಟ್ಟ ಹಾಜಬ್ಬ, ಮುಂದೆ ಹರೇಕಳ ಗ್ರಾಮದಲ್ಲಿ ಪಿಯುಸಿ ಕಾಲೇಜು ನಿರ್ಮಿಸುವ ಆಸೆಯನ್ನು ತೆರೆದಿಟ್ಟಿದ್ದಾರೆ.

ಕರಾವಳಿಯಲ್ಲಿ ಸಂಭ್ರಮ ಮನೆ ಮಾಡಿದೆ
ಇನ್ನು ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ನೀಡುತ್ತಿದ್ದಂತೆಯೇ ಇಡೀ ಕರಾವಳಿಯಲ್ಲಿ ಸಂಭ್ರಮ ಮನೆ ಮಾಡಿದೆ. ಮಂಗಳೂರಿನ ಜನಸಾಮಾನ್ಯನಿಗೆ ಅತ್ಯುನ್ನತ ಪ್ರಶಸ್ತಿ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು ಹಾಜಬ್ಬರು ನವದೆಹಲಿಯಲ್ಲಿ ಪ್ರಶಸ್ತಿ ಸ್ವೀಕಾರ ಮಾಡುತ್ತಿರುವುದರ ನೇರ ದೃಶ್ಯಗಳನ್ನು ಹಾಜಬ್ಬರ ಶಾಲೆಯಲ್ಲಿ ಮಕ್ಕಳಿಗೆ ತೋರಿಸಲಾಯಿತು. ಹಾಜಬ್ಬರು ಪ್ರಶಸ್ತಿ ಸ್ವೀಕಾರ ಮಾಡುತ್ತಿದ್ದಂತೆಯೇ ಮಕ್ಕಳ ಕರತಾಡನ ಮುಗಿಲು ಮುಟ್ಟಿದೆ.

ಒಟ್ಟಿನಲ್ಲಿ ಈವರೆಗೆ ಕೇವಲ ಪ್ರತಿಷ್ಠಿತರಿಗೆ, ಸೂಟು- ಬೂಟುಧಾರಿಗಳಿಗೆ ಸಿಗುವ ಪ್ರಶಸ್ತಿ ಎಂದೇ ಹೆಸರುಗಳಿಸಿದ್ದ ಪದ್ಮಶ್ರೀ ಕಳೆದ ಕೆಲ ವರ್ಷಗಳಿಂದ ಜನಸಾಮಾನ್ಯ ಸಾಧಕರಿಗೂ ಸಿಗುತ್ತಿರುವುದು ಖುಷಿಯ ಸಂಗತಿಯಾಗಿದೆ. ಪದ್ಮಶ್ರೀ ಪ್ರಶಸ್ತಿ ಸಿಗುವಾಗ ಕೇವಲ ಪುರಸ್ಕೃತರು ಮತ್ತು ಅವರ ಅನುಯಾಯಿಗಳು ಸಂಭ್ರಮಪಟ್ಟರೇ, ಹರೇಕಳ ಹಾಜಬ್ಬರ ವಿಚಾರದಲ್ಲಿ ಮಾತ್ರ ಇಡೀ ಸಮಾಜ ಖುಷಿ ಪಟ್ಟಿರುವುದು ವಿಶೇಷತೆಯಾಗಿದೆ.

English summary
Mangaluru: Harekala Hajabba reaction after receiving Padma Shri Award from President of India in New Delhi on Monday (November 8).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion