ಲಷ್ಕರ್ ಪರ ಬರಹ; ಆರೋಪಿಗಳ ಬಂಧನಕ್ಕೆ ತಂಡ ರಚನೆ
ಮಂಗಳೂರು, ನವೆಂಬರ್ 27: ಮಂಗಳೂರಿನ ಬಿಜೈ ರಸ್ತೆಯ ಗೋಡೆಯ ಮೇಲೆ ಭಯೋತ್ಪಾದಕ ಸಂಘಟನೆ ಪರವಾಗಿ ಬರಹ ಬರೆಯಲಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ.
ಶುಕ್ರವಾರ ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಘಟನೆಯ ತನಿಖೆಗೆ ಪ್ರತ್ಯೇಕ ತಂಡ ರಚನೆ ಮಾಡಲಾಗಿದ್ದು, ತ್ವರಿತವಾಗಿ ಕಾರ್ಯಾಚರಣೆ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.
"ಕದ್ರಿ ಪೊಲೀಸ್ ಠಾಣೆ ಸಮೀಪ ಈ ಬರಹ ಶುಕ್ರವಾರ ಕಂಡು ಬಂದಿದೆ. ಗುರುವಾರ ತಡ ರಾತ್ರಿಯಿಂದ ಶುಕ್ರವಾರ ನಸುಕಿನ ಜಾವದೊಳಗೆ ದುಷ್ಕರ್ಮಿಗಳು ಇದನ್ನು ಬರೆದಿರುವ ಸಾಧ್ಯತೆ ಇದೆ" ಎಂದು ತಿಳಿಸಿದ್ದಾರೆ.

"ಮಂಗಳೂರಿನಲ್ಲಿ ಉಗ್ರರಪರವಾದ ಬರಹ ಇದೇ ಮೊದಲ ಬಾರಿಗೆ ಕಂಡು ಬಂದಿದೆ. ಈ ಹಿಂದೆ ನಕ್ಸಲ್ ಪರ ಬರಹ ಪತ್ತೆಯಾಗಿದ್ದವು. ಆದರೆ, ಯಾರು ಬರೆದವರು ಎಂಬುದು ಪತ್ತೆಯಾಗಿರಲಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ" ಎಂದು ವಿಕಾಸ್ ಕುಮಾರ್ ಹೇಳಿದರು.
"ನಮ್ಮನ್ನು ವಿಧ್ವಂಸಕ ಕೃತ್ಯ ನಡೆಸಲು ಉತ್ತೇಜಿಸಲು ಬರಬೇಡಿ. ಲಷ್ಕರ್ ಎ ತೋಯ್ಬಾ ಮತ್ತು ತಾಲಿಬಾನ್‌ಗಳಿಗೆ ಸಂಘಿಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂಬುದು ತಿಳಿದಿದೆ. ಲಷ್ಕರ್ ಜಿಂದಾಬಾದ್" ಎಂಬ ಬರಹ ಗೋಡೆಯ ಮೇಲೆ ಪತ್ತೆಯಾಗಿದ್ದು, ಪೊಲೀಸರು ಅದನ್ನು ಅಳಿಸಿದ್ದಾರೆ.
ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಪ್ರಕರಣದ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟಿದ್ದಾರೆ.











Click it and Unblock the Notifications