ಗೌರಿ ಲಂಕೇಶ್ ಹತ್ಯೆ, ಸಿಬಿಐ ತನಿಖೆಗೆ ಜನಾರ್ದನ ಪೂಜಾರಿ ಆಗ್ರಹ
ಮಂಗಳೂರು, ಸೆಪ್ಟೆಂಬರ್ 06 : 'ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಒಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಪ್ರಕರಣದ ತನಿಖೆಯನ್ನು ಈ ಕೂಡಲೇ ಸಿಬಿಐಗೆ ವಹಿಸಬೇಕು' ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಒತ್ತಾಯಿಸಿದರು.
ಬುಧವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜನಾರ್ದನ ಪೂಜಾರಿ ಅವರು, 'ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸುತ್ತೇನೆ. ಈ ಕೃತ್ಯ ಒಂದು ದಿನದಲ್ಲಿ ಮಾಡಿದ್ದಲ್ಲ ಇದೊಂದು ಪೂರ್ವ ನಿಯೋಜಿತ ಹತ್ಯೆ' ಎಂದು ಅಭಿಪ್ರಾಯಪಟ್ಟರು. ಈ ಹತ್ಯೆ ಯಾರು ಮಾಡಿದ್ದಾರೆ ಗೊತ್ತಿಲ್ಲ?, ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ದುಃಖದ ಸಂಗತಿಯಾಗಿದೆ' ಎಂದರು.

'ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆ ಇದ್ದರೂ ಮುಖ್ಯಮಂತ್ರಿ ಅವರಿಂದ ಈ ಹೇಳಿಕೆ ನಿರೀಕ್ಷಿಸಿರಲಿಲ್ಲ. ಗೌರಿ ಲಂಕೇಶ್ ಅವರಿಗೆ ಬೆದರಿಕೆ ಇದೆ. ಅವರಿಗೆ ಭದ್ರತೆ ನೀಡಬೇಕೆಂದು ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ಹಾಗೂ ಅವರ ತಾಯಿ ಕೂಡ ಕೇಳಿದ್ದರು' ಎಂದು ಪೂಜಾರಿ ಹೇಳಿದರು.
'ಸರ್ಕಾರ ಗೌರಿ ಲಂಕೇಶ್ ಅವರಿಗೆ ಭದ್ರತೆ ಒದಗಿಸುವ ಬಗ್ಗೆ ನಿರ್ಲಕ್ಷ್ಯ ತೋರಿದೆ. ಚಿಂತಕರಾದ ಪ್ರೊ.ಎಂ.ಎಂ ಕಲಬುರ್ಗಿ, ನರೇಂದ್ರ ದಾಬೋಲ್ಕರ್ ಅವರ ಬಳಿಕ ಗೌರಿ ಲಂಕೇಶ್ ಅವರದ್ದು ಮೂರನೇ ಹತ್ಯೆಯಾಗಿದೆ' ಎಂದು ಪೂಜಾರಿ ವಿಷಾದ ವ್ಯಕ್ತಪಡಿಸಿದರು.
'ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡೆದು ಎರಡು ವರ್ಷ ಕಳೆದಿದೆ. ಆದರೂ ಈವರೆಗೆ ಅಪರಾಧಿಗಳ ಬಂಧನವಾಗಿಲ್ಲ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಈ ಕೂಡಲೇ ಸಿಬಿಐಗೆ ವಹಿಸಿ ತಪ್ಪಿತಸ್ಥರನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕೆಂದು' ಆಗ್ರಹಿಸಿದರು .












Click it and Unblock the Notifications