ಹಸಿರು ಕಟ್ಟಡ ನೀತಿಯಡಿ ಮಳೆ ನೀರು ಕೊಯ್ಲು ನಿಯಮ ಜಾರಿ- ಯು.ಟಿ. ಖಾದರ್
ಮಂಗಳೂರು ಜೂನ್ 25: ರಾಜ್ಯದಲ್ಲಿ ಹಸಿರು ಕಟ್ಟಡ ನೀತಿಗೆ ಸಂಬಂಧಿಸಿದಂತೆ ಕರಡು ನೀತಿ ಪ್ರಕಟಿಸಲಾಗಿದ್ದು, ಶೀಘ್ರವೇ ನೂತನ ನೀತಿ ಜಾರಿಗೆ ಬರಲಿದೆ ಎಂದು ನಗರಾಭಿವೃದ್ಧಿ ಖಾತೆ ಸಚಿವ ಯು.ಟಿ.ಖಾದರ್ ತಿಳಿಸಿದರು.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ನಗರ ಪ್ರದೇಶಗಳಲ್ಲಿ 'ಮಳೆ ನೀರು ಕೊಯ್ಲು' ವ್ಯವಸ್ಥೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಸಿರು ಕಟ್ಟಡ ನೀತಿ ಜಾರಿಗೆ ಬರಲಿದೆ' ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಹೊಸ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡುವಾಗ ಕಡ್ಡಾಯವಾಗಿ ಹಸಿರು ಕಟ್ಟಡ ನೀತಿ ಅನುಸರಿಸಬೇಕು. ಈ ಸಂಬಂಧ ಕರಡು ನೀತಿ ಪ್ರಕಟಿಸಲಾಗಿದೆ ಎಂದರು.
ನೂತನ ನೀತಿಯನ್ವಯ ಹೊಸ ಮನೆ ಅಥವಾ ಕಟ್ಟಡ ನಿರ್ಮಿಸುವಾಗ ಮಳೆ ನೀರು ಕೊಯ್ಲು ವ್ಯವಸ್ಥೆ ಅನುಷ್ಠಾನಗೊಳ್ಳಬೇಕು. ಕಸದ ನಿರ್ವಹಣೆಗೆ ಹೊಸ ಸೂತ್ರ ಜಾರಿಗೊಳಿಸಿ ಸ್ವಚ್ಛತೆಗೆ ವಿಶೇಷ ಆದ್ಯತೆ ಹಾಗೂ ಸೋಲಾರ್ ಅಳವಡಿಕೆಗೆ ಈ ನೀತಿಯಡಿಯಲ್ಲಿ ಮೊದಲ ಪ್ರಾಶಸ್ತ್ಯ ನೀಡಲಾಗುವುದು ಎಂದು ಅವರು ತಿಳಿಸಿದರು. ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆಯೂ ಕಾನೂನು ಜಾರಿಗೆ ತರಲಾಗುವುದು ಎಂದು ಅವರು ಎಚ್ಚರಿಸಿದರು.

ಮನೆ ಕಟ್ಟುವ ಸಮಯದಲ್ಲಿ ಪರವಾನಗಿ ಸಿಗಬೇಕಾದರೆ ಮಳೆ ನೀರು ಕೊಯ್ಲು ಕಡ್ಡಾಯವಾಗಿರಬೇಕು. ಈ ಬಗ್ಗೆ ಸ್ಥಳೀಯ ನುರಿತರಿಂದ ಅನುಮತಿ ಪಡೆಯುವ ಕ್ರಮವನ್ನು ನೀತಿಯಲ್ಲಿ ಸೇರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.












Click it and Unblock the Notifications