ಸರ್ಕಾರಿ ಬಸ್‌ಗಳ ಕೊರತೆ: ಖಾಸಗಿ ಬಸ್‌ಗಳ ಫುಟ್ ಬೋರ್ಡ್‌ನಲ್ಲಿ ನಿಂತು ವಿದ್ಯಾರ್ಥಿಗಳ ಅಪಾಯಕಾರಿ ಸಂಚಾರ
ಮಂಗಳೂರು, ಡಿಸೆಂಬರ್ 6: ಮಂಗಳೂರಿನ ಹಲವು ಪ್ರತಿಷ್ಠಿತ ಕಾಲೇಜುಗಳಲ್ಲಿ ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳು ಕೂಡ ಉತ್ತಮ ಶಿಕ್ಷಣ ಪಡೆಯ ಬೇಕು ಎಂದು ಮಂಗಳೂರಿನ ಕಾಲೇಜುಗಳಿಗೆ ಆಗಮಿಸುತ್ತಾರೆ. ಆದರೆ ನಗರದ ಖಾಸಗಿ ಬಸ್ ಲಾಭಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಜೀವನ ಮಾತ್ರ ಅಪಾಯದಲ್ಲಿದೆ.
ಬಂಟ್ವಾಳದ ಬಿ.ಸಿ ರೋಡ್‌ನಿಂದ ಮಂಗಳೂರಿಗೆ ಬರುವ ಬಹುತೇಕ ವಿದ್ಯಾರ್ಥಿಗಳು ಅಪಾಯದಲ್ಲೇ ಬಸ್‌ನಲ್ಲಿ ಸಂಚರಿಸುತ್ತಾರೆ. ಪ್ರತಿ ದಿನ ಬಸ್‌ನ ಫುಟ್ ಬೋರ್ಡ್‌ನಲ್ಲಿ ನೇತಾಡಿಕೊಂಡು ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಬೇರೆ ಬೇರೆ ಭಾಗಗಳಿಂದ ಮಂಗಳೂರಿಗೆ ಬರುವ ಖಾಸಗಿ ಬಸ್‌ಗಳಲ್ಲಿ ಜೀವವನ್ನು ಪಣಕ್ಕಿಟ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಮುಂದುವರೆದ ಮಳೆ ಆರ್ಭಟ: ಬಂಟ್ವಾಳ ತಾಲೂಕಿನಲ್ಲಿ ಮನೆ ಮೇಲೆ ಕುಸಿದ ಗುಡ್ಡ, ಇಬ್ಬರ ರಕ್ಷಣೆ
ಖಾಸಗಿ ಬಸ್‌ಗಳಿಗೆ ಸರಿಸಮನಾಗಿ ಹಾಗೂ ಸಮಯಕ್ಕೆ ಸರಿಯಾಗಿ ಸರ್ಕಾರಿ ಬಸ್‌ಗಳು ಇರದ ಕಾರಣ ವಿದ್ಯಾರ್ಥಿಗಳು ಕಷ್ಟ ಅನುಭವಿಸುತ್ತಿದ್ದಾರೆ. ಖಾಸಗಿ ಲಾಭಿಗೆ ಮಣಿದು ಸರ್ಕಾರ ಹೆಚ್ಚುವರಿ ಬಸ್‌ಗಳನ್ನು ಈ ಭಾಗದಲ್ಲಿ ಬಿಡುತ್ತಿಲ್ಲ ಎನ್ನುವ ಆರೋಪವಿದ್ದು, ಪ್ರತಿ ನಿತ್ಯ ಖಾಸಗಿ ಬಸ್‌ನಲ್ಲಿ ಫುಟ್ ಬೋರ್ಡ್‌ನಲ್ಲಿ ನಿಂತು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದಾರೆ.
ಬಸ್‌ನ ಮಿತಿ ಮೀರಿ ವಿದ್ಯಾರ್ಥಿಗಳನ್ನು ತುಂಬಿಕೊಂಡು ಹೆದ್ದಾರಿಯಲ್ಲಿ ಅಪಾಯಕಾರಿ ವೇಗದಲ್ಲಿ ಖಾಸಗಿ ಬಸ್‌ಗಳು ಸಂಚರಿಸುವ ಬಗ್ಗೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ವಿಟ್ಲ, ಪುತ್ತೂರು ಭಾಗಗಳಿಂದ ಮಂಗಳೂರಿಗೆ ಬರುವ ಖಾಸಗಿ ಬಸ್‌ಗಳು ಮಿತಿ ಮೀರಿದ ವೇಗ ಹೊಂದಿದೆ. ಬಸ್ ಕೊರತೆಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿಯೂ ನಷ್ಟವಾಗುತ್ತಿದ್ದು, 9 ಗಂಟೆಯ ತರಗತಿಗೆ ಹಾಜರಾಗಬೇಕಾದ ಹಿನ್ನಲೆಯಲ್ಲಿ ಅಪಾಯದಲ್ಲಿ ಬಸ್‌ನಲ್ಲಿ ಬರುವುದು ಅನಿವಾರ್ಯವಾಗಿದೆ. ತರಗತಿಗಳಿಗೆ ವಿದ್ಯಾರ್ಥಿಗಳು ತಡವಾಗಿ ಆಗಮಿಸುತ್ತಿದ್ದು, ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ಗಮನ ಹರಿಸಬೇಕು ಎಂದು ಪ್ರಾಧ್ಯಾಪಕಿ ಅಶ್ವಿನಿ ನಾಯಕ್ ಒತ್ತಾಯಿಸಿದ್ದಾರೆ.

ಈ ಹಿಂದೆಯೂ ಹೆಚ್ಚುವರಿ ಸರ್ಕಾರಿ ಬಸ್‌ಗಳಿಗಾಗಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಖಾಸಗಿ ಲಾಭಿಯಿಂದ ಇನ್ನೂ ಹೆಚ್ಚುವರಿ ಬಸ್‌ನ ಪ್ರಸ್ತಾಪವನ್ನೇ ಅಧಿಕಾರಿಗಳು, ಜನಪ್ರತಿನಿಧಿಗಳು ಮಾಡಿಲ್ಲ. ವಿದ್ಯಾರ್ಥಿಗಳ ಪ್ರಾಣ ಹೋಗುವ ಮುನ್ನ ಈ ಮಾರ್ಗದಲ್ಲಿ ಬಸ್ ವ್ಯವಸ್ಥೆ ಮಾಡಲಿ ಎಂದು ವಿದ್ಯಾರ್ಥಿ ಸಂಘಟನೆಯ ಮುಖಂಡ ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.